ಜಮಖಂಡಿ ತಾಪಂ ಸಭಾ ಭವನದಲ್ಲಿ ನಡೆದ ಪ್ರಗತಿ ಪರಿಶಿಲನಾ ಸಭೆಯಲ್ಲಿ ಶಾಸಕ ನಾಡೋಜ ಜಗದೀಶ ಗುಡಗುಂಟಿ ಮಾತನಾಡಿದರು. ತಾಪಂ ಅಧಿಕಾರಿ ಸಂಜೀವ ಜುನ್ನೂರ, ತಹಸೀಲ್ದಾರ್ ಸದಾಶಿವ ಮಕ್ಕೊಜಿ ಇತರರಿದ್ದರು. 
ಜಿಲ್ಲೆ

ಅಧಿಕಾರಿಗಳು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಲಿ

Vijayapura - Desk - Gurappa Lokuri

ಜಮಖಂಡಿ: ಅಧಿಕಾರಿಗಳು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಿದರೆ ಮಾತ್ರ ಕ್ಷೇತ್ರದ ಅಭಿವೃದ್ಧಿ ಸಾಧ್ಯ ಎಂದು ಶಾಸಕ ನಾಡೋಜ ಜಗದೀಶ ಗುಡಗುಂಟಿ ಹೇಳಿದರು.

ನಗರದ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಶುಕ್ರವಾರ ನಡೆದ ಪ್ರಗತಿ ಪರಿಶೀಲನಾ ಸಭೆೆಯಲ್ಲಿ ಅವರು ಮಾತನಾಡಿದರು.

ಅಧಿಕಾರಿಗಳು ತಮ್ಮ ಇಲಾಖೆಯಿಂದ ಆಗಬೇಕಾದ ಕಾಮಗಾರಿಗಳ ಬಗ್ಗೆ ನಿರ್ದಿಷ್ಟವಾದ ಯೋಜನೆ ರೂಪಿಸಿಕೊಳ್ಳಬೇಕು. ನುರಿತ ತಜ್ಞರಿಂದ ವರದಿ ತಯಾರಿಸಿಕೊಂಡು ಇಂಥಹ ಕಾರ್ಯಗಳಾಗಬೇಕೆಂಬ ಸ್ಪಷ್ಟತೆಯಿಂದ ಸಭೆಯ ಗಮನಕ್ಕೆ ತಂದರೆ ಅದರ ಬಗ್ಗೆ ಪ್ರಯತ್ನ ಮಾಡಬಹುದು. ಸಂಬಂಧಿಸಿದ ಇಲಾಖೆ ಸಚಿವರನ್ನು ಭೇಟಿಮಾಡಿ ಕಾಮಗಾರಿಗೆ ಅನುಮತಿ ಪಡೆಯಬಹುದು. ಅದನ್ನು ಬಿಟ್ಟು ಕೇವಲ ವರದಿ ಸಲ್ಲಿಸಿ ಹೋದರೆ ಪ್ರಯೋಜನವಿಲ್ಲ ಎಂದು ತಿಳಿಸಿದರು.

ನಗರಸಭೆಯಿಂದ ಹಲವಾರು ಕಾಮಗಾರಿಗಳಾಗಬೇಕಿದೆ. ಲಕ್ಕನಕೆರೆಯ ಹತ್ತಿರದ ಬೆಪಾಸ್ ರಸ್ತೆಯಲ್ಲಿ ನೀರು ಸಂಗ್ರಹವಾಗದಂತೆ ಕ್ರಮ ಜರುಗಿಸುವುದು, ಯುಜಿಡಿ ಕೆಲಸಗಳು, ಮಹಿಳೆಯರ ಶೌಚಗೃಹಗಳ ನಿರ್ಮಾಣ, ಬೀದಿ ಬದಿ ವ್ಯಾಪಾರಸ್ಥರಿಗೆ ಶಾಶ್ವತ ಮಾರುಕಟ್ಟೆ, ಬೀದಿದೀಪ ಅಳವಡಿಕೆ, ದೊಡ್ಡ ಚರಂಡಿಗಳ ಹೂಳೆತ್ತುವುದು ಸೇರಿ ಹಲವಾರು ಅಭಿವೃದ್ಧಿ ಕಾರ್ಯಗಳಾಗಬೇಕಿದ್ದು, ಅವುಗಳ ಯೋಜನೆ ಸಿದ್ಧಪಡಿಸಬೇಕು ಎಂದು ಸೂಚಿಸಿದರು.

ಪೌರಾಯುಕ್ತ ಜ್ಯೋತಿಗಿರೀಶ ಮಾತನಾಡಿ, ಎಲ್ಲ ಕಾಮಗಾರಿಗಳ ಕುರಿತು ವರದಿ ಸಿದ್ಧಪಡಿಸಿದ್ದಾಗಿ ತಿಳಿಸಿದರಲ್ಲದೆ, ತಮ್ಮ ವ್ಯಾಪ್ತಿಯಲ್ಲಿ ಬರುವ ಎಲ್ಲ ಕಾಮಗಾರಿಗಳನ್ನು ಕೈಗೆತ್ತಿಕೊಂಡು ನಗರದ ನಿವಾಸಿಗಳಿಗೆ ತೊಂದರೆಯಾಗದಂತೆ ಕಾರ್ಯನಿರ್ವಹಿಸುವುದಾಗಿ ತಿಳಿಸಿದರು.

ಕೃಷಿ ಇಲಾಖೆಯಿಂದ ಕೃಷಿ ಹೊಂಡಗಳ ನಿರ್ಮಾಣಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯ ಅಡಿಯಲ್ಲಿ ಕಡಲೆ, ಜೋಳದ ಬೆಳೆಗಳ ಪ್ರಾತ್ಯಕ್ಷಿಕೆ ಏರ್ಪಡಿಸಲಾಗುವುದೆಂದು ಕೃಷಿ ಅಧಿಕಾರಿ ಸಭೆಗೆ ಮಾಹಿತಿ ನೀಡಿದರು.

ತಾಲೂಕು ಆರೋಗ್ಯ ಅಧಿಕಾರಿ ಗೈಬುಸಾಬ ಗಲಗಲಿ ಮಾತನಾಡಿ, ಲ್ಯಾಪ್ರೋಸ್ಕೋಪಿಕ್ ಸರ್ಜನ್ ಇಲ್ಲದ್ದರಿಂದಾಗಿ ಅವಶ್ಯವಿರುವ ರೋಗಿಗಳನ್ನು ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗುತ್ತಿದೆ. ಔಷಧ ಕೊರತೆ ಇಲ್ಲ, ಪುರುಷರ ಸಂತಾನ ಹರಣ ಚಿಕಿತ್ಸೆಗೆ ಜನರ ಸಹಕಾರ ವಿಲ್ಲದ್ದರಿಂದಾಗಿ ಗುರಿ ಮುಟ್ಟಲಾಗುತ್ತಿಲ್ಲ. ಟುಬ್ಯಾಕ್ಟಮಿ( ಮಹಿಳೆರ ಸಂತಾನ ಹರಣ) ಪ್ರಕರಣಗಳಲ್ಲಿ ನಿಗದಿತ ಗುರಿ ಸಾಧಿಸಲಾಗಿದೆ. ಎಚ್1ಎನ್1, ಡೆಂೆ ಪ್ರಕರಣಗಳು ದಾಖಲಾಗಿಲ್ಲ. ಟಿಬಿ, ಮಲೇರಿಯಾ, ಕುಷ್ಠರೋಗ, ಮಧುಮೇಹ, ರಕ್ತದೊತ್ತಡದ ರೋಗಿಗಳಿಗೆ ವೈದ್ಯೋಪಚಾರ ನೀಡಲಾಗುತ್ತಿದೆ. ಕಳೆದ ಏಪ್ರಿಲ್‌ನಿಂದ ಅಕ್ಟೋಬರವರೆಗೆ 4,216 ಹೆರಿಗೆಗಳಾಗಿವೆ. ಶೇ.30 ರಷ್ಟು ಸಿಜರಿನ್ ಹೆರಿಗೆ ಮಾಡಿಸಲಾಗಿದೆ ಎಂದು ವಿವರಿಸಿದರು.

ಸಮಾಜಕಲ್ಯಾಣ ಇಲಾಖೆಗೆ ಅನುದಾನ ಕೊರತೆ, ಸಿಬ್ಬಂದಿ ಕೊರತೆ ಇದ್ದು, 33 ಹುದ್ದೆಗಳ ಪೈಕಿ 14 ಹುದ್ದೆಗಳು ಖಾಲಿ ಇವೆ. ಅಲ್ಪಸಂಖ್ಯಾತರ ಇಲಾಖೆಯ ವಸತಿ ನಿಲಯ, ಎಸ್‌ಡಿಎಂ ವಿದ್ಯಾರ್ಥಿನಿಲಯಕ್ಕೆ ಕಟ್ಟಡದ ಅವಶ್ಯಕತೆ ಇದೆ. ಆಯುಷ್ ಇಲಾಖೆಯಲ್ಲಿ 9 ಜನ ಸಿಬ್ಬಂದಿ ಪೈಕಿ ಕೇವಲ ಇಬ್ಬರು ಮಾತ್ರ ಕಾರ್ಯನಿರ್ವಹಿಸುತ್ತಿರುವುದಾಗಿ ಅಧಿಕಾರಿಗಳು ಅಸಹಾಯಕತೆ ತೊಡಿಕೊಂಡರು.

ಪಶುಪಾಲನೆ ಇಲಾಖೆ, ರೇಷ್ಮೆ ಇಲಾಖೆ, ಮೀನುಗಾರಿಕೆ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದೆ. ನೀರಾವರಿ ಇಲಾಖೆಗೆ ಅನುದಾನದ ಕೊರತೆಯಿಂದ ಕಾಲುವೆಗಳನ್ನು ಸ್ವಚ್ಛಗೊಳಿಸಲಾಗುತ್ತಿಲ್ಲ ಎಂದು ಆಯಾ ಅಧಿಕಾರಿಗಳು ತಿಳಿಸಿದರು.

ಸವಳು-ಜವಳು ಭೂಮಿಗಳಲ್ಲಿ ಮೀನು ಸಾಕಾಣಿಕೆ ಮಾಡುವವರಿಗೆ ಸರ್ಕಾರದಿಂದ ಮೀನಿನ ಹೊಂಡ ನಿರ್ಮಾಣಕ್ಕೆ ಅನುದಾನ ನೀಡಲಾಗುತ್ತಿದ್ದು, ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಅಧಿಕಾರಿ ಪ್ರಕಾಶ ಭಜಂತ್ರಿ ತಿಳಿಸಿದರು. ತಾಪಂ ಅಧಿಕಾರಿ ಸಂಜೀವ ಜುನ್ನೂರ, ತಹಸೀಲ್ದಾರ್ ಸದಾಶಿವ ಮಕ್ಕೊಜಿ, ತಾಪಂ ಆಡಳಿತಾಧಿಕಾರಿ ಸುಜಾತಾ ಇತರರಿದ್ದರು.