ಶಿರಸಿ: ವೃತ್ತಿ ಕಲಾವಿದರ ಸಂಕಷ್ಟಕ್ಕೆ ಎಲ್ಲ ಕಲಾಸಕ್ತರು ಸ್ಪಂದಿಸಬೇಕು ಎಂದು ಚಲನಚಿತ್ರ ನಟ ನೀರ್ನಳ್ಳಿ ರಾಮಕೃಷ್ಣ ಹೇಳಿದರು.
ನಗರದ ಧುಂಡಶಿ ಜಾಗದಲ್ಲಿ ಚಿತ್ತರಗಿಯ ಶ್ರೀಕುಮಾರ ವಿಜಯ ನಾಟಕ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡ ಸಂದಿಮನಿ ಸಂಗವ್ವ ನಾಟಕ ಪ್ರದರ್ಶನ ವೀಕ್ಷಿಸಿ, ಕಲಾ ಗೌರವ ಸ್ವೀಕರಿಸಿ ಭಾನುವಾರ ಮಾತನಾಡಿದರು. ವೃತ್ತಿ ಕಲಾವಿದರ ಬದುಕು ಸುಲಭವಲ್ಲ. ಅದರ ಕಷ್ಟ ನನಗೂ ಗೊತ್ತಿದೆ. ಗುಬ್ಬಿ ವೀರಣ್ಣ, ಸುಳ್ಯದ ದೇಸಾಯಿ ನಾಟಕ ಕಂಪನಿಯಲ್ಲಿ ಇದ್ದವನು. ನೂರಾರು ವರ್ಷದಿಂದ ಕಲಾವಿದರು, ಕಲಾಭಿಮಾನಿಗಳು ಕಟ್ಟಿದ ಸಂಸ್ಥೆ ಉಳಿಸಲು, ಬೆಳೆಸಲು ಎಲ್ಲರ ಸಹಕಾರ ಬೇಕು ಎಂದರು.
ಶಿರಸಿ ಮಾರಿಕಾಂಬಾದೇವಿ ಜಾತ್ರೆ ಎಂದರೆ ನಾಟಕ ಕಂಪನಿಗಳು ಇಲ್ಲದೆ ಪೂರ್ಣವಾಗದು. ಕಲಾ ಪ್ರೇಮಿಗಳು ಶಿರಸಿಗೆ ಬಂದ ಎಲ್ಲ ನಾಟಕ ನೋಡಿ ಬೆಳೆಸುತ್ತಾರೆ ಎಂಬ ವಿಶ್ವಾಸ ಇದೆ. ಉತ್ತರ ಕನ್ನಡ ಪರಿಸರ, ಸಂಸ್ಕೃತಿ, ಇತಿಹಾಸ, ಕಲಾರಾಧನೆ ಸಹಿತ ಅನೇಕ ಸಂಗತಿಗಳಿಗೆ ನಾಡಿಗೆ ಮಾದರಿ ಎಂದರು.
ಯಕ್ಷಗಾನ ಅರ್ಥಧಾರಿ ಮೋಹನ ಭಾಸ್ಕರ ಹೆಗಡೆ ಹೆರವಟ್ಟ ಮಾತನಾಡಿ, ಜಾಗೃತ ಸಮಾಜದ ಲಕ್ಷಣವೇ ಸಾಂಸ್ಕೃತಿಕ ಆಸಕ್ತಿ ಮತ್ತು ಅಭಿವ್ಯಕ್ತಿ. ಜನರು ಸಾಂಸೃ್ಕಕ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸುವುದು ಆಸಕ್ತಿಯಾದರೆ, ಕಲಾವಿದರು ನಿಷ್ಠೆಯಿಂದ ತೊಡಗಿಕೊಳ್ಳುವುದು ಅಭಿವ್ಯಕ್ತಿ ಎಂದರು.
ಸಂದಿಮನಿ ಸಂಗವ್ವ ನಾಟಕದಲ್ಲಿ ದಯಾನಂದ ಬೀಳಗಿ, ಮಂಜುನಾಥ ಜಾಲಿಹಾಳ, ಬಸವರಾಜ ಯಾಳವಾರ, ದಾನೇಶ ಪಾಟೀಲ, ಪೃಥ್ವಿರಾಜ ಬದಾಮಿ, ಮಹಾದೇವ ಜಾಲಿಹಾಳ, ವಿಜಯ ಜಾಲಿಹಾಳ, ಅಪರಂಜಿ ಜಾಲಿಹಾಳ, ಶ್ವೇತಾ ಬೀಳಗಿ, ಧನುಶ್ರೀ ಪಾಟೀಲ ಶಬನಾ ಇಲಕಲ್ಲ, ನೂತನಕುಮಾರ ರಾಯಚೂರ, ರಘುವೀರ ಬನಹಟ್ಟಿ, ಸಿದ್ದಣ್ಣ ಕಮತಗಿ, ಸಂಗಪ್ಪ ಗಜೇಂದ್ರಗಡ, ಮಹಾಂತೇಶ ಮುಂಡರಗಿ, ಉಮೇಶ ಮುಂಡರಗಿ, ಸೋಮಶೇಖರ ಮೆಡ್ಲೇರಿ, ಇತರರು ಪಾತ್ರ ನಿರ್ವಹಿಸಿದರು.
ಸುಬ್ರಾಯ ಚೊಕ್ಕಾಡಿ ಅವರು ಬರೆದ ಮುನಿಸು ತರವೇ ಮುಗುದೆ ಪದ್ಯವನ್ನು ನಾಟಕದ ಶೆಟ್ಟಿ ಪಾತ್ರಧಾರಿ, ಹಾಸ್ಯ ಕಲಾವಿದ ದಯಾನಂದ ಬಿಳಗಿ ಅವರು ಹಾಡಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು. ಪತ್ನಿ ಬೇಸರ ಮಾಡಿಕೊಂಡು ಕುಳಿತಾಗ ಈ ಪದ್ಯ ಹಾಡಿದರು. ಶೌರ್ಯ ಪಾಟೀಲ ಎಂಬ 7 ತಿಂಗಳ ಮಗು ಕೂಡ ರಂಗದಲ್ಲಿದ್ದುದು ಗಮನ ಸೆಳೆಯಿತು.