ಕ್ರೀಡಾಕೂಟದಲ್ಲಿ ವಿದ್ಯಾರ್ಥಿಗಳು ಪಥ ಸಂಚಲನ ನಡೆಸುವ ಮೂಲಕ ಗಣ್ಯರಿಗೆ ಗೌರವ ವಂದನೆ ಸಲ್ಲಿಸಿದರು.  
ಜಿಲ್ಲೆ

ವಿದ್ಯಾರ್ಥಿಗಳು ಕ್ರೀಡಾ ಮನೋಭಾವ ಬೆಳೆಸಿಕೊಳ್ಳಲಿ

ಎ. ಆರ್. ರಘುರಾಮ

ಹನೂರು: ಶೈಕ್ಷಣಿಕ ವಲಯದ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಜಿಲ್ಲೆಯಲ್ಲಿಯೇ ಉತ್ತಮ ಸ್ಥಾನದಲ್ಲಿದ್ದಾರೆ ಎಂದು ಬಿಇಒ ಮಹೇಶ್ ಮೆಚ್ಚುಗೆ ವ್ಯಕ್ತಪಡಿಸಿದರು.

ಪಟ್ಟಣದ ಶ್ರೀ ಮಹದೇಶ್ವರ ಕ್ರೀಡಾಂಗಣದಲ್ಲಿ ಮಂಗಳವಾರ 14 ವರ್ಷದೊಳಗಿನ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಹೋಬಳಿ ಮಟ್ಟದ ಕ್ರೀಡಾಕೂಟಕ್ಕೆ ಗುಂಡು ಎಸೆಯುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ಹನೂರು ಭಾಗದಲ್ಲಿ ವಿದ್ಯಾರ್ಥಿಗಳು ಸದೃಢರಾಗಿದ್ದು, ಕ್ರೀಡೆಗಳಲ್ಲಿ ಹೆಚ್ಚು ಭಾಗವಹಿಸುತ್ತಿರುವುದು ಮೆಚ್ಚುಗೆ ಸಂಗತಿ. ಇದರಿಂದ ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಸಾಧನೆಗೈಯಲು ಸಾಧ್ಯವಾಗಿದೆ. ವಲಯದಲ್ಲಿ ಪ್ರಸ್ತುತ ದೈಹಿಕ ಶಿಕ್ಷಣ ಶಿಕ್ಷಕರ ಕೊರತೆ ನಡುವೆಯೂ ಆಯಾ ಶಾಲೆಯಲ್ಲಿ ಶಿಕ್ಷಕರೇ ಮಕ್ಕಳಿಗೆ ತರಬೇತಿ ನೀಡುತ್ತಿದ್ದು, ಈ ವರ್ಷವೂ ಉತ್ತಮ ಸಾಧನೆ ಮಾಡುವ ವಿಶ್ವಾಸವಿದೆ. ಕ್ರೀಡೆಯಲ್ಲಿ ಸೋಲು, ಗೆಲುವು ಸಾಮಾನ್ಯ. ಆದ್ದರಿಂದ ಪ್ರತಿಯೊಬ್ಬರೂ ಕ್ರೀಡಾ ಮನೋಭಾವವನ್ನು ಹೊಂದುವುದರ ಮೂಲಕ ಎರಡನ್ನೂ ಸಮಾನವಾಗಿ ಸ್ವೀಕರಿಸಬೇಕು ಎಂದರು.

ಇದಕ್ಕೂ ಮುನ್ನ ಕ್ರೀಡಾ ಧ್ವಜಾರೋಹಣ ನೆರವೇರಿಸುವುದರ ಜತೆಗೆ ಕ್ರೀಡಾ ಜ್ಯೋತಿ ಬೆಳಗಿಸಲಾಯಿತು. ವಿವಿಧ ಶಾಲೆಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳು ಪಥ ಸಂಚಲನ ನಡೆಸುವ ಮೂಲಕ ಗಣ್ಯರಿಗೆ ಗೌರವ ವಂದನೆ ಸಲ್ಲಿಸಿದರು. ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಎಂ.ಮಹಾದೇವ, ಶಿಕ್ಷಣ ಸಂಯೋಜಕರಾದ ಕಿರಣ್‌ಕುಮಾರ್, ಕಂದವೇಲು, ಚಿನ್ನಪ್ಪಯ್ಯ, ಮಹೇಶ್, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಉಪಾಧ್ಯಕ್ಷೆ ಮೋಕ್ಷಾ ರಾಕಿಣಿ ಇತರರು ಇದ್ದರು.

.