ಜಿಲ್ಲೆ

ಪ್ರತಿಭಟನಾಕಾರರ ಮೇಲಿನ ಪ್ರಕರಣ ಹಿಂಪಡೆಯಲಿ

Gadag - Desk - Tippanna Avadoot

ಸಿದ್ದಾಪುರ: ಜಿಲ್ಲೆಯ ಶಿರೂರು ಗುಡ್ಡ ಕುಸಿತ ದುರಂತದಲ್ಲಿ ಮೃತಪಟ್ಟ ಕುಟುಂಬಕ್ಕೆ ಮತ್ತು ಸಂತ್ರಸ್ತರ ಬಗ್ಗೆ ನ್ಯಾಯಕ್ಕಾಗಿ ಸೆ. 12ರಂದು ಹೊನ್ನಾವರದಲ್ಲಿ ಜಿಲ್ಲಾ ಜನಪರ ಸಂಘಟನೆಗಳ ಒಕ್ಕೂಟ ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಒಕ್ಕೂಟದ ಅಧ್ಯಕ್ಷ ಡಾ. ನಾಗೇಶ ನಾಯ್ಕ ಕಾಗಾಲ ಅವರನ್ನೂ ಒಳಗೊಂಡಂತೆ 8 ಮಂದಿಯ ಮೇಲೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿರುವುದು ಖಂಡನಾರ್ಹವಾದದ್ದು. ಈ ಕೂಡಲೇ ದಾಖಲಿಸಿದ ಪ್ರಕರಣವನ್ನು ಹಿಂಪಡೆಯಬೇಕು ಎಂದು ಜಿಲ್ಲಾ ಜನಪರ ಸಂಘಟನೆಗಳ ಒಕ್ಕೂಟದ ಉಪಾಧ್ಯಕ್ಷ ವಿ.ಎನ್. ನಾಯ್ಕ ಬೇಡ್ಕಣಿ ಆಗ್ರಹಿಸಿದ್ದಾರೆ.


ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ಸೆ.12ರಂದು ಶಾಂತಿಯುತ ಪಾದಯಾತ್ರೆಯೊಂದಿಗೆ ನಡೆದ ಪ್ರತಿಭಟನೆಯ ನಂತರ ತಹಸೀಲ್ದಾರ್ ಹಾಗೂ ಐಆರ್​ಬಿ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಗೆ ಮುಂಚಿತವಾಗಿ ಪೊಲೀಸ್ ಅನುಮತಿ ಕೋರಲಾಗಿತ್ತು. ಯಾವುದೇ ಪ್ರತಿಕ್ರಿಯೆ ನೀಡದೇ ಪ್ರತಿಭಟನೆ ನಡೆಸಿದವರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣ ಹಿಂಪಡೆಯದಿದ್ದರೆ ಜಿಲ್ಲೆಯ ಎಲ್ಲ ಸಂಘಟನೆಗಳು, ಸಾರ್ವಜನಿಕರು ಒಂದಾಗಿ ಪ್ರತಿಭಟಿಸುವುದು ಅನಿವಾರ್ಯ ಎಂದು ಹೇಳಿದರು.


ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕನ್ನೇಶ ಕೋಲಸಿರ್ಸಿ ಮಾತನಾಡಿ, ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಐಆರ್​ಬಿ ಕಂಪನಿ ನಡೆಸುತ್ತಿರುವ ಕಾಮಗಾರಿ ಅವೈಜ್ಞಾನಿಕವಾಗಿ, ಹಲವು ನೂನ್ಯತೆಗಳಿಂದ ಕೂಡಿದೆ. ರಾಜ್ಯ ಸರ್ಕಾರ ಎಚ್ಚರಿಕೆ ಕೊಟ್ಟರೂ ನಿರ್ಲಕ್ಷ ಮಾಡುತ್ತಿದೆ.ಅಲ್ಲದೆ, ಕಾಮಗಾರಿ ಮುಗಿಸದೇ ದುಬಾರಿ ಟೋಲ್ ಶುಲ್ಕ ವಸೂಲಿ ಮಾಡುತ್ತಿದೆ. ಆ ಬಗ್ಗೆ ಧ್ವನಿ ಎತ್ತುತ್ತಿದ್ದರೂ ಐಆರ್​ಬಿ ಕಂಪನಿ ಅದಕ್ಕೆ ಸ್ಪಂದಿಸಿಲ್ಲ ಎಂದರು.
ಸಾಮಾಜಿಕ ಧುರೀಣ ವಸಂತ ನಾಯ್ಕ ಮಾತನಾಡಿ, ಅನುಮತಿ ಪಡೆದು ಶಾಂತಿಯುತವಾಗಿ ಮನವಿ ನೀಡಿದ ನಂತರ ಪ್ರಕರಣ ದಾಖಲಿಸಿದ್ದು ಖಂಡನೀಯ ಎಂದರು.


ವೀರಭದ್ರ ನಾಯ್ಕ, ಸಿ.ಆರ್. ನಾಯ್ಕ, ಸಿ.ಜಿ. ನಾಯ್ಕ, ಲೋಕೇಶ ಹೆಗಡೆ, ರಾಮಕೃಷ್ಣ ನಾಯ್ಕ, ನಾರಾಯಣ ನಾಯ್ಕ ಇತರರಿದ್ದರು.