ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಶ್ರೀಮತಿ ವಿದ್ಯಾ ಪಿ. ಹಂಚಿನಮನಿ ಅಂತಾರಾಷ್ಟ್ರೀಯ ಶಾಲೆಯಲ್ಲಿ ಶಾಲಾ ಸಂಸತ್ತಿನ ಚುನಾಯಿತ ಸದಸ್ಯರ ಪದಗ್ರಹಣ ಸಮಾರಂಭವನ್ನು ಶನಿವಾರ ನೆರವೇರಿಸಲಾಯಿತು.
ಅತಿಥಿಯಾಗಿ ಆಗಮಿಸಿದ್ದ ಮೃಣಾಲ ಜೋಶಿ ಮಾತನಾಡಿ, ಜೀವನದಲ್ಲಿ ಶಿಸ್ತು, ನಾಯಕತ್ವ ಗುಣ ಅತ್ಯಂತ ಮುಖ್ಯ. ಮಕ್ಕಳು ಶಾಲಾ ಹಂತದಿಂದಲೇ ಈ ಗುಣಗಳನ್ನು ಅಳವಡಿಸಿಕೊಂಡು ಉತ್ತಮ ಪ್ರಜೆಗಳಾಗಬೇಕು ಎಂದ ಅವರು, ಚುನಾಯಿತ ಸದಸ್ಯರಿಗೆ ಬ್ಯಾಡ್ಜ್ಗಳನ್ನು ವಿತರಿಸಿದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆ ಅಧ್ಯಕ್ಷ ಪ್ರೊ. ಪ್ರಹ್ಲಾದ ಹಂಚಿನಮನಿ ಮಾತನಾಡಿ, ಪ್ರತಿ ವಿದ್ಯಾರ್ಥಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚಿನ ಅವಕಾಶ ನೀಡಿದರೆ ಅವರಲ್ಲಿ ನಾಯಕತ್ವ ಗುಣ ಬೆಳೆಯಲಿದೆ. ಈ ನಿಟ್ಟಿನಲ್ಲಿ ಹಂಚಿನಮನಿ ಶಾಲೆ ಸದಾ ಮಕ್ಕಳಿಗೆ ಪ್ರೋತ್ಸಾಹ ನೀಡುತ್ತಿದೆ ಎಂದರು.
ಶಾಲಾ ಪ್ರಾಚಾರ್ಯ ವಿದ್ವಾನ್ ನವೀನ್ ಭಟ್ ಶಾಲಾ ಸಂಸತ್ತಿನ ಚುನಾಯಿತ ಸದಸ್ಯರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಸಂಸ್ಥೆ ಕಾರ್ಯದರ್ಶಿ ಮನೋಜ ಹಂಚಿನಮನಿ, ಸಹ ಕಾರ್ಯದರ್ಶಿ ವರ್ಷಾ ಹಂಚಿನಮನಿ, ಶಿಕ್ಷಕರು, ಇತರರು ಇದ್ದರು.