ಚನ್ನಪಟ್ಟಣ : ಬೆಳಗಾವಿಯಲ್ಲಿ ಮರಾಠ ಪುಂಡರ ದೌರ್ಜನ್ಯ ಖಂಡಿಸಿ ಚನ್ನಪಟ್ಟಣದಲ್ಲಿ ಸೋಮವಾರ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯಿಂದ ಪ್ರತಿಭಟಿಸಲಾಯಿತು.
ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಅಧ್ಯಕ್ಷ ರಮೇಶ್‌ಗೌಡ ಮಾತನಾಡಿ, ಬೆಳಗಾವಿ ಗಡಿಯಲ್ಲಿ ಎಂಇಎಸ್ ಪುಂಡರ ದೌರ್ಜನ್ಯಕ್ಕೆ ಕಡಿವಾಣ ಹಾಕಲು ಸಾಧ್ಯವಾಗದಿದ್ದರೆ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಮನೆಗೆ ಹೋಗಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬೆಳಗಾವಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ಟಿಕೆಟ್ ಪಡೆಯಲು ಕನ್ನಡದಲ್ಲಿ ಮಾತನಾಡಿ ಎಂದ ನಿರ್ವಾಹಕನ ಮೇಲೆ ಮರಾಠಿ ಪುಂಡರು ಹಲ್ಲೆ ಮಾಡುವ ಜತೆಗೆ ನಿರ್ವಾಹಕನ ವಿರುದ್ಧ ಲೈಂಗಿಕ ದೌರ್ಜನ್ಯ ಕೇಸ್ ದಾಖಲಿಸಿರುವುದು ಖಂಡನೀಯ. ಸರ್ಕಾರ ಎಂಇಎಸ್ ಪುಂಡರ ಎಡೆಮುರಿಕಟ್ಟದಿದ್ದರೆ ಮನೆಗೆ ಹೋಗಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವೇದಿಕೆ ಜಿಲ್ಲಾಧ್ಯಕ್ಷ ಬೇವೂರು ಯೋಗೀಶ್‌ಗೌಡ ಮಾತನಾಡಿ, ಬೆಳಗಾವಿಯ ಗಡಿಯಲ್ಲಿ ಕನ್ನಡಿಗರ ಮೇಲೆ ಮರಾಠಿಗರು ನಿರಂತರ ದೌರ್ಜನ್ಯ ಮಾಡುತ್ತಾ ಬಂದಿದ್ದಾರೆ. ಇದೀಗ ಬಸ್‌ಗಳ ಮೇಲೆ ಕಲ್ಲು ತೂರಿದ್ದು, ಸರ್ಕಾರ ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಮುಂದೆ ಕನ್ನಡಿಗರಿಗೆ ಜಾಗ ಇಲ್ಲವಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಕನ್ನಡಿಗರ ಮೇಲೆ ದೌರ್ಜನ್ಯ ಮಾಡುತ್ತಿರುವ ಮರಾಠಿಗರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲವೇ ವೇದಿಕೆಯಿಂದ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ನಿವೃತ್ತ ಪ್ರಾಂಶುಪಾಲ ನಿಂಗೇಗೌಡರ(ಎನ್‌ಜಿ), ಡಿಎಸ್‌ಎಸ್ ಸಂಚಾಲಕ ವೆಂಕಟೇಶ್(ಸೇಟು), ಮುಖಂಡರಾದ ಮಂಗಳವಾರಪೇಟೆ ಕೃಷ್ಣಪ್ರಸಾದ್, ಮರಿಅಂಕೇಗೌಡ, ಮೆಣಸಿಗನಹಳ್ಳಿ ರಾಮಕೃಷ್ಣಪ್ಪ ಮತ್ತಿತರರು ಇದ್ದರು.