ಜಿಲ್ಲೆ

ಪ್ರತಿಭೆ ಗುರುತಿಸುವ ಕೆಲಸವಾಗಲಿ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ
ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳು ದೈಹಿಕ ಹಾಗೂ ಮಾನಸಿಕ ಸದೃಢತೆಗೆ ಕಾರಣ. ಪ್ರತಿಯೊಬ್ಬರಲ್ಲೂ ಒಂದಿಲ್ಲ ಒಂದು ಪ್ರತಿಭೆ ಇರುತ್ತದೆ. ಅವಕಾಶಗಳ ಕೊರತೆಯಿಂದ ಅಂತರಂಗದಲ್ಲಿ ಅದು ಮುದುಡುವ ಸಾಧ್ಯತೆ ಇದೆ ಎಂದು ಜನತಾ ಶಿಕ್ಷಣ ಸಮಿತಿ ಕಾರ್ಯದರ್ಶಿ ಡಾ. ಅಜಿತ ಪ್ರಸಾದ ಹೇಳಿದರು.
ನಗರದ ಜೈನ್ ಮಿಲನ ಹಾಗೂ ಜನತಾ ಶಿಕ್ಷಣ ಸಮಿತಿ ಸಹಯೋಗದಲ್ಲಿ ಧಾರವಾಡ ಸುತ್ತಲಿನ ಗ್ರಾಮಗಳ ಜೈನ ಬಾಂಧವಗೆ ಜೆಎಸ್‌ಎಸ್ ಕಾಲೇಜಿನಲ್ಲಿ ಭಾನುವಾರ ಆಯೋಜಿಸಿದ್ದ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಸ್ನೇಹ ಸಮ್ಮೇಳನ-2024 ಉದ್ಘಾಟಿಸಿ ಅವರು ಮಾತನಾಡಿದರು.
ಅಖಿಲ ಭಾರತ ಮಟ್ಟದಲ್ಲಿ ಹಾಗೂ ರಾಜ್ಯ, ಜಿಲ್ಲಾ ಮಟ್ಟಗಳಲ್ಲಿ ಜೈನ ಮಿಲನ ಶಾಖೆಗಳು ನಡೆದು ಬಂದ ಬಗ್ಗೆ ವಿವರಿಸಿದ ಅವರು, ಇಂತಹ ಸಮ್ಮಿಲನಗಳು ಪದೇ ಪದೇ ಜರುಗುವಂತಾಗಲಿ ಎಂದು ಆಶಿಸಿದರು.
ಕರ್ನಾಟಕ ಬಯಲು ಸೀಮೆ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ತವನಪ್ಪ ಅಷ್ಟಗಿ ಮಾತನಾಡಿ, ಜೈನ ಮಿಲನದ ಈ ಕಾರ್ಯ ಶ್ಲಾಘನೀಯ. ಇಂತಹ ಕಾರ್ಯಗಳಿಗೆ ಹಣ ಖರ್ಚು ಮಾಡಲು ಕೊಡುವ ಜನರಿದ್ದಾರೆ. ಆದರೆ ಕೆಲಸ ಮಾಡುವ ಮನೋಭಾವ ಇದ್ದಾಗಲೇ ಉತ್ತಮ ಕಾರ್ಯಗಳು ನಡೆಯಲು ಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಎಸ್‌ಡಿಎಂ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಜೀವಂಧರ ಕುಮಾ ಮಾತನಾಡಿ, ದೇಶಾದ್ಯಂತ ಜೈನ ಮಿಲನಗಳು ಇವೆ. ಕರ್ನಾಟಕದ ಅನೇಕ ಶಾಖೆಗಳಲ್ಲಿ ಅತ್ಯಂತ ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸುತ್ತಿರುವ ಜೈನ ಮಿಲನಗಳಲ್ಲಿ ಧಾರವಾಡ ಜೈನ ಮಿಲನ ಸಹ ಒಂದಾಗಿರುವುದು ಸಂತೋಷದ ಸಂಗತಿ ಎಂದರು.
ಸುಜಾತ ಹಡಗಲಿ, ಸಂಗೀತಾ ಉಪಾಧ್ಯೆ, ಡಾ. ಸೂರಜ್ ಜೈನ್, ಧಾರವಾಡ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಾವಿರಕ್ಕೂ ಅಧಿಕ ಜನರು ಪಾಲ್ಗೊಂಡಿದ್ದರು.
ಮಹಾವೀರ ಉಪಾಧ್ಯೆ ಸ್ವಾಗತಿಸಿದರು. ಜಿನದತ್ತ ಹಡಗಲಿ ನಿರೂಪಿಸಿದರು. ಸುನಂದಾ ವರೂರ ವಂದಿಸಿದರು.