ಬೀಳಗಿ ತಾಪಂ ಸಭಾ ಭವನದಲ್ಲಿ ಶಾಸಕ ಜೆ.ಟಿ. ಪಾಟೀಲ ಅಧ್ಯಕ್ಷತೆಯಲ್ಲಿ ತ್ರೈಮಾಸಿಕ ಸಭೆ ನಡೆಯಿತು. ಎಸಿ ಸಂತೋಷ ಕಾಮಗೌಡ ಇದ್ದರು. 
ಜಿಲ್ಲೆ

ಅಧಿಕಾರಿಗಳು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಲಿ

ದತ್ತಾತ್ರೇಯ ಪಿ ಕುಲಕರ್ಣಿ

ಬೀಳಗಿ: ಸರ್ಕಾರದ ಪ್ರತಿಯೊಂದು ಮಹತ್ವಾಕಾಂಕ್ಷಿ ಯೋಜನೆಗಳು ಸಾರ್ವಜನಿಕರಿಗೆ ತಲುಪಬೇಕಾದರೆ ಅಧಿಕಾರಿಗಳು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕೆಂದು ಶಾಸಕ ಜೆ.ಟಿ. ಪಾಟೀಲ ಹೇಳಿದರು.

ಪಟ್ಟಣದ ತಾಪಂ ಸಭಾ ಭವನದಲ್ಲಿ ಸೋಮವಾರ ನಡೆದ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನ್ಯಾಯಬೆಲೆ ಅಂಗಡಿಯಲ್ಲಿ ಜನರಿಗೆ ತೂಕದಲ್ಲಿ ವ್ಯತ್ಯಾಸವಾಗುತ್ತಿರುವ ಬಗ್ಗೆ ದೂರು ಕೇಳಿ ಬಂದಿವೆ. ಇನಾಮ ಹಮನೇರಿ, ಜಲಗೇರಿಯಲ್ಲಿ ವ್ಯವಸ್ಥಿತ ಮಾಪನ ಇಲ್ಲದೆ ಪಡಿತರ ವಿತರಿಸುವ ನ್ಯಾಯ ಬೆಲೆ ಅಂಗಡಿಯವರ ವಿರುದ್ಧ ಕ್ರಮ ಕೈಗೊಳ್ಳದ ಅಧಿಕಾರಿಗಳ ಮೇಲೆ ಸೂಕ್ತ ಕ್ರಮಕ್ಕೆ ಮುಂದಾಗುವಂತೆ ಉಪವಿಭಾಗಾಧಿಕಾರಿಗೆ ಸೂಚಿಸಿದರು.

ರೋಗಿಗಳನ್ನು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಆಂಬುಲೆನ್ಸ್ ಚಾಲಕರು ಹಣ ಕೇಳುತ್ತಿರುವ ಆರೋಪ ಕೇಳಿ ಬಂದಿದ್ದು, ತಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು. ಎಲ್ಲೆಡೆ ಡೆಂೆ ಹಾವಳಿ ಉಲ್ಬಣಗೊಂಡಿದ್ದು ರೋಗ ತಡೆಗಟ್ಟಲು ಇಲಾಖೆ ಕೈಗೊಂಡ ಕ್ರಮದ ಕುರಿತಾಗಿ ವರದಿ ನೀಡಬೇಕೆಂದು ಶಾಸಕರು ತಿಳಿಸಿದರು.

ಗ್ರಾಮಒನ್ ಕೇಂದ್ರಗಳಲ್ಲಿ ಹೆಚ್ಚಿನ ಹಣ ವಸೂಲಿ

ಕೆಲ ಗ್ರಾಮಗಳಲ್ಲಿನ ಗ್ರಾಮಒನ್ ಕೇಂದ್ರಗಳಲ್ಲಿ ಸರ್ಕಾರಿ ಸೇವೆಗಳನ್ನು ನೀಡಲು ಸಾರ್ವಜನಿಕರಿಂದ ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದಾರೆ. ಗ್ರಾಮ ಒನ್ ಕೇಂದ್ರಗಳ ಪ್ರತಿನಿಧಿಗಳಿಗೆ ಸ್ಪಷ್ಟ ನಿರ್ದೇಶನ ನೀಡಬೇಕೆಂದು ಅಧಿಕಾರಿಗಳಿಗೆ ಶಾಸಕರು ಖಡಕ್ ಸೂಚನೆ ನೀಡಿದರು.

ಜಮಖಂಡಿ ಎಸಿ ಸಂತೋಷ ಕಾಮಗೌಡ, ಬೀಳಗಿ ತಹಸೀಲ್ದಾರ್ ಸುಹಾಸ ಇಂಗಳೆ, ಬಾಗಲಕೋಟೆ ತಹಸೀಲ್ದಾರ್ ಪಮ್ಮಾರ, ಬಾದಾಮಿ ತಹಸೀಲ್ದಾರ್ ಜೆ.ಬಿ. ಮಜಗ್ಗಿ, ತಾಪಂ ಇಒ ಅಭಯ ಮೊರಬ, ಪಿ. ಹೇಮಾವತಿ, ಸಾಧಿಕ ಮುಲ್ಲಾ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.