ವಿಜಯಪುರ: ಮುಖ್ಯಮಂತ್ರಿಗಳ ತಾತ್ಕಾಲಿಕ ಪ್ರವಾಸದಂತೆ ಮೇ ತಿಂಗಳ ಕೊನೇ ವಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜಿಲ್ಲೆಗೆ ಭೇಟಿ ನೀಡಲಿದ್ದು, ಮುಖ್ಯಮಂತ್ರಿಗಳ ಪ್ರವಾಸದ ಹಿನ್ನೆಲೆಯಲ್ಲಿ ಅಧಿಕಾರಿಗಳು ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಟಿ. ಭೂಬಾಲನ್ ಸೂಚಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾಮಟ್ಟದ ವಿವಿಧ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಜಿಲ್ಲಾಧಿಕಾರಿಗಳು, ಜಿಲ್ಲೆಯಲ್ಲಿ ಕೈಗೊಂಡಿರುವ ವಿವಿಧ ಕಾಮಗಾರಿ, ವಿವಿಧ ಕಟ್ಟಡಗಳ ಉದ್ಘಾಟನೆ ಸೇರಿ ದೀರ್ಘಾವಧಿ ಬಾಕಿ ಪ್ರಸ್ತಾವನೆಗಳ ಮಾಹಿತಿ ಸಲ್ಲಿಸುವಂತೆ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರು.
ಲೋಕೋಪಯೋಗಿ, ಪ್ರವಾಸೋದ್ಯಮ, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ಹೆಸ್ಕಾಂ ಇಲಾಖೆಗಳು ಸೇರಿ ವಿವಿಧ ಇಲಾಖೆಯಡಿ ನಡೆಯುತ್ತಿರುವ ಕಾಮಗಾರಿಗಳು, ಪ್ರಗತಿಯಲ್ಲಿರುವ ಮತ್ತು ಪೂರ್ಣಗೊಂಡ ಕಾಮಗಾರಿಗಳ ಮಾಹಿತಿಯನ್ನು ಜಿಲ್ಲಾಧಿಕಾರಿಗಳ ಕಚೇರಿ ಸಲ್ಲಿಸುವಂತೆ ಅವರು ತಾಕೀತು ಮಾಡಿದರು.
2024 ಹಾಗೂ 2025ನೇ ಸಾಲಿನ ಜಿಲ್ಲಾಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿಗೆ ಎಬಿಸಿ ಮತ್ತು ‘ಡಿ’ ವೃಂದದ ಅಧಿಕಾರಿ-ನೌಕರರಿಗೆ ಆಯ್ಕೆ ಮಾಡಬೇಕಾದ ಹಿನ್ನೆಲೆಯಲ್ಲಿ ತಮ್ಮ ಇಲಾಖೆಯಲ್ಲಿ ಸರ್ಕಾರದ ಕಾರ್ಯನಿರ್ವಹಣೆ ತರುವ ಮೂಲಕ ನಾಗರಿಕರಿಗೆ ಗುಣಮಟ್ಟ ಸೇವೆ ನೀಡಿದ ಅಧಿಕಾರಿ-ನೌಕರರ ಹೆಸರುಗಳನ್ನು ಜಿಲ್ಲಾಧಿಕಾರಿಗಳ ಕಚೇರಿಗೆ ಒದಗಿಸುವಂತೆ ತಿಳಿಸಿದರು.
ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಕಚೇರಿ, ಅಂಗನವಾಡಿ, ವಿವಿಧ ವಸತಿ ನಿಲಯಗಳ ಕಟ್ಟಡಕ್ಕಾಗಿ ಅವಶ್ಯಕತೆ ಇರುವ ನಿವೇಶನ ಮಂಜೂರಾತಿಗೆ ಸಂಬಂಧಿಸಿದವರು ಬೇಡಿಕೆ ಸಲ್ಲಿಸಬೇಕು. ಬೇಡಿಕೆ ಸಲ್ಲಿಸುವಾಗ ನಿಗದಿತ ಸರ್ವೇ ನಂಬರ್, ಗ್ರಾಮ ಮಾಹಿತಿ ಸೇರಿ ನಿಖರವಾಗಿ ಪ್ರಸ್ತಾವನೆ ಸಲ್ಲಿಸಬೇಕು. ಈಗಾಗಲೇ, ಬೇಡಿಕೆ ಸಲ್ಲಿಸಿದ ಇಲಾಖೆಗಳ ಪ್ರಸ್ತಾವನೆಯನ್ನು ಸಂಬಂಧಿಸಿದ ತಹಸೀಲ್ದಾರರು ಹಾಗೂ ಸಂಬಂಧಿಸಿದ ಅಧಿಕಾರಿಗಳು ಸ್ಥಳ ಪರಿಶೀಲಿಸುವ ಮೂಲಕ ವರದಿ ನೀಡುವಂತೆ ಅವರು ಸೂಚಿಸಿದರು.
ಕಚೇರಿಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವ ನಿಟ್ಟಿನಲ್ಲಿ ಆವರಣದಲ್ಲಿರುವ ಹಳೆಯ ನಿರುಪಯುಕ್ತ ವಾಹನಗಳನ್ನು ನಿಯಮಾನುಸಾರ ವಿಲೇವಾರಿಗೆ ಅಗತ್ಯ ಕ್ರಮ ವಹಿಸಬೇಕು. ಈ ಕುರಿತು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ವಾಹನಗಳ ಸೂಕ್ತ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ತಿಳಿಸಿದರು.
ಜಿಪಂ ಸಿಇಒ ರಿಷಿ ಆನಂದ, ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಂಕರ ಮಾರಿಹಾಳ, ಉಪವಿಭಾಗಾಧಿಕಾರಿ ಗುರುನಾಥ ದಡ್ಡೆ, ವಿಡಿಎ ಆಯುಕ್ತ ರಾಜಶೇಖರ ಡಂಬಳ, ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸುರೇಶ ಶೆಡಶ್ಯಾಳ ಮತ್ತಿತರರಿದ್ದರು.