ಜಿಲ್ಲೆ

ಕನ್ನಡದ ಬಲವರ್ಧನೆಗೆ ಸಂಘ-ಸಂಸ್ಥೆಗಳು ನಿರಂತರ ಶ್ರಮಿಸಲಿ

ಬೆಳಗಾವಿ: ಗಡಿಭಾಗದಲ್ಲಿ ಕನ್ನಡ ಗಟ್ಟಿಯಾಗಿ ನೆಲೆಸಬೇಕಾದರೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ರಂಗದಲ್ಲಿ ಕೆಲಸ ಮಾಡುವ ಸಂಘ–ಸಂಸ್ಥೆಗಳ ಸಂಖ್ಯೆ ಹೆಚ್ಚಬೇಕು. ಕನ್ನಡದ ಬಲವರ್ಧನೆಗಾಗಿ ಅವು ನಿರಂತರವಾಗಿ ಶ್ರಮಿಸಬೇಕು ಎಂದು ಶರಣ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಸಿ.ಸೋಮಶೇಖರ ಹೇಳಿದರು.

ನಗರದ ಕನ್ನಡ ಭವನದಲ್ಲಿ ಬಿ.ಎಸ್‌.ಗವಿಮಠ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ಭಾನುವಾರ ಹಮ್ಮಿಕೊಂಡಿದ್ದ ನಾಲ್ವರು ಸಾಧಕರಿಗೆ ಪ್ರಶಸ್ತಿ ಪ್ರದಾನ ಮತ್ತು ಪ್ರಭಾಕರ ಕೋರೆ ಅಭಿನಂದನ ಗ್ರಂಥದ ದ್ವಿತೀಯ ಮುದ್ರಣದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅನೇಕ ಮಹನೀಯರ ಪರಿಶ್ರಮದಿಂದ ಇಲ್ಲಿ ಕನ್ನಡ ಗಟ್ಟಿಯಾಗಿ ನೆಲೆಯೂರಿದೆ. ಕನ್ನಡದ ರಕ್ಷಣೆಗಾಗಿ ಇಲ್ಲಿ ನಿತ್ಯ, ನಿರಂತರವಾಗಿ ಚಟುವಟಿಕೆಗಳು ನಡೆಯುತ್ತಿರಬೇಕು. ಕನ್ನಡ ಕಟ್ಟುವ ಕಾಯಕ ಮುಂದುವರಿಯಬೇಕು ಎಂದರು.

‘ನಮ್ಮನ್ನು ಪರಿಪೂರ್ಣತೆಯತ್ತ ಕೊಂಡೊಯ್ಯುವ ನೈತಿಕವಾದ ನಡಿಗೆಯೇ ಸಂಸ್ಕೃತಿ. ಅದು ನಮ್ಮಲ್ಲಿ ವಿವೇಕ, ವಿವೇಚನೆ ಬೆಳೆಸುತ್ತದೆ. ಮಾನವೀಯತೆ ಮತ್ತು ಸಾಮರಸ್ಯದ ಮನೋಭಾವ ಹುಟ್ಟುಹಾಕುತ್ತದೆ. ಗಡಿ ಪರಿಸರದಲ್ಲಿ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಯಲ್ಲಿ ತನ್ನನ್ನು ತೊಡಗಿಸಿಕೊಂಡ ಗವಿಮಠ ಪ್ರತಿಷ್ಠಾನದ ಕಾರ್ಯ ಶ್ಲಾಘನೀಯ’ ಎಂದರು.

‘ಶಿಕ್ಷಣ, ಸಾಹಿತ್ಯ ಸೇರಿದಂತೆ ಹಲವು ರಂಗಗಳಲ್ಲಿ ಬಿ.ಎಸ್‌.ಗವಿಮಠ ದುಡಿದಿದ್ದಾರೆ. 50ಕ್ಕೂ ಅಧಿಕ ಕೃತಿ ರಚಿಸಿ ಕನ್ನಡ ಸಾರಸ್ವತ ಲೋಕ ಶ್ರೀಮಂತಗೊಳಿಸಿದ್ದಾರೆ. ಸಾಹಿತ್ಯ ಕ್ಷೇತ್ರಕ್ಕೆ ಅವರ ಕೊಡುಗೆ ಅವಿಸ್ಮರಣೀಯ ’ ಎಂದು ಕೊಂಡಾಡಿದರು.

ಬಿ.ಎಸ್‌.ಗವಿಮಠ, ‘ಗಡಿಯಲ್ಲಿ ಲೇಖಕರು, ಪ್ರಕಾಶಕರು ಎದುರಿಸುತ್ತಿರುವ ಬವಣೆ, ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸುತ್ತಿಲ್ಲ. ಇನ್ನಾದರೂ ಸರ್ಕಾರ ಎಚ್ಚೆತ್ತು ಈ ಭಾಗದ ಜನರ ನೋವಿಗೆ ಕಿವಿಗೊಡಬೇಕು. ಸರ್ಕಾರದ ಮಟ್ಟದಲ್ಲಿ ನಮ್ಮ ಪರವಾಗಿ ಮಾತನಾಡಲು ಉತ್ತಮ ನಾಯಕರು ಬೇಕಾದ ಅಗತ್ಯವಿದೆ’ ಎಂದರು.

ಚಿಕ್ಕೋಡಿಯ ವೈದ್ಯ ಡಾ.ದಯಾನಂದ ನೂಲಿ, ಬೆಳಗಾವಿಯ ಸಾಹಿತಿ ಗುರುದೇವಿ ಹುಲೆಪ್ಪನವರಮಠ, ಸವದತ್ತಿಯ ರಂಗ ಸಂಘಟಕ ಝಕೀರ್ ನದಾಫ್‌ ಮತ್ತು ಹುಕ್ಕೇರಿ ತಾಲ್ಲೂಕಿನ ಇಸ್ಲಾಂಪುರದ ಪ್ರಾಧ್ಯಾಪಕ ಸಂತೋಷ ನಾಯಿಕ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಡಾ.ಎಚ್‌.ಬಿ.ರಾಜಶೇಖರ ಮಾತನಾಡಿದರು. ಸಾಹಿತಿ ವಿ.ಎಸ್‌.ಮಾಳಿ ಅಭಿನಂದನಾ ನುಡಿಗಳನ್ನಾಡಿದರು. ಪ್ರಶಸ್ತಿ ಪುರಸ್ಕೃತರು ತಮ್ಮ ಅನುಭವ ಹಂಚಿಕೊಂಡರು.

ಪ್ರತಿಷ್ಠಾನದ ಅಧ್ಯಕ್ಷ ಪ್ರೊ.ಎಲ್‌.ವಿ.ಪಾಟೀಲ, ಕಾರ್ಯದರ್ಶಿ ಅಕ್ಬರ್‌ ಸನದಿ, ಯ.ರು.ಪಾಟೀಲ, ಬಸವರಾಜ ಜಗಜಂಪಿ, ಸರಜೂ ಕಾಟ್ಕರ್‌, ಬಸವರಾಜ ಗಾರ್ಗಿ, ಅಶೋಕ ಚಂದರಗಿ ಇತರರಿದ್ದರು.