ಕುಮಟಾ: ದೇಶದ ಸಮಗ್ರ ಇತಿಹಾಸ ರಚನೆಗೆ ಪ್ರಾದೇಶಿಕ ಇತಿಹಾಸದ ಅಧ್ಯಯನ ಅತ್ಯಗತ್ಯ ಎಂದು ಧಾರವಾಡದ ಕರ್ನಾಟಕ ವಿವಿ ಪ್ರಾಚೀನ ಭಾರತೀಯ ಇತಿಹಾಸ ಮತ್ತು ಶಾಸನವಿಜ್ಞಾನ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ.ಶ್ರೀನಿವಾಸ ವಿ. ಪಾಡಿಗಾರ ಹೇಳಿದರು.
ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಇತಿಹಾಸ ಸಮ್ಮೇಳನದ ಸಮಾರೋಪ ನುಡಿಗಳನ್ನಾಡಿದರು. ನಮ್ಮಲ್ಲಿ ಇತಿಹಾಸವನ್ನು ಪಾಶ್ಚಾತ್ಯರ ಪ್ರಭಾವದಲ್ಲಿ ಬರೆಯಲಾಗಿದೆ. ಹೊಸದಾಗಿ ಪ್ರತಿಯೊಂದು ತುಣುಕನ್ನೂ ಬಿಡದೇ ಪರಿಪೂರ್ಣ ಇತಿಹಾಸವನ್ನು ರಚಿಸಬೇಕಾಗಿದೆ. ಉಪನ್ಯಾಸಕರು ಇಂದಿನ ವಿದ್ಯಾರ್ಥಿಗಳಲ್ಲಿ ಇತಿಹಾಸದ ಸಂಶೋಧನಾ ಮನೋಭಾವ ಬೆಳೆಸಬೇಕು. ಅವರನ್ನು ಪ್ರೋತ್ಸಾಹಿಸಬೇಕು. ಉತ್ತರ ಕನ್ನಡ ಜಿಲ್ಲೆಯಲ್ಲಿ ಒಂದು ಇತಿಹಾಸ ವಸ್ತು ಸಂಗ್ರಹಾಲಯ ಸ್ಥಾಪನೆಗೆ ಯಾರೂ ಮುಂದಾಗದಿರುವುದು ಖೇದಕರ ಎಂದರು.
ಶಿವಮೊಗ್ಗ ಕಮಲಾ ನೆಹರು ಮಹಿಳಾ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ.ಬಾಲಕೃಷ್ಣ ಹೆಗಡೆ ಮಾತನಾಡಿ, ಜಿಲ್ಲೆಯ ಶಿರಸಿ-ಸಿದ್ದಾಪುರದ ಸ್ವಾತಂತ್ರ್ಯ ಹೋರಾಟಗಾರರ ಹೆಸರು ಇತಿಹಾಸ ಪುಸ್ತಕಗಳಲ್ಲಿ ಉಲ್ಲೇಖವಾಗದೇ ಇರುವುದು ದುರದೃಷ್ಟಕರ ಸಂಗತಿ. ಕರ ನಿರಾಕರಣ, ಅರಣ್ಯ ಸತ್ಯಾಗ್ರಹ, ಸ್ವದೇಶಿ, ಅಸಹಕಾರ ಚಳವಳಿಗಳಂತಹ ಉಗ್ರ ಪ್ರತಿಭಟನೆಗಳಲ್ಲಿ ಪಾಲ್ಗೊಂಡಿದ್ದ ಈ ಭಾಗದ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಇನ್ನಷ್ಟು ಸಂಶೋಧನೆಗಳು ಆಗಬೇಕು. ಶಿರಸಿ ತಾಲೂಕಿನ ಎಸಳೆ, ಸಿದ್ದಾಪುರದ ಬೇಡ್ಕಣಿ, ಬಿಳಗಿ, ಇಟಗಿ ಮೊದಲಾದ ಸ್ಥಳಗಳಲ್ಲಿ ಸ್ವಾತಂತ್ರ್ಯ ಸ್ಮಾರಕಗಳನ್ನು ನಿರ್ವಿುಸಿ ಪ್ರವಾಸಿ ಕೇಂದ್ರಗಳನ್ನಾಗಿಸಬೇಕು ಎಂದರು.
ಡಾ.ಶಿವಾನಂದ ನಾಯಕ, ಶ್ಯಾಮಸುಂದರ ಗೌಡ, ಡಾ.ಭಾಗ್ಯಶ್ರೀ ನಾಯಕ, ಪ್ರೊ. ರತ್ನಮ್ಮ ವಿಚಾರ ಮಂಡಿಸಿದರು. ಸಮ್ಮೇಳನದಲ್ಲಿ ಅತ್ಯುತ್ತಮ ಸಂಶೋಧನಾ ಪ್ರಭಂದ ಮಂಡಿಸಿದ ಪ್ರೊ.ಸಂದೇಶ ಧಾರೇಶ್ವರ, ಪ್ರೊ.ರಾಘವೇಂದ್ರ ಶೆಟ್ಟಿ, ಕೆಕ್ಕಾರ ನಾಗರಾಜ ಭಟ್ಟ, ನವೀನ ಹುಣಸೂರು ಹಾಗೂ ಎಚ್.ಆರ್. ಕಿರಣ್ ಅವರಿಗೆ ಪ್ರಶಂಸನಾ ಪತ್ರ ನೀಡಿ ಗೌರವಿಸಲಾಯಿತು.
ಪ್ರಾಚಾರ್ಯು ಡಾ.ವಿಜಯಾ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಸಂಚಾಲಕ ಪ್ರೊ. ಪ್ರಮೋದ ಹೆಗಡೆ, ಪ್ರೊ. ಕೃಷ್ಣ ನಾಯಕ, ಪ್ರೊ. ಐ.ಕೆ.ನಾಯ್ಕ ಹಾಗೂ ಡಾ.ಗೀತಾ ನಾಯಕ, ಇತರರಿದ್ದರು.