ಕೊಳ್ಳೇಗಾಲ ಪಟ್ಟಣದ ವಿಶ್ವಚೇತನ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್, ವಿಶ್ವ ಚೇತನ ಸಮೂಹ ಸಂಸ್ಥೆ, ಎಚ್.ಕೃಷ್ಣಸ್ವಾಮಿ ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ ಬುಧವಾರ ಕನ್ನಡ ಸಾಹಿತ್ಯ ಪರಿಷತ್ ಸಂಸ್ಥಾಪನಾ ದಿನವನ್ನು ಆಚರಣೆ ಮಾಡಲಾಯಿತು. ಎಸ್.ನಾಗರಾಜು ಕೊಂಗರಹಳ್ಳಿ, ಪ್ರೇಮ ಲತಾ ಕೃಷ್ಣಸ್ವಾಮಿ, ಶಿವಣ್ಣ ಇದ್ವಾಂಡಿ,. ರಾಜೇಶ್ ಇತರರು ಇದ್ದರು. 
ಜಿಲ್ಲೆ

ವಿದ್ಯಾರ್ಥಿಗಳು ನಾಡು, ನುಡಿ ಅಭಿಮಾನ ಬೆಳೆಸಿಕೊಳ್ಳಲಿ

ಕೊಳ್ಳೇಗಾಲ: ವಿದ್ಯಾರ್ಥಿಗಳು ಕನ್ನಡ ನಾಡು, ನುಡಿ, ನೆಲದ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಎಸ್.ನಾಗರಾಜು ಕೊಂಗರಹಳ್ಳಿ ಹೇಳಿದರು.

ಪಟ್ಟಣದ ವಿಶ್ವಚೇತನ ಕಾಲೇಜಿನಲ್ಲಿ ಕೊಳ್ಳೇಗಾಲ ಕನ್ನಡ ಸಾಹಿತ್ಯ ಪರಿಷತ್, ವಿಶ್ವ ಚೇತನ ಸಮೂಹ ಸಂಸ್ಥೆ, ಎಚ್.ಕೃಷ್ಣಸ್ವಾಮಿ ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕನ್ನಡ ಭಾಷೆ ಮತ್ತು ಸಾಹಿತ್ಯದ ಬೆಳವಣಿಗೆಗೆ 1890ರಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘ ಆರಂಭವಾಗಿ ಅನೇಕ ಕನ್ನಡ ಪರ ಕೆಲಸಗಳಾದವು. ಎಂ.ಎಂ ಕಲಬುರ್ಗಿ, ಪಾಟೀಲ ಪುಟ್ಟಪ್ಪ, ಚಂದ್ರಶೇಖರ ಪಾಟೀಲ, ಗಿರಡ್ಡಿ ಗೋವಿಂದರಾಜು ಹೀಗೆ ಅನೇಕರು ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು.

1917ರಲ್ಲಿ ಕನ್ನಡ ಏಕೀಕರಣ ಬಗ್ಗೆ ಹಲವು ಸಭೆಗಳು ನಡೆದವು. 1947ರಲ್ಲಿ ದಾವಣಗೆರೆಯಲ್ಲಿ ಪಾಟೀಲ ಪುಟ್ಟಪ್ಪ, ಎಂ.ರುದ್ರಪ್ಪ, ಶರಶ್ಚಂದ್ರ ಬೋಸ್ ಕಾರ್ಯಕ್ರಮಗಳನ್ನು ನಡೆಸಿದರು. ಸ್ವಾತಂತ್ರ್ಯ ಭಾರತಕ್ಕೆ ಇವರ ಕೊಡುಗೆ ಅಪಾರವಾಗಿದೆ. ಮುಖ್ಯಮಂತ್ರಿ ದೇವರಾಜ ಅರಸು ಅವರು 1973 ನ.1 ರಂದು ಮೈಸೂರು ರಾಜ್ಯಕ್ಕೆ ಕರ್ನಾಟಕ ರಾಜ್ಯ ಹೆಸರು ನಾಮಕರಣ ಮಾಡಿದರು. ನಮ್ಮ ರಾಜ್ಯ ಕಲೆ, ಸಾಹಿತ್ಯ, ಪ್ರಾಕೃತಿಕ ಸೌಂದರ್ಯಕ್ಕೆ ಹೆಸರಾಗಿದೆ. ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ ಎಂಬ ಮಾತಿನಂತೆ ಕನ್ನಡದ ಪರ ಹೋರಾಟ ಬಂದರೆ ತನು, ಮನ, ದನವನ್ನು ಅರ್ಪಿಸಿ ನಿಲ್ಲಬೇಕು ಎಂದು ಕರೆ ನೀಡಿದರು.

ಎಚ್.ಕೆ. ಟ್ರಸ್ಟ್ ಕಾರ್ಯದರ್ಶಿ ಪ್ರೇಮಲತಾ ಕೃಷ್ಣಸ್ವಾಮಿ ಮಾತನಾಡಿ, ವಿದ್ಯಾರ್ಥಿಗಳು ಕನ್ನಡ ಪ್ರೇಮವನ್ನು ಬೆಳೆಸಿಕೊಳ್ಳಬೇಕು. ತಂದೆ, ತಾಯಿಗೆ ಗೌರವ ಸಲ್ಲಿಸುವ ಜತೆಗೆ ಕೃತಜ್ಞತಾ ಪೂರಕವಾಗಿ ಬದುಕಬೇಕು ಎಂದರು.

ಹಿರಿಯ ಸಾಹಿತಿ ಶಿವಣ್ಣ ಇದ್ವಾಂಡಿ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ ಸಂಸ್ಥಾಪಕರಾದ ಮೈಸೂರಿನ ದೊರೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸಾಧನೆಗಳ ಬಗ್ಗೆ ವಿಸ್ತಾರವಾಗಿ ತಿಳಿಸಿದರು. ಕನ್ನಡದ ಸಾಹಿತಿಗಳು, ಶಾಸನಗಳು, ಗ್ರಂಥಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು.

ವಿಶ್ವಚೇತನ ವಿದ್ಯಾ ಸಂಸ್ಥೆ ಸಂಯೋಜಕ ರಾಜೇಶ್, ಜಗದೀಶ್, ಪ್ರಾಂಶುಪಾಲ ಭಾಸ್ಕರ್, ನಿವೃತ್ತ ಶಿಕ್ಷಕ ನಾಗರಾಜು, ಶಿವಶಂಕರ ಇತರರು ಇದ್ದರು.