ಮೈಸೂರು: ಯಾವುದೇ ಸಂಸ್ಥೆ ಹುಟ್ಟು ಹಾಕುವುದು ಸುಲಭ. ಅದು ನಿರಂತರವಾಗಿ ಚಟುವಟಿಕೆಯಲ್ಲಿ ಇರುವಂತೆ ನೋಡಿಕೊಳ್ಳುವುದು ಸಂಸ್ಥೆ ಹುಟ್ಟುಹಾಕಿದವರ ಮೂಲ ಉದ್ದೇಶವಾಗಿರಬೇಕು ಎಂದು ಲಾಗೈಡ್ ಕಾನೂನು ಮಾಸಪತ್ರಿಕೆ ಗೌರವ ಸಂಪಾದಕರೂ ಆದ ಹಿರಿಯ ವಕೀಲ ಎಚ್.ಎನ್.ವೆಂಕಟೇಶ್ ಹೇಳಿದರು.
ನಗರದ ಅಶೋಕಪುರಂನಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಂವಿಧಾನ ಸಮರ್ಪಣಾ ದಿನ ಹಾಗೂ ಡಾ.ಭೀಮರಾವ್ ಸ್ಟಡಿ ಸೆಂಟರ್ ಉದ್ಘಾಟಿಸಿ ಮಾತನಾಡಿದರು.
ಒಂದು ಸಂಸ್ಥೆ ದೀರ್ಘ ಕಾಲ ಇರಬೇಕಾದರೆ ಸಂಸ್ಥೆಯಲ್ಲಿರುವ ಪದಾಧಿಕಾರಿಗಳಲ್ಲಿ ಸೇವಾ ಮನೋಭಾವ ಇರಬೇಕು. ಆಗ ಮಾತ್ರ ಇದು ಸಾಧ್ಯವಾಗುತ್ತದೆ. ಡಾ ಭೀಮರಾವ್ ಸ್ಟಡಿ ಸೆಂಟರ್ ದೀಘ ಕಾಲ ಉಳಿಯುವುದು. ಅದಕ್ಕೆ ಮೂಲ ಸೌಕರ್ಯಗಳನ್ನು ಒದಗಿಸಿದಾಗ ಮಾತ್ರ ಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಲಾಗೈಡ್ ಕಾನೂನು ಮಾಸಪತ್ರಿಕೆಯಿಂದ ಸ್ಟಡಿ ಸೆಂಟರ್ ಮೂಲ ಸೌಕರ್ಯಕ್ಕೆ 25 ಸಾವಿರ ರೂ. ದೇಣಿಗೆಯಾಗಿ ನೀಡುತ್ತಿದ್ದೇನೆ ಎಂದು ಘೋಷಿಸಿದರು.
ಅಧ್ಯಕ್ಷತೆ ವಹಿಸಿದ್ದ ಆರ್‌ಎಸ್‌ಎಸ್ ಪ್ರಾಂತೀಯ ಪ್ರಮುಖ್ ಮಾ. ವೆಂಕಟರಾಮ್ ಮಾತನಾಡಿ, ವಿದ್ಯಾರ್ಥಿಗಳಿಗೆ ಇಂದು ಮಾತೃಭಾಷೆ ಕನ್ನಡದ ಜತೆಗೆ ಇಂಗ್ಲಿಷ್ ಭಾಷೆಯ ಮೇಲೂ ಉತ್ತಮ ಹಿಡಿತವಿರಬೇಕು. ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಇಂಗ್ಲಿಷ್ ಭಾಷೆಯಲ್ಲಿಯೂ ಹೆಚ್ಚಾಗಿ ನಡೆಯುತ್ತಿದೆ. ಆದ್ದರಿಂದ ಅಶೋಕಪುರಂನ ಯುವಕರು ಹಾಗೂ ಯುವ ವಕೀಲರು ಸೇರಿ ಮಾಡಿರುವ ಈ ಸಂಸ್ಥೆ ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ ಎಂದರು.
ಮೈಸೂರು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಂ ಮಹದೇವಸ್ವಾಮಿ, ಕಾರ್ಯದರ್ಶಿ ಎಸ್.ಉಮೇಶ್, ಉಪಾಧ್ಯಕ್ಷ ಸಿದ್ದೇಗೌಡ, ನಿವೃತ್ತ ಅಭಿಯೋಜಕ ಧರಣಣ್ಣನವರ್, ನಗರಪಾಲಿಕೆ ಮಾಜಿ ಸದಸ್ಯೆ ಪಲ್ಲವಿ ಬೇಗಂ, ಮುಖಂಡರಾದ ಡಾ.ರಮೇಶ್ ಬಾಬು, ಅಭಿಷೇಕ್, ಜಯರಾಜ್, ವರುಣ್, ಸಂಸ್ಥೆ ಅಧ್ಯಕ್ಷ ಜಯಶಂಕರ್, ಹಿರಿಯ ವಕೀಲರಾದ ಎನ್.ಬಿ.ರಘು, ಗಿರೀಶ್ ಇತರರು ಇದ್ದರು.