ಶಿವಮೊಗ್ಗ: ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂಬರುವ ಸಚಿವ ಸಂಪುಟದ ಮುಂದಿಟ್ಟು ಜಾತಿ ಗಣತಿ ವರದಿ ಬಿಡುಗಡೆ ಮಾಡುವುದಾಗಿ ಹೇಳಿರುವುದು ಬೂಟಾಟಿಕೆ ಅಥವಾ ಘೋಷಣೆಗೆ ಸೀಮಿತವಾಗಬಾರದು. ತಕ್ಷಣ ಅನುಮೋದನೆ ಪಡೆದು ಸಾರ್ವಜನಿಕ ಚರ್ಚೆಗೆ ಬಿಡಬೇಕು ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಆಗ್ರಹಿಸಿದರು.
ಜಾತಿ ಗಣತಿ ವರದಿ ಬಿಡುಗಡೆಗೆ ಅವರದೇ ಪಕ್ಷದ ಸಚಿವರು, ಶಾಸಕರಲ್ಲಿ ಸಾಕಷ್ಟು ಪರ-ವಿರೋಧಗಳಿವೆ. ಈ ಕಾರಣಕ್ಕೆ ವರದಿ ಬಿಡುಗಡೆಗೆ ಹಿಂದೇಟು ಹಾಕಲಾಗುತ್ತಿದೆ. ಇದೀಗ ಜಾತಿ ಗಣತಿ ವರದಿ ಬಿಡುಗಡೆ ಮಾಡುವುದಾಗಿ ಘೋಷಿಸಿರುವುದು ತಮ್ಮ ವಿರುದ್ಧ ಕೇಳಿಬಂದಿರುವ ಮುಡಾ ಹಗರಣದ ವಿಷಯಾಂತರಕ್ಕೆ ಸೀಮಿತ ಆಗಬಾರದು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಕುಟುಕಿದರು.
160 ಕೋಟಿ ರೂ. ವ್ಯಯ ಮಾಡಿ ವರದಿ ಸಿದ್ಧಪಡಿಸಲಾಗಿದೆ. ಈ ಹಿಂದೆಯೂ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಜಾತಿ ಗಣತಿ ವರದಿ ಬಿಡುಗಡೆ ಮಾಡುವುದಾಗಿ ಹೇಳಿದ್ದರು. ಹೊಸದಾಗಿ ಸರ್ಕಾರ ರಚನೆ ಮಾಡಿದ ಬಳಿಕವೂ ಅದೇ ಹೇಳಿಕೆ ನೀಡಿದ್ದರು. ಇದೀಗ ದಿಢೀರ್ ಆಗಿ ವರದಿ ಜಾರಿಗೊಳಿಸುವುದಾಗಿ ಸಿಎಂ ಘೋಷಿಸಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದರು.
1931ರ ಬಳಿಕ ಜಾತಿ ಗಣತಿಯನ್ನೇ ಮಾಡಿಲ್ಲ. ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕಾಂತರಾಜ್ ನೇತೃತ್ವದಲ್ಲಿ 6 ಲಕ್ಷ ಜನರ ಸಮೀಕ್ಷೆ ಮಾಡಿ ವರದಿ ಸಿದ್ಧಪಡಿಸಲಾಗಿತ್ತು. ಕಾರಣಗಳಿಂದ ಇನ್ನೂ 30ರಿಂದ 40 ಲಕ್ಷ ಜನರ ಅಭಿಪ್ರಾಯ ಪಡೆದಿರಲಿಲ್ಲ. ವಿಚಿತ್ರವೆಂದರೆ ಕಾಂತರಾಜ್ ಸರ್ಕಾರಕ್ಕೆ ಕೊಟ್ಟ ವರದಿಗೆ ಕಾರ್ಯದರ್ಶಿ ಸಹಿಯೇ ಇರಲಿಲ್ಲ. ಹಾಗಾಗಿ ಅದು ರದ್ದಿಗೆ ಸಮನಾಗಿತ್ತು. ತದನಂತರ ಬಿಜೆಪಿ ಸರ್ಕಾರ ಬಂದ ಮೇಲೆ ಜಯಪ್ರಕಾಶ್ ಹೆಗ್ಡೆ ನೇತೃತ್ವದಲ್ಲಿ ವರದಿ ಸಿದ್ಧಪಡಿಸಲಾಗಿತ್ತು. ಕಳೆದ ಫೆಬ್ರವರಿಯಲ್ಲೇ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿದ್ದು ಏಳು ತಿಂಗಳಾದರೂ ಜಾರಿ ಮಾಡುತ್ತಿಲ್ಲ ಎಂದು ಕಿಡಿಕಾರಿದರು.