ವಿಜಯವಾಣಿ ಸುದ್ದಿಜಾಲ ಧಾರವಾಡ
ಸಾಹಿತಿಗಳು ತಮ್ಮ ಜ್ಞಾನವನ್ನು ಸಾಹಿತ್ಯ ರೂಪದಲ್ಲಿ ಕಟ್ಟಿಕೊಟ್ಟು ಜನಸಾಮಾನ್ಯರ ಜ್ಞಾನ ವಿಸ್ತರಿಸಲು ನೆರವಾಗಬೇಕು. ಇದು ವಿಶೇಷವಾಗಿ ವೈದ್ಯ ಸಾಹಿತಿಗಳಿಗೆ ಹಾಗೂ ಪಶುವೈದ್ಯ ಸಾಹಿತಿಗಳಿಗೆ ಅತ್ಯಗತ್ಯ ಎಂದು ವೈದ್ಯ ಡಾ. ಸಂಜೀವ ಅಭಿಪ್ರಾಯಪಟ್ಟರು.
ಕನ್ನಡ ಪಶುವೈದ್ಯ ಸಾಹಿತ್ಯ ಪರಿಷತ್ ವತಿಯಿಂದನಾಡೋಜ ಡಾ. ಪಾಟೀಲ ಪುಟ್ಟಪ್ಪ ಸಭಾಂಗಣದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಸಾಹಿತ್ಯ ಕಮ್ಮಟ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ವೈವಿಧ್ಯಮಯ ಅನುಭವಗಳ ಹಿನ್ನೆಲೆಯಲ್ಲಿ ಗಟ್ಟಿ ಸಾಹಿತ್ಯ ಕಟ್ಟಿಕೊಡುವ ಸಾಮರ್ಥ್ಯ ಪಶು ವೈದ್ಯ ಸಾಹಿತಿಗಳಿಗಿದ್ದು, ಜನಸಾಮಾನ್ಯರ ಜತೆಗೆ ವಿದ್ಯಾರ್ಥಿಗಳಲ್ಲಿ ಕನ್ನಡ ನಾಡು-ನುಡಿ, ಸಾಹಿತ್ಯದ ಕುರಿತು ಆಸಕ್ತಿ ಬೆಳೆಸುವ ಕಾರ್ಯವಾಗಬೇಕು ಎಂದರು.
ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ.ರವಿ ಸಾಲಿಗೌಡರ ಮಾತನಾಡಿ, ಪರಿಷತ್ತಿನ ಇಂತಹ ಕಾರ್ಯಕ್ರಮಗಳಿಂದ ಪಶು ವೈದ್ಯ ಕ್ಷೇತ್ರದ ಪರಿಭಾಷಿಕ ಪದಗಳು ಮತ್ತು ಸಾಹಿತ್ಯ ನಾಡಿನ ಎಲ್ಲ ಮೂಲೆಗಳಿಗೂ ತಲುಪಬೇಕು ಎಂದರು.
ಹುಡಾ ಆಯುಕ್ತ ಡಾ.ಸಂತೋಷ ಬಿರಾದಾರ, ಕನ್ನಡ ಪಶುವೈದ್ಯ ಸಾಹಿತ್ಯ ಪರಿಷತ್ತಿನ ಡಾ. ರವಿಕುಮಾರ್ ಎಸ್.ಬಿ. ಮಾತನಾಡಿದರು. ಕನ್ನಡ ನಾಡಿನ ಹಲವು ಭಾಗಗಳಿಂದ ಸಾಹಿತ್ಯಾಸಕ್ತ ಪಶುವೈದ್ಯರು ಪಾಲ್ಗೊಂಡು ಕಮ್ಮಟದ ಪ್ರಯೋಜನ ಪಡೆದರು.