ನರಗುಂದ: ಶಾಲಾ ಮಕ್ಕಳಿಗೆ ಶಿಕ್ಷಕರು ಗಾಳಿಪಟದ ಮೂಲಕ ಸಾಮಾಜಿಕ ಸಂದೇಶ ನೀಡಬೇಕು ಎಂದು ಬಾಬಾಸಾಹೇಬ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ರಾಜು ಕಲಾಲ ಹೇಳಿದರು.
ಕಾರ ಹುಣ್ಣಿಮೆ ಪ್ರಯುಕ್ತ ಪಟ್ಟಣದ ರೋಟರ್ಯಾಕ್ಟ್ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ, ಪ್ರೌಢ ಶಾಲೆ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಗಾಳಿಪಟ ಸಂಭ್ರಮಾಚರಣೆಗೆ ಇತ್ತೀಚೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಗಾಳಿಪಟ ಮಾನವನ ಹಾರುವಿಕೆಗೆ ಮೂಲ ಪರಿಕಲ್ಪನೆ ಎಂದರೆ ತಪ್ಪಾಗಲಾರದು. ಗಾಳಿಪಟದ ಕಟ್ಟುವಿಕೆಯೂ ವಿಶೇಷ ಕಲೆ ಆಗಿರುವುದರಿಂದ ನಶಿಸಿ ಹೋಗುತ್ತಿರುವ ಈ ಕಲೆಯನ್ನು ಉಳಿಸಿ ಬೆಳೆಸುವುದು ಅವಶ್ಯಕವಾಗಿದೆ. ಮನುಷ್ಯನ ಜೀವನ ಕೂಡ ಸೂತ್ರವಿಲ್ಲದ ಗಾಳಿ ಪಟವಿದ್ದಂತೆ. ಇಲ್ಲಿ ಎಲ್ಲರೂ ಕಷ್ಟಪಟ್ಟು ಮೇಲೇರಬೇಕು. ನಿರಂತರ ಶ್ರಮಜೀವಿಗಳಾಗಿ ನಾವೆಲ್ಲರೂ ಜೀವನದಲ್ಲಿ ಗಾಳಿ ಪಟದಂತೆ ಎತ್ತರಕ್ಕೆ ಬೆಳೆಯಬೇಕು. ಪ್ರಕೃತಿಯೊಂದಿಗೆ ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕು ಎಂದು ತಿಳಿಸಿದರು.
ಶಾಲೆ ಮುಖ್ಯೋಪಾಧ್ಯಾಯ ಪಿ.ವಿ. ಕೆಂಚನಗೌಡ್ರ, ದೈಹಿಕ ಶಿಕ್ಷಣ ಶಿಕ್ಷಕ ಪಿ.ಎಸ್. ಕಗಧಾಳ, ಬಿ.ಎಸ್. ಕಬಾಡ್ರ, ವೈ.ಆರ್. ತಳವಾರ, ಎಂ.ಆರ್. ಜವಳಿ, ಜ್ಯೋತಿ ಹಿರೇಮನಿ, ಎಸ್.ವಿ. ಬ್ಯಾಹಟ್ಟಿ, ಎಸ್.ಎಸ್. ಸಂಪಗಾವ, ಇತರರು ಉಪಸ್ಥಿತರಿದ್ದರು.