ಮಡಿಕೇರಿ:
ವಾಲ್ಮೀಕಿ ನಿಗಮ ಹಗರಣ ಮತ್ತು ಮುಡಾ ನಿವೇಶನ ಹಂಚಿಕೆ ಹಗರಣ ಬಹಳ ಗಂಭೀರ ಹಗರಣಗಳಾಗಿದ್ದು ಇದರ ವಿರುದ್ಧ ಶುಕ್ರವಾರ ಮೈಸೂರಿನಲ್ಲಿ ದೊಡ್ಡ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು. ಮಡಿಕೇರಿಯಲ್ಲಿ ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಸರ್ಕಾರ ಆಡಳಿತದಲ್ಲಿ ವಿಫಲ ಆಗಿದೆ. ಇಂಥ ಹಗರಣಗಳು ನಡೆಯುತ್ತಿರುವುದರಿಂದ ಜನರಿಗೆ ತೊಂದರೆ ಆಗಿದೆ.
ಬಡವರಿಗೆ ನಿವೇಶನ ಕೊಡುವ ಉದ್ದೇಶಕ್ಕೆ ಮೈಸೂರು ಸಂಸ್ಥಾನ ಇದ್ದಾಗ ಸ್ಥಾಪನೆಯಾದ ಸಂಸ್ಥೆ ಮುಡಾ. ಆದರೆ ಅದು ಈಗ ಶ್ರೀಮಂತರಿಗೆ ಅನುಕೂಲ ಆಗುವಂಥ ಸಂಸ್ಥೆ ಆಗಿದೆ. ಇಲ್ಲಿ ನಡೆದಿರುವ ಹಗರಣದ ಸಿಬಿಐ ತನಿಖೆ ಆಗಬೇಕು ಎಂದು ಈಗಾಗಲೇ ಒತ್ತಾಯಿಸಲಾಗಿದೆ. ಮುಖ್ಯಮಂತ್ರಿ ಸಿಬಿಐನಿಂದ ಕ್ಲೀನ್ ಚಿಟ್ ಪಡೆದುಕೊಂಡು ತಾವು ಶುದ್ಧಹಸ್ತರು ಎಂದು ತೋರಿಸಲಿ ಎಂದು ಹೇಳಿದರು.