ಕೆ.ಆರ್.ಪೇಟೆ ತಾಲೂಕಿನ ಅಕ್ಕಿಹೆಬ್ಬಾಳು ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ವಿದ್ಯಾರ್ಥಿಗಳು ನಾಟಕ ಪ್ರದರ್ಶನ ಮಾಡಿದರು. 
ಜಿಲ್ಲೆ

ವಿದ್ಯಾರ್ಥಿಗಳು ಜಾನಪದ ಕಲೆ, ಸಂಸ್ಕೃತಿ ಉಳಿಸಲಿ

ಶಿವಶಂಕರ್ ಎಂ. ಹೆಬ್ಬಳ್ಳ

ಕೆ.ಆರ್.ಪೇಟೆ: ವಿದ್ಯಾರ್ಥಿಗಳು ಬೇಸಿಗೆ ರಜೆಯನ್ನು ವ್ಯರ್ಥ ಮಾಡದೆ ಇಂತಹ ಪಠ್ಯೇತರ ಶಿಬಿರಗಳಲ್ಲಿ ಭಾಗವಹಿಸಿ ಜಾನಪದ ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಬೇಕೆಂದು ರಾಜ್ಯ ಆರ್‌ಟಿಒ ಅಧಿಕಾರಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ್ ಕಿವಿಮಾತು ಹೇಳಿದರು.

ತಾಲೂಕಿನ ಅಕ್ಕಿಹೆಬ್ಬಾಳು ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿರುವ ಅಕ್ಕಿಹೆಬ್ಬಾಳು ರಂಗಮಂದಿರದಲ್ಲಿ ಲೋಕಾಯನ ಕಲ್ಚರಲ್ ಫೌಂಡೇಶನ್ ಆಯೋಜಿಸಿದ್ದ 14ನೇ ವರ್ಷದ ಲೋಕಾಯನ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.

ಲೋಕಾಯನ ಕಲ್ಚರಲ್ ಫೌಂಡೇಶನ್ ಮಕ್ಕಳಿಗಾಗಿ ಬೇಸಿಗೆ ಶಿಬಿರವನ್ನು ಆಯೋಜನೆ ಮಾಡಿ ಜಾನಪದ ಕಲೆಗಳು, ಚಿತ್ರಕಲೆ, ಕರಕುಶಲ ಕಲೆ, ನಾಟಕದಲ್ಲಿ ಅಭಿನಯ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಮಾಡಿಕೊಂಡು ಬಂದಿದೆ. ಈ ವಷರ್ 14ನೇ ಬೇಸಿಗೆ ಶಿಬಿರವನ್ನು ಯಶಸ್ವಿಯಾಗಿ ಮುಗಿಸಿದೆ. ವಿದ್ಯಾರ್ಥಿಗಳು ಮೊಬೈಲ್ ಎಂಬ ಭೂತದಿಂದ ದೂರವಿದ್ದು ಹೊಸ ಕಲೆಗಳನ್ನು ಅಭ್ಯಾಸ ಮಾಡಿ ಯಶಸ್ಸಿನ ದಾರಿಯನ್ನು ಹಿಡಿಯಬೇಕು ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಪೂರ್ಣಚಂದ್ರ ತೇಜಸ್ವಿ ಮಾತನಾಡಿದರು. ವೇದಿಕೆ ಕಾರ್ಯಕ್ರಮದ ನಂತರ ರಂಗೀಲಾಲನ ನಿಲುವಂಗಿ ಮತ್ತು ಹ್ಯಾಪಿ ಬರ್ತ್ಡೇ ಟು ಯು ಎಂಬ ನಾಟಕ ಪ್ರದರ್ಶನವಾಯಿತು.

ಲೋಕಾಯನ ಸಂಸ್ಥೆಯ ಮುಖ್ಯಸ್ಥ ಶಶಿಧರ್ ಭಾರಿಘಾಟ್, ಚಿತ್ರ ನಿರ್ದೇಶಕ ಉಮಾಶಂಕರ್, ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಆರ್.ವಾಸು, ಮುಖ್ಯ ಶಿಕ್ಷಕ ಅಮಿತ್, ಯುವ ಸಾಹಿತಿ ಮೊಹಮ್ಮದ್ ಅಜರುದ್ದೀನ್ ಸೇರಿದಂತೆ ಅಕ್ಕಿ ಹೆಬ್ಬಾಳು ಗ್ರಾಮದ ಹಲವು ಮುಖಂಡರು ಭಾಗವಹಿಸಿದ್ದರು.