ಬಂಗಾರಪೇಟೆ: ವಿದ್ಯಾರ್ಥಿಗಳು ತಮ್ಮ ನಡವಳಿಕೆ ಹಾಗೂ ನಿಮ್ಮೆಲ್ಲರ ಸಾಧನೆಗಳು ಉತ್ತರ ವಿಶ್ವವಿದ್ಯಾಲಯ ಹೆಮ್ಮೆಯ ಪಡುವಂತೆ ಇರಬೇಕು. ಈಗಿನ ಪರಿಸ್ಥಿತಿಗಳಲ್ಲಿ ಉದ್ಯೋಗ ಸಿಗುವುದು ಬಹಳ ಕಷ್ಟ್ಟಕರ. ಒಂದು ಕಾಲೇಜಿನಲ್ಲಿ ನೂರು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಿದರೆ 13 ಮಂದಿಗೆ ಮಾತ್ರ ಉದ್ಯೋಗ ಸಿಗುತ್ತಿದೆ ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ನಿರಂಜನ್ ವಾನಳ್ಳಿ ತಿಳಿಸಿದರು.
ಪಟ್ಟಣದ ನವಚೇತನ ಪದವಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದೆ. ಯಾವುದಾದರೂ ಕೆಲಸ ಸಿಕ್ಕರೆ ಸಾಕು ಎನ್ನುವ ಆಶಾಭಾವನೆ ಮನಸ್ಥಿತಿ ಎಲ್ಲರಲ್ಲೂ ಉಂಟಾಗಿದೆ ಎಂದರು.
ವಿದ್ಯಾಭ್ಯಾಸ ಮುಗಿದ ನಂತರ ಯಾವುದೋ ನಗರಗಳಿಗೆ ಹೋಗಿ ಚಿಕ್ಕ ಕೊಠಡಿಗಳಲ್ಲಿ ವಾಸವಿದ್ದು, ಜೀವನ ಸಾಗಿಸುತ್ತಾ ನಗರಗಳಲ್ಲಿ ಬದುಕುತ್ತೇವೆ ಎಂಬುವ ಭ್ರಮೆಯಿಂದ ಹೊರಗೆ ಬನ್ನಿ, ನಿಮ್ಮ ಹಳ್ಳಿಗಳಲ್ಲಿ ಹಾಗೂ ಊರುಗಳಲ್ಲಿ ಯಾವುದಾದರೂ ಉದ್ಯೋಗ ಮಾಡಿಕೊಂಡು ನೆಮ್ಮದಿಯಾಗಿರಬಹುದು ಎಂದರು.
ಎಲ್ಲೋ ನಗರಗಳಿಗೆ ಹೋಗಿ ಜೀವನ ಮಾಡುತ್ತೇವೆ ಎನ್ನುವ ಭ್ರಮೆಯಿಂದ ಹೊರಗೆ ಬಂದು, ನಿಮಗೆ ನೆಮ್ಮದಿ, ಉತ್ತಮ ವಾತಾವರಣ ಸಿಗುವ ಕಡೆ ಗಂಜಿ ಕುಡಿದರೂ ಸಹ ನೆಮ್ಮದಿಯಾಗಿ ಸ್ವಾಭಿಮಾನದಿಂದ ಬದುಕಿ ಎಂದು ಹೇಳಿದರು.