ಹಾಸನ: ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ನಮ್ಮ ಜಿಲ್ಲೆಗೆ ಏನೂ ಕೊಟ್ಟಿಲ್ಲ ಎನ್ನುವವರು ಆಯವ್ಯಯ ಪ್ರತಿಯನ್ನು ಕೂಲಂಕಷವಾಗಿ ಓದಿ ನಂತರ ಮಾತನಾಡಲಿ ಎಂದು ಪರೋಕ್ಷವಾಗಿ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರಿಗೆ ಸಂಸದ ಶ್ರೇಯಸ್ ಪಟೇಲ್ ತಿರುಗೇಟು ನೀಡಿದರು.
ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಜೆಟ್ ಹೇಗೇ ಇದ್ದರೂ, ಪ್ರತಿಪಕ್ಷಗಳು ಟೀಕೆ ಮಾಡುತ್ತವೆಯೇ ಹೊರತು, ಹೊಗಳುವುದಿಲ್ಲ. ಅವರೂ ಅದೇ ಕೆಲಸ ಮಾಡಿದ್ದಾರೆ. ಆದರೆ ಟೀಕೆ-ಟಿಪ್ಪಣಿ ಮಾಡುವ ಮುನ್ನ ತಿಳಿದು ಮಾತನಾಡಲಿ ಎಂದು ಕುಟುಕಿದರು.
ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಸದ್ಯ 9 ಕೋಟಿ ರೂ. ಕೊಟ್ಟಿದ್ದಾರೆ. ಆಸ್ಪತ್ರೆ ಆರಂಭಕ್ಕೆ ಬೇಕಾದ ಉಪಕರಣ ಖರೀದಿಗೆ 30 ಕೋಟಿ ರೂ. ಬಿಡುಗಡೆಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಇದಕ್ಕೆ ಅನುಮೋದನೆ ಸಿಕ್ಕಿದೆ. ಬೇಲೂರು-ಹಾಸನ ರೈಲ್ವೆ ಯೋಜನೆಗೆ ತನ್ನ ಪಾಲಿನ ಶೇ.50 ಅನುದಾನ ನೀಡಲು ಬಜೆಟ್‌ನಲ್ಲಿ ಒಪ್ಪಿಗೆ ಸೂಚಿಸಲಾಗಿದೆ. ಬೇಲೂರು-ಹಳೇಬೀಡು ದೇವಾಲಯ ವ್ಯಾಪ್ತಿಯಲ್ಲಿ ಪ್ರವಾಸಿಗರಿಗೆ ಮೂಲಭೂತ ಸೌಕರ್ಯಕ್ಕೆ ಹಣ ನಿಗದಿ ಪಡಿಸಲಾಗಿದೆ. ಹಾಸನ ನಗರಸಭೆಯನ್ನು ನಗರಪಾಲಿಕೆಯನ್ನಾಗಿ ಮೇಲ್ದರ್ಜೆಗೇರಿಸಿರುವುದು ನಮ್ಮ ಸರ್ಕಾರ, ಬಜೆಟ್‌ನಲ್ಲಿ ಅದಕ್ಕೆ ಅನುದಾನವನ್ನೂ ನೀಡಿದೆ ಎಂದರು ತಿಳಿಸಿದರು.
ಚನ್ನರಾಯಪಟ್ಟಣದ ದಿಡಗ ಕೆರೆಗೆ ತುಂಬಿಸಲು ಹಾಗೂ ತೋಟಿ ಏತ ನೀರಾವರಿ ಸಾಕಾರಕ್ಕೆ ಅನುದಾನ ಬಿಡುಗಡೆ ಮಾಡಲಾಗಿದೆ. ಕೆ.ಶಿಪ್ ಅಡಿಯಲ್ಲಿ ಶ್ರೀರಂಗಪಟ್ಟಣ, ಕೆ.ಆರ್.ಪೇಟೆ ಮತ್ತು ಚನ್ನರಾಯಪಟ್ಟಣ ಹಾಗೂ ಸಕಲೇಶಪುರದ ದೋಣಿಗಾಲ್, ಮಡಿಕೇರಿ ನಡುವಿನ ರಸ್ತೆ ಅಭಿವದ್ಧಿಗೆ ಹಣ ನೀಡಲಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಆನೆ ದಾಳಿಯಿಂದ ಮೃತಪಟ್ಟವರ ಕುಟುಂಬಕ್ಕೆ ಪರಿಹಾರದ ಮೊತ್ತವನ್ನು 15 ರಿಂದ 20 ಲಕ್ಷ ರೂ.ಗೆ ಹೆಚ್ಚಿಸಿ ನಮ್ಮ ಕೋರಿಕೆಗೆ ಸರ್ಕಾರ ಸ್ಪಂದಿಸಿದೆ. ಭದ್ರಾ ಅರಣ್ಯ ಹುಲಿ ಸಂರಕ್ಷಿತಾ ಪ್ರದೇಶದಲ್ಲಿ ಎಲಿಫೆಂಟ್ ಸಾಫ್ಟ್ ರಿಲೀಫ್ ಸೆಂಟರ್‌ಗೆ ಪ್ರಾಥಮಿಕವಾಗಿ 17 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಅಲ್ಲಿಗೆ ನಾವು ಇಟ್ಟಿದ್ದ ಶೇ.90 ಬೇಡಿಕೆ ಬಜೆಟ್‌ನಲ್ಲಿ ಈಡೇರಿದೆ ಎಂದು ಅಂಕಿ ಅಂಶ ನೀಡಿದರು.
ಇದು ಹಲಾಲ್ ಬಜೆಟ್ ಆರೋಪಕ್ಕೆ ಮುಸ್ಲಿಂರಿಗೆ ಹೆಚ್ಚು ಹಣ ನೀಡಿದರೆ ತಪ್ಪೇನು ಎಂದು ಸಮರ್ಥಿಸಿಕೊಂಡರು. ನೂತನ ಡಿಸಿ ಕಚೇರಿ ಕಟ್ಟಡ ಕಾಮಗಾರಿ ಶೇ.40 ರಷ್ಟು ಬಾಕಿ ಇದ್ದು, ಒಂದೂವರೆ ವರ್ಷದಲ್ಲಿ ಕಾಮಗಾರಿ ಮುಗಿಸಲಾಗುವುದು, ತಾಲೂಕು ಕಚೇರಿ ಕಟ್ಟಡವೂ 2 ತಿಂಗಳಲ್ಲಿ ಮುಗಿಯಲಿದೆ ಎಂದರು.
ಜಿಲ್ಲಾಡಳಿತದ ಅಧಿಕಾರಿಗಳೂ ಉತ್ತಮ ಕೆಲಸ ಮಾಡುತ್ತಿದ್ದು, ಪೋಡಿ ವಿಲೇವಾರಿಯಲ್ಲಿ 14,896 ಪ್ರಕರಣ ಇತ್ಯರ್ಥಪಡಿಸಿ ರಾಜ್ಯದಲ್ಲಿ ಹಾಸನ ಪ್ರಥಮ ಸ್ಥಾನದಲ್ಲಿದೆ. ಹಾಗೆಯೇ ಪೊಲೀಸ್ ಇಲಾಖೆಯೂ ಸಹ ನಾಗರಿಕರ ಹಿತ ಕಾಯುವುದು, ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಉತ್ತಮ ಕೆಲಸ ಮಾಡುತ್ತಿದೆ. ಆದರೂ ಪೊಲೀಸರು 7 ಗಂಟೆಗೆ ಎಣ್ಣೆ ಹೊಡೆಯುತ್ತಾರೆ ಎಂದು ಇಲ್ಲ ಸಲ್ಲದ ಆರೋಪ ಮಾಡುವುದು ಸರಿಯಲ್ಲ. ಪುರಾವೆ ಇದ್ದರೆ ಕೊಡಲಿ, ತನಿಖೆ ಮಾಡಿ ಕ್ರಮ ಜರುಗಿಸೋಣ, ಇವರ ಕಾಲದಲ್ಲಿ ಏನೆಲ್ಲಾ ನಡೆದಿದೆ ಎಂಬುದು ಜನರಿಗೆ ಗೊತ್ತಿದೆ ಎಂದು ಟಾಂಗ್ ನೀಡಿದರು.
ಅವರು ಹಿರಿಯರಿದ್ದಾರೆ. ಅಭಿವೃದ್ಧಿಗೆ ಸಲಹೆ ಕೊಡಲಿ. ಚುನಾವಣೆ ಬಂದಾಗ ರಾಜಕೀಯ ಮಾಡೋಣ, ಬಜೆಟ್‌ನಲ್ಲಿ ಹಾಸನದ ಹೆಸರಿಲ್ಲ ಅನ್ನೋರು, ಕೇಂದ್ರ ಬಜೆಟ್ ಪ್ರತಿಯಲ್ಲಿ ಕರ್ನಾಟಕದ ಹೆಸರಿಲ್ಲ ಅನ್ನೋದನ್ನೂ ಸರಿಯಾಗಿ ಓದಿ ಮಾತನಾಡಲಿ ಎಂದರು.
ಹಾಸನಾಂಬ ಉತ್ಸವದ ಬಗ್ಗೆ ಪೂರ್ವಭಾವಿ ಸಭೆ ನಡೆದಿದೆ. ಕಳೆದ ಬಾರಿಯ ಲೋಪದೋಷ ಸರಿಪಡಿಸಲು ಈಗಿನಿಂದಲೇ ಕ್ರಮ ವಹಿಸಲಾಗುವುದು. ಪಾಸ್ ರದ್ದು ಮಾಡುವಂತೆ ನಾನೇ ಮನವಿ ಮಾಡಿದ್ದೇ ಎಂದು ಪ್ರಶ್ನೆ ಒಂದಕ್ಕೆ ಉತ್ತರಿಸಿದರು.
ಇದೇ ವೇಳೆ 140 ಶಾಸಕರನ್ನು ಹೊಂದಿರುವ ನಮ್ಮ ಸರ್ಕಾರ ಸುಭದ್ರವಾಗಿದ್ದು, ಬೀಳಲಿದೆ ಎಂಬ ಆರೋಪ ನಿರಾಧಾರ, ಇದೆಲ್ಲ ಪ್ರತಿಪಕ್ಷಗಳ ಸೃಷ್ಟಿ ಎಂದು ತಿರುಗೇಟು ನೀಡಿದರು.
ಶೀಘ್ರ ಕಾಮಗಾರಿ: ಹಾಸನದ ರೈಲ್ವೆ ಮೇಲ್ಸೇತುವೆಯ ಬಾಕಿ ಕಾಮಗಾರಿ ಮುಗಿಸಲು ರಾಜ್ಯ ಸರ್ಕಾರ 27.84 ಕೋಟಿ ರೂ. ನೀಡಲು ಅನುಮೋದನೆ ಕೊಟ್ಟಿದೆ. ಮುಂದಿನ 15-20 ದಿನಗಳಲ್ಲಿ ಅಧಿಕಾರಿಗಳ ಸಭೆ ನಡೆಸಿ ಶೀಘ್ರವೇ ಕಾಮಗಾರಿ ಆರಂಭಿಸಲಾಗುವುದು ಎಂದು ಸಂಸದರು ಭರವಸೆ ನೀಡಿದರು.
ಪ್ರಗತಿಯಲ್ಲಿರುವ ವಿಮಾನ ನಿಲ್ದಾಣ ಕಾಮಗಾರಿಗೆ ಸದ್ಯಕ್ಕೆ ಹಣದ ಕೊರತೆ ಇಲ್ಲ. ಮುಂದುವರಿದ ಕಾಮಗಾರಿಗೆ 50 ಕೋಟಿ ರೂ. ಬಿಡುಗಡೆಗೆ ಪತ್ರ ಬರೆಯಲಾಗಿದೆ. ಮುಂದಿನ ಬಜೆಟ್‌ನಲ್ಲಿ ಶೇ.100ರಷ್ಟು ಪ್ರಯತ್ನ ಹಾಕಿ ಹಣ ಬಿಡುಗಡೆ ಮಾಡಿಸಲಾಗುವುದು. ಹಾಸನ ಜಿಲ್ಲೆಯ ಅಭಿವೃದ್ಧಿ ಬಗ್ಗೆ ಸಿಎಂ, ಡಿಸಿಎಂ ಹಾಗೂ ಉಸ್ತುವಾರಿ ಸಚಿವರು ಗಮನ ಹರಿಸುತ್ತಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣ್, ವಕ್ತಾರ ದೇವರಾಜೇಗೌಡ, ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಂಜಿತ್ ಗೂರೂರು ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ಇದ್ದರು.