ಜಿಲ್ಲೆ

ಶಿಕ್ಷಕರು ಎಚ್ಚರಿಕೆಯ ಹೆಜ್ಜೆಗಳನ್ನಿಡಲಿ

ಹಾನಗಲ್ಲ: ಶಿಕ್ಷಕರು ಜ್ಞಾನದ ಬೇರುಗಳಿದ್ದಂತೆ. ಶಿಕ್ಷಕರಿಂದ ವಿದ್ಯಾರ್ಥಿಗಳು ಪಠ್ಯವನ್ನು ಮಾತ್ರ ಕಲಿಯುವುದಿಲ್ಲ, ಬದುಕನ್ನೂ ಶಿಕ್ಷಕನಿಂದ ಅನುಕರಿಸುತ್ತಾರೆ. ಹೀಗಾಗಿ ಶಿಕ್ಷಕರು ಎಚ್ಚರಿಕೆಯ ಹೆಜ್ಜೆಗಳನ್ನಿಡಬೇಕಿದೆ ಎಂದು ಹುಬ್ಬಳ್ಳಿ ಮೂರುಸಾವಿರಮಠದ ಜಗದ್ಗುರು ಗುರುಸಿದ್ಧರಾಜಯೋಗೀಂದ್ರ ಮಹಾಸ್ವಾಮಿಗಳು ಹೇಳಿದರು.

ಪಟ್ಟಣದ ಸದಾಶಿವ ಮಂಗಲ ಭವನದಲ್ಲಿ ತಾಲೂಕು ಆಡಳಿತ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ವಿವಿಧ ಶಿಕ್ಷಕ ಸಂಘಟನೆಗಳು ಶನಿವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆಯ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು. ಶೈಕ್ಷಣಿಕ ವ್ಯವಸ್ಥೆಯ ಸುಧಾರಣೆಗೆ ಸಮಾಜದ ಎಲ್ಲರೂ ಕೈ ಜೋಡಿಸಬೇಕು. ಆಗ ಶಿಕ್ಷಣ ವಲಯ ಅಭಿವೃದ್ಧಿಯಾಗಲಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಶ್ರೀನಿವಾಸ ಮಾನೆ, ಶಾಲೆಗಳ ಅಭಿವೃದ್ಧಿಗೆ ಸರ್ಕಾರದತ್ತ ನೋಡದೇ ಸಮುದಾಯದ ಸಹಭಾಗಿತ್ವದ ಅಗತ್ಯವಿದೆ. ತಾಲೂಕಿನ ಎಲ್ಲ ಸರ್ಕಾರಿ ಪ್ರೌಢಶಾಲೆಯ ಎಸ್​ಡಿಎಂಸಿ ಅರ್ಧ ಹಣ ವಂತಿಗೆ ನೀಡಿದರೆ ಇನ್ನರ್ಧ ನಾವು ಹಾಕಿ ಎಲ್ಲ ವಿದ್ಯಾರ್ಥಿಗಳಿಗೆ ಡೆಸ್ಕ್ ನೀಡಲು ಸಿದ್ಧರಿದ್ದೇವೆ ಎಂದು ಶಾಸಕ ಮಾನೆ ಘೊಷಿಸಿದರು.

ಉಪನ್ಯಾಸ ನೀಡಿದ ತುಮಕೂರಿನ ಡಾ. ಶಿವಾನಂದ ಶಿವಾಚಾರ್ಯರು, ಶಿಕ್ಷಕರ ದಿನಾಚರಣೆ ಶಿಕ್ಷಕರಿಗೆ ಆತ್ಮಾವಲೋಕನದ ದಿನವಾಗಬೇಕು. ಶಿಕ್ಷಕರು ಆದರ್ಶಗಳ ಪ್ರೇರಕರಾಗಬೇಕು ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ.ಸಾಲಿಮಠ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ತಹಸೀಲ್ದಾರ್ ರವಿಕುಮಾರ ಕೊರವರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ವಿಜಯೇಂದ್ರ ಯತ್ನಳ್ಳಿ, ತಾಲೂಕಾಧ್ಯಕ್ಷ ಸಿ.ಜಿ. ಪಾಟೀಲ, ಪದವಿಪೂರ್ವ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಎಸ್.ಎಸ್. ನಿಸ್ಸೀಮಗೌಡರ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಎಫ್. ಚಿಕ್ಕೇರಿ, ಪುರಸಭೆ ಸದಸ್ಯರಾದ ಶಂಶಿಯಾಬಾನು ಬಾಳೂರ, ಮಮತಾ ಆರೇಗೊಪ್ಪ, ಕ್ಷೇತ್ರ ಸಮನ್ವಯಾಧಿಕಾರಿ ಎಂ.ಎಸ್. ಗುಂಡಪಲ್ಲಿ, ಶಿಕ್ಷಕರ ಸಂಘಟನೆಗಳ ಪದಾಧಿಕಾರಿಗಳಾದ ಬಿ.ಎಸ್. ಕರಿಯಣ್ಣನವರ, ಅನಿಲ ಗೋಣೆಣ್ಣನವರ, ಎಸ್.ವಿ. ಬೂದಿಹಾಳ, ರಾಕೇಶ ಜಿಗಳಿ, ಸುರೇಶ ಹಿರೂರ, ಎ.ವಿ. ಹನುಮಾಪುರ, ಅನಿತಾ ಕಿತ್ತೂರ, ಸಂತೋಷ ದೊಡ್ಡಮನಿ, ಆರ್.ಬಿ. ಬಡಿಗೇರ ಇತರರು ಉಪಸ್ಥಿತರಿದ್ದರು.

ಸನ್ಮಾನ: ಇದೇ ಸಂದರ್ಭದಲ್ಲಿ ಉತ್ತಮ ಶಿಕ್ಷಕ ರಾಜ್ಯ ಪ್ರಶಸ್ತಿ ಪುರಸ್ಕೃತ ಎಸ್.ಎಫ್. ಕಠಾರಿ, ಜಿಲ್ಲಾ ಮಟ್ಟದ ಪ್ರಶಸ್ತಿಗೆ ಭಾಜನರಾದ ಎಸ್.ಪಿ. ಚಿಲ್ಲೂರಮಠ, ಜಿ.ಕೆ. ಚಂದ್ರಗಿರಿ, ಎಚ್.ಎಸ್. ಟೇಲರ್, ಸರಿನ್​ತಾಜ್ ಕೋಡ, ಎಸ್.ಎ. ಉಮಚಗಿ ಅವರನ್ನು ತಾಲೂಕು ಆಡಳಿತದಿಂದ ಸನ್ಮಾನಿಸಲಾಯಿತು