ಕೊಳ್ಳೇಗಾಲದ ಸಂತ ಫ್ರಾನಿಸ್ಸ್ ಅಸ್ಸಿಸಿ ಶಾಲೆ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಎ.ಆರ್.ಕೃಷ್ಣಮೂರ್ತಿ, ಎಂ.ಮಂಜುಳಾ, ಮಂಜುಳಾ, ಶಾಂತರಾಜು ಬಸ್ತೀಪುರ, ಮಂಜುನಾಥ್ ಇದ್ದರು. 
ಜಿಲ್ಲೆ

ಉತ್ತಮ ಫಲಿತಾಂಶಕ್ಕಾಗಿ ಶಿಕ್ಷಕರು ಶ್ರಮ ವಹಿಸಲಿ

ಅಭಿನಯ್ ಎಚ್.ಎಂ

ಕೊಳ್ಳೇಗಾಲ; ಮುಂಬರುವ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯುವ ನಿಟ್ಟಿನಲ್ಲಿ ಶಿಕ್ಷಕರು ಶ್ರಮ ವಹಿಸಬೇಕು ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ತಿಳಿಸಿದರು.

2023-24ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.100 ರಷ್ಟು ಫಲಿತಾಂಶ ಪಡೆದ ಪ್ರೌಢಶಾಲಾ ಶಿಕ್ಷಕರು, ಸಹ ಶಿಕ್ಷಕರು ಹಾಗೂ ಹೆಚ್ಚು ಅಂಕ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಶಾಲಾ ಶಿಕ್ಷಣ ಇಲಾಖೆ, ಮುಖ್ಯ ಶಿಕ್ಷಕರ ಸಂಘ, ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ, ವಿಷಯ ಶಿಕ್ಷಕರ ವೇದಿಕೆ ಸಹಯೋಗದಲ್ಲಿ ಪಟ್ಟಣದ ಸಂತ ಫ್ರಾನಿಸ್ಸ್ ಅಸ್ಸಿಸಿ ಶಾಲೆ ಸಭಾಂಗಣದಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

2022-2023 ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ನಮ್ಮ ಜಿಲ್ಲೆ ರಾಜ್ಯದಲ್ಲಿ 7ನೇ ಸ್ಥಾನ ಪಡೆದುಕೊಂಡಿತ್ತು. ನಂತರ, 2023-2024ನೇ ಸಾಲಿನಲ್ಲಿ 24ನೇ ಸ್ಥಾನಕ್ಕೆ ಕುಸಿಯಿತು. ಈ ಬೆಳವಣಿಗೆ ನೋಡಿದರೆ ಫಲಿತಾಂಶ ಬೀಳಲು ಕಾರಣವೇನೆಂಬ ಪ್ರಶ್ನೆ ಮೂಡುತ್ತದೆ. ಸರ್ಕಾರ ಪಾರದರ್ಶಕವಾಗಿ ಪರೀಕ್ಷೆ ನಡೆಸಬೇಕೆಂದು ಸಿಸಿ ಕ್ಯಾಮರಾ ಹಾಗೂ ವೆಬ್‌ಕಾಸ್ಟ್ ಕಣ್ಗಾವಲಿನಲ್ಲಿ ಪರೀಕ್ಷೆ ನಡೆಸಿದೆ. ಇದರಿಂದ ನಮ್ಮ ಫಲಿತಾಂಶ ಕಡಿಮೆಯಾಯಿತೇನೊ ಎಂದು ಅನಿಸುತ್ತಿದೆ. ಆದರೆ, ಈ ವರ್ಷದಿಂದ ಫಲಿತಾಂಶ ಕೆಳಗೆ ಬೀಳಬಾರದು. ಶಿಕ್ಷಕರ ಪರಿಶ್ರಮ ಹೆಚ್ಚಾಗಬೇಕಿದೆ. ಮಕ್ಕಳಿಗೆ ಪ್ರಾಮಾಣಿಕವಾಗಿ ಬೋಧನೆ ಮಾಡಬೇಕು ಎಂದು ಸಲಹೆ ನೀಡಿದರು.

ಸ್ಪರ್ಧಾತ್ಮಕ ಯುಗದಲ್ಲಿ ಹೆಚ್ಚಿನ ಪೈಪೋಟಿ ಇದೆ. ಮಕ್ಕಳು ಇಂದಿನಿಂದಲೇ ಗುರಿ ಇಟ್ಟುಕೊಂಡು ಓದಬೇಕು. ಸಿಇಟಿ ಪರೀಕ್ಷೆಯಲ್ಲಿ ಒಳ್ಳೆಯ ರ‌್ಯಾಂಕ್ ಪಡೆದರೆ ಓದಿನ ಕ್ಷೇತ್ರವನ್ನು ಅಯ್ಕೆ ಮಾಡಿಕೊಳ್ಳಬಹುದು ಎಂದರು.

ಮುರಾರ್ಜಿ ವಸತಿ ಶಾಲೆ ಹಾಗೂ ಆದರ್ಶ ಶಾಲೆಯಲ್ಲಿನ ಗುಣಮಟ್ಟ ಶಿಕ್ಷಣದಿಂದ ಫಲಿತಾಂಶ ಹೆಚ್ಚಿದೆ. ಬಡ ಮಕ್ಕಳು ಓದುವ ಸರ್ಕಾರಿ ಶಾಲೆಯಲ್ಲೂ ಈ ರೀತಿಯಲ್ಲೇ ಫಲಿತಾಂಶ ಬರಬೇಕು ಎಂದು ಹೇಳಿದರು.

ಸಂತ ಪ್ರಾನ್ಸಿಸ್ ಅಸ್ಸಿಸ್ಸಿ ಚರ್ಚ್ ಫಾಧರ್ ರಾಯಪ್ಪ ಮಾತನಾಡಿ, ಪ್ರತಿಭೆ ಎಲ್ಲರಲ್ಲೂ ಇರುತ್ತದೆ. ಅದನ್ನು ಹೊರತರುವ ಪ್ರಯತ್ನ ಮಾಡಬೇಕಿದೆ ಎಂದರು.

ತಹಸೀಲ್ದಾರ್ ಮಂಜುಳಾ, ಬಿಇಒ ಮಂಜುಳಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ತೋಟೇಶ್, ನಗರಸಭೆ ಸದಸ್ಯರಾದ ಶಾಂತರಾಜು ಬಸ್ತೀಪುರ, ಶಂಕರನಾರಾಯಣ ಗುಪ್ತ, ಜಯಮೇರಿ, ಮಂಜುನಾಥ್, ಮಾಜಿ ಸದಸ್ಯ ಅಕ್ಮಲ್ ಪಾಷ, ಅಕ್ಷರ ದಾಸೋಹ ವಿಭಾಗದ ರಂಗಸ್ವಾಮಿ, ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಶಿವರಾಜು, ಸಹ ಶಿಕ್ಷಕರ ಸಂಘದ ಅಕ್ಬರ್, ಜಿಲ್ಲಾ ಸಹ ಶಿಕ್ಷಕರ ಸಂಘದ ಶಾಂತರಾಜು, ದೈಹಿಕ ಶಿಕ್ಷಣ ಪರಿವೀಕ್ಷಕ ಸ್ಟೀವನ್ ಮತ್ತಿತರರಿದ್ದರು.