ಕೆಜಿಎಫ್- ತಾಲೂಕಿನ ಶಿಕ್ಷಕರು ಶಿಕ್ಷಣ ಕ್ಷೇತ್ರದಲ್ಲಿ ಒಂದು ಕ್ರಾಂತಿ ಸೃಷ್ಟಿಸುವ ಮೂಲಕ ಸುಧಾರಣೆ ತರಬೇಕು. ಆಗ ಮಾತ್ರ ನನಗೆ ತೃಪ್ತಿ ದೊರಕುತ್ತದೆ ಎಂದು ಶಾಸಕಿ ರೂಪಕಲಾ ತಿಳಿಸಿದರು.
ನಗರದ ಹೊರವಲಯದ ಪಾರಂಡಹಳ್ಳಿಯ ಎಸ್.ಎಸ್.ಮಹಲ್ನಲ್ಲಿ ಹಮ್ಮಿಕೊಂಡಿದ್ದ ಡಾ.ಎಸ್.ರಾಧಾಕೃಷ್ಣನ್ ಅವರ 137ನೇ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ನಿಮ್ಮ ಬೆನ್ನ ಹಿಂದೆ ಸರ್ಕಾರ ನಿಲ್ಲುವುದೋ ಅಥವಾ ನೀವು ಸರ್ಕಾರದ ಬೆನ್ನ ಹಿಂದೆ ನಿಂತು ಶಿಕ್ಷಣ ಕ್ಷೇತ್ರವನ್ನು ಗಟ್ಟಿಗೊಳಿಸಿವಿರೋ ನಿಮಗೆ ಬಿಟ್ಟಿದ್ದು ಎಂದರು.
ತಾಲೂಕಿನ ಶಿಕ್ಷಕರು ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ತರುವ ಮೂಲಕ ಶಿಕ್ಷಣ ಕ್ಷೇತ್ರದ ಸುಧಾರಕರು ಎಂಬ ಹೆಸರನ್ನು ರಾಜ್ಯದ ಮೂಲೆ ಮೂಲೆಗೆ ಮುಟ್ಟಿಸುವ ಕೆಲಸ ಮಾಡಬೇಕು. ಶಿಕ್ಷಣ ಕ್ಷೇತ್ರದಲ್ಲಿ ಹೊರಗಿನವರು ನಿಮ್ಮ ತಾಲೂಕು ಕಡೆ ಸ್ಥಾನದಲ್ಲಿ ಎಂದು ತಿಳಿಸಿದಾಗ ನನಗೆ ತಲೆ ತಗ್ಗಿಸುವ ಪರಿಸ್ಥಿತಿ ಬಂದಿತ್ತು ಎಂದು ವಿಷಾದ ವ್ಯಕ್ತಪಡಿಸಿದರು.
ತಾಲೂಕಿನ ಗ್ರಾಮೀಣ ಮತ್ತು ನಗರ ಭಾಗದಲ್ಲಿ ಸರ್ಕಾರಿ ಶಾಲೆಗಳಲ್ಲಿ ಫಲಿತಾಂಶಗಳ ಹಿನ್ನೆಡೆಗೆ ಕಾರಣ ಯಾರು ಎಂಬುದನ್ನು ಪ್ರತಿಯೊಬ್ಬ ಶಿಕ್ಷಕರು ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು. ಗ್ರಾಮಗಳಲ್ಲಿ ಶಿಕ್ಷಕಿ ನಡೆದುಕೊಂಡು ಬರುತ್ತಿದ್ದಾರೆ. ನಮ್ಮ ಶಾಲೆಗೆ ಶಿಕ್ಷಕಿ ಬರುತ್ತಿದ್ದಾರೆ ಎಂದು ಹೇಳುತ್ತಾರೆ. ಆದರೆ ಅವರ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ದಾಖಲು ಮಾಡುತ್ತಾರೆ. ಇಂತಹ ಪ್ರವೃತ್ತಿ ಬದಲಾವಣೆಯಾಗಬೇಕು ಎಂದು ಹೇಳಿದರು.
ಪಾಲಕರು ಸರ್ಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸುವಲ್ಲಿ ಶಿಕ್ಷಕರ ಮತ್ತು ಪಾಲಕರ ಪಾತ್ರ ಸಹ ಸರಿಸಮನವಾಗಿದೆ. ಆದ್ದರಿಂದ ಶಿಕ್ಷಕರು ಶಿಕ್ಷಣ ಕ್ಷೇತ್ರದ ಸುಧಾರಕರಾಗಿ ಬದಲಾವಣೆಯಾಗಬೇಕು. ನೀವು ನಿರ್ಮಿಸುತಿರುವ ಗುರು ಭವನದ ಕಟ್ಟಡದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಮಾಡುವ ನಿಟ್ಟಿನಲ್ಲಿ ಪ್ರಯತ್ನ ಮಾಡಬೇಕು. ನಿಮ್ಮ ಬೇಡಿಕೆಗಳನ್ನು ಪ್ರಾಮಾಣಿಕವಾಗಿ ಈಡೇರಿಸುವ ಕೆಲಸ ಮಾಡಲಾಗುವುದು ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಾಂಶು ರಜಪೂತ್ ಮಾತನಾಡಿ, ನಮ್ಮ ಪಾಲಕರು ಸಹ ಶಿಕ್ಷಕ ವೃತ್ತಿಯನ್ನು ಮಾಡಿರುವುದರಿಂದ ನನಗೆ ಶಿಕ್ಷಕರ ಮೇಲೆ ಅಪಾರವಾದ ಗೌರವವಿದೆ. ನಿಮ್ಮ ವೃತ್ತಿಯನ್ನು ಗೌರವಿಸಿ ನೀವುಗಳು ಈ ದೇಶದ ಮುನ್ನುಡಿಗೆ ಕೈಗನ್ನಡಿಯಂತಿ ನೀವು ಇದ್ದಿರಿ ಎಂದು ಹೇಳಿದರು.
ಗ್ಯಾರಂಟಿ ಸಮಿತಿ ಅಧ್ಯಕ್ಷ ರಾಧಾಕೃಷ್ಣರೆಡ್ಡಿ, ನಗರಾಭಿವೃದ್ಧಿ ಪ್ರಾಧಿಕಾರ ಆಯುಕ್ತ ಧಮೇರ್ಂದ್ರ ಇದ್ದರು.