ಜಿಲ್ಲೆ

ಬಿಜೆಪಿಯವರು ಆತ್ಮಾವಲೋಕನ ಮಾಡಿಕೊಳ್ಳಲಿ

Dharwada - Santosh Vaidya

ಹುಬ್ಬಳ್ಳಿ: ರಾಜ್ಯ ಕಾಂಗ್ರೆಸ್ ಸರ್ಕಾರ ಪ್ರಸ್ತುತ ಬಜೆಟ್​ನಲ್ಲಿ ಏನು ನೀಡಿಲ್ಲ ಎಂದು ಬೊಬ್ಬೆ ಹೊಡೆಯುವ ಮೊದಲು ಹಿಂದಿನ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಏನು ನೀಡಿತ್ತು ಎಂಬುದನ್ನು ಮೊದಲು ಆತ್ಮಾವಲೋಕನ ಮಾಡಿಕೊಂಡರೆ ಒಳ್ಳೆಯದು ಎಂದು ಹು-ಧಾ ಪೂರ್ವ ಶಾಸಕ ಪ್ರಸಾದ ಅಬ್ಬಯ್ಯ ಬಿಜೆಪಿ ಶಾಸಕರ ವಿರುದ್ಧ ಗುಡುಗಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ಮೇಲೆ ಗುರುವಾರ ಸದನದಲ್ಲಿ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಹಿಂದಿನ ಬಿಜೆಪಿ ಸರ್ಕಾರ ಶಿಕ್ಷಣಕ್ಕೆ 31,980ಕೋಟಿ ರೂ. ನೀಡಿದ್ದರೆ, ಪ್ರಸ್ತುತ ಕಾಂಗ್ರೆಸ್ ಸರ್ಕಾರ 44, 422ಕೋಟಿ ರೂ., ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಹಿಂದಿನ ಬಿಜೆಪಿ ಸರ್ಕಾರ 13,982ಕೋಟಿ ರೂ. ನೀಡಿದ್ದರೆ, ಪ್ರಸ್ತುತ ಕಾಂಗ್ರೆಸ್ ಸರ್ಕಾರ 15,145ಕೋಟಿ ರೂ. ನೀಡಿದೆ. ಒಳಾಡಳಿತ ಮತ್ತು ಸಾರಿಗೆ ಇಲಾಖೆಗೆ ಬಿಜೆಪಿ ಸರ್ಕಾರ 11,222ಕೋಟಿ ರೂ. ನೀಡಿದ್ದರೆ, ಕಾಂಗ್ರೆಸ್ ಸರ್ಕಾರ 19,777ಕೋಟಿ ರೂ. ಅನುದಾನ ನೀಡಿದೆ. ಅದರಂತೆ ರಾಜ್ಯದ 10 ಮಹಾನಗರ ಪಾಲಿಕೆಗಳಿಗೆ 2ಸಾವಿರ ಕೋಟಿ ರೂ. ವಿಶೇಷ ಅನುದಾನ ಮೀಸಲಿರಿಟ್ಟಿದೆ. ರಾಜ್ಯ ಸರ್ಕಾರ ಪ್ರತಿ ಇಲಾಖೆಗೂ ಹಿಂದೆಂದಿಗಿಂತ ಹೆಚ್ಚು ಅನುದಾನ ನೀಡಿದೆ ಎಂದು ದಾಖಲೆ ಸಮೇತ ಪಸ್ತುತ ಪಡಿಸಿದರು.

ಗ್ಯಾರಂಟಿ ಯೋಜನೆಗೆ ಮೀಸಲಿಟ್ಟಿದ್ದ 17,500ಕೋಟಿ ರೂ.ಗಳಲ್ಲಿ ಈಗಾಗಲೇ 13,350ಕೋಟಿ ರೂ.ಗಳು ಈಗಾಗಲೇ ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗಿದೆ. ಗ್ಯಾರಂಟಿ ಯೋಜನೆಗಳು ಜನರಿಗೆ ತಲುಪಿದ್ದರೂ ಬಿಜೆಪಿಗರು ಮಾತ್ರ ಇದನ್ನು ಬೋಗಸ್ ಯೋಜನೆ ಎಂದು ಕರೆಯುವ ಮೂಲಕ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಬಿಜೆಪಿಗರಿಗೆ ನಮ್ಮನ್ನು ಪ್ರಶ್ನಿಸುವ ನೈತಿಕತೆ ಇಲ್ಲ ಎಂದು ಆಕ್ರೋಶ ಹೊರಹಾಕಿದರು.

ಹುಬ್ಬಳ್ಳಿ ನಗರಕ್ಕೆ ಒಂದು ಸರ್ಕಾರಿ ಕಾಲೇಜು ಮತ್ತು ಪೂರ್ವ ಕ್ಷೇತ್ರಕ್ಕೆ ಪಿಯು ಕಾಲೇಜು ಅವಶ್ಯಕತೆ ಇದೆ. ಅದರಂತೆ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯ ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದು, ಪಿಂಚಣಿ, ವೇತನಕ್ಕೂ ಹಣವಿಲ್ಲದೆ ಪರದಾಡುವಂತಾಗಿದೆ. ಹಿಂದೆ ಇದ್ದ ದೂರ ಶಿಕ್ಷಣವನ್ನು ಮತ್ತೆ ಪ್ರಾರಂಭಿಸಬೇಕು ಮತ್ತು ಕವಿವಿಗೆ ವಿಶೇಷ ಅನುದಾನ ನೀಡಬೇಕೆಂದು ಪ್ರಸಾದ ಅಬ್ಬಯ್ಯ ಒತ್ತಾಯಿಸಿದರು.