ಮಾಗಡಿ: ಸೋಲೂರು ಹೋಬಳಿಯನ್ನು ಮಾಗಡಿಯಲ್ಲೇ ಉಳಿಸಬೇಕು ಎಂದು ಪಟ್ಟಣದಲ್ಲಿ ಶುಕ್ರವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.
ವಕೀಲರು, ವಿವಿಧ ಕನ್ನಡಪರ, ರೈತಪರ, ಕಾರ್ಮಿಕಪರ ಸಂಟನೆಗಳ ಪದಾಧಿಕಾರಿಗಳು ಹಾಗೂ ಸೋಲೂರು ಹೋಬಳಿ ನಾಗರಿಕರು ಪಟ್ಟಣದ ಕಲ್ಯಾಗೇಟ್ನಿಂದ ತಾಲೂಕು ಕಚೇರಿವರೆಗೂ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ, ನಮ್ಮಲ್ಲಿದ್ದ ಹೋಬಳಿಯನ್ನು ಕಿತ್ತುಕೊಳ್ಳ ಬೇಡಿ ಎಂದು ನೆಲಮಂಗಲ ಶಾಸಕರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ತಾಲೂಕು ಕಚೇರಿ ಮುಂಭಾಗ ರಸ್ತೆ ತಡೆ ನಡೆಸಲು ಮುಂದಾದಾಗ ಪೊಲೀಸರು ಅವಕಾಶ ಕಲ್ಪಿಸದ ಕಾರಣ ರಸ್ತೆಯಲ್ಲೇ ಕುಳಿತು ಧರಣಿ ನಡೆಸಿ, ಉಪತಹಸೀಲ್ದಾರ್ ಪ್ರಭಾಕರ್ ಅವರಿಗೆ ಮನವಿ ಸಲ್ಲಿಸಿದರು.
ಬಳಿಕ ತಾಲೂಕು ಕಚೇರಿ ಸಭಾಂಗಣದಲ್ಲಿ ಸಭೆ ಸೇರಿ, ಸೆ.27ರಂದು ನಿಯೋಗವೊಂದು ಶಾಸಕ ಎಚ್.ಸಿ.ಬಾಲಕೃಷ್ಣ ಅವರನ್ನು ಭೇಟಿ ಮಾಡಿ, ಸೋಲೂರಿನ ಬೆಂಗಳೂರು&ಮಂಗಳೂರು ರಸ್ತೆ ತಡೆದು ಬೃಹತ್ ಪ್ರತಿಭಟನೆ ನಡೆಸಲು ಸಮಯ ನಿಗದಿ ಮಾಡಲು ತೀರ್ಮಾನಿಸಲಾಯಿತು.
ವಕೀಲರ ಸಂದ ಅಧ್ಯಕ್ಷ ಸುರೇಶ್ ಮಾತನಾಡಿ, ಸೋಲೂರು ಉಳಿಸಿಕೊಳ್ಳಲು ಶಾಸಕರಿಗೆ ನಾವೆಲ್ಲರೂ ಕೈ ಜೋಡಿಸುತ್ತೇವೆ. ನಮ್ಮ ಹೋರಾಟಕ್ಕೆ ಬೆಂಬಲವಾಗಿ ಅವರು ಹೋರಾಟದ ನಾಯಕತ್ವ ವಹಿಸಿಕೊಳ್ಳಬೇಕು.
ಸೋಲೂರು ನೆಲಮಂಗಲಕ್ಕೆ ಸೇರಿಸಿದರೆ ಆಡಳಿತಾತ್ಮಕವಾಗಿ ತೊಂದರೆಯಾಗಲಿದ್ದು, ಹೋಬಳಿಯ ಜನ ಎಚ್ಚೆತ್ತು ಹೋರಾಟ ನಡೆಸಿದರೆ, ಆಕ್ಷೇಪಣೆ ಸಲ್ಲಿಸಲು ಹೆಚ್ಚು ಅರ್ಜಿ ನೀಡಿದರೆ ರಿಟ್ ಹಾಕಲು ಅನುಕೂಲವಾಗುತ್ತದೆ. ಇದರಿಂದ ಸೋಲೂರು ಮಾಗಡಿಯಲ್ಲೇ ಉಳಿಸಿಕೊಳ್ಳಬಹುದು ಎಂದರು.
ರಾಜ್ಯ ಕಟ್ಟಡ ಮತ್ತು ಅಸಂಟಿತ ಕಾರ್ಮಿಕ ಒಕ್ಕೂಟದ ಅಧ್ಯಕ್ಷ ಡಾ.ಪ್ರಸನ್ನಗೌಡ ಮಾತನಾಡಿ, ನೆಲಮಂಗಲ ಶಾಸಕರು ಹೋಬಳಿಯನ್ನು ಕಿತ್ತುಕೊಳ್ಳಲು ಯತ್ನಿಸಬಾರದು. ಸೋಲೂರನ್ನು ಕೈಬಿಡದಿದ್ದರೆ ಶಾಸಕರು ಇರುವ ಸ್ಥಳಕ್ಕೆ ಹೋಗಿ, ಕಚೇರಿ ಮುತ್ತಿಗೆ ಹಾಕಿ, ಮಸಿ ಬಳಿಯಲಾಗುವುದು ಎಂದು ಎಚ್ಚರಿಸಿದರಲ್ಲದೇ ಮುಂದಿನ ಚುನಾವಣೆಯಲ್ಲಿ ಹೋಬಳಿ ಜನ ತಕ್ಕಪಾಠ ಕಲಿಸಲಿದ್ದಾರೆ ಎಂದರು.
ರೈತ ಸಂದ ಅಧ್ಯಕ್ಷ ಲೋಕೇಶ್ ಮಾತನಾಡಿ, ರೈತರು, ಮಹಿಳೆಯರು, ವೃದ್ಧರು, ಹಿರಿಯ ನಾಗರಿಕರು ಬಿಸಿಲಿನಲ್ಲಿ ಬೀದಿಯಲ್ಲಿ ಕುಳಿತು ಸೋಲೂರನ್ನು ಉಳಿಸಿ ಎಂದು ಬೇಡುತ್ತಿದ್ದಾರೆ. ಇದೆಲ್ಲದಕ್ಕೂ ಮಿಗಿಲಾಗಿ ಜನಪ್ರತಿನಿಧಿಗಳಿಗೆ ಬದ್ಧತೆ ಇರಬೇಕು. ನ್ಯಾಯ ಸಿಗೋವರೆಗೂ ಪ್ರತಿಭಟನೆ ಕೈಬಿಡಲ್ಲ ಎಂದರು.
ಹಸಿರು ಸೇನೆ ರೈತ ಬಳಗದ ಗೋವಿಂದರಾಜು, ವಕೀಲರ ಸಂದ ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್, ನಮ್ಮ ಕರ್ನಾಟಕ ನವ ನಿರ್ಮಾಣ ವೇದಿಕೆ ಅಧ್ಯಕ್ಷ ರಾಜಣ್ಣ, ವಿಜಯ್ ಕುಮಾರ್, ಸಹನಾ ಪಂಡೀತ್, ಚೇತನ್, ರಮೇಶ್, ಕರ್ನಾಟಕ ನಮ್ಮ ನಿರ್ಮಾಣ ವೇದಿಕೆ ಅಧ್ಯಕ್ಷ ಮಹಾಂತೇಶ್, ಕೆಂಪೇಗೌಡ ರೈತ ಸಂಟನೆ ರಾಜ್ಯಾಧ್ಯಕ್ಷ ಶಿವಣ್ಣಗೌಡ, ಯುವ ರಾಜ್ಯಾಧ್ಯಕ್ಷ ಆರ್.ದಿನೇಶ್ ಸೇರಿ ಸೋಲೂರು, ಬಿಟ್ಟಸಂದ್ರ, ಬಾಣವಾಡಿ, ಮೋಟಗಾನಹಳ್ಳಿ, ಗೊರೂರು, ತಟ್ಟೆಕೆರೆ, ಮುಪ್ಪೇನಹಳ್ಳಿ, ಶಾಂತಪುರ, ಪಾಲನಹಳ್ಳಿ, ಗುಡೆಮಾರನಹಳ್ಳಿಯ ನೂರಾರು ರೈತರು, ಮಹಿಳೆಯರು ಇದ್ದರು.
ರಾಜೀನಾಮೆ ನೀಡಿ: ಗಾಯಕ ಕನ್ನಡ ಕುಮಾರ್ ಮಾತನಾಡಿ, ಶಾಸಕ ಬಾಲಕೃಷ್ಣ ನಮ್ಮ ಪ್ರತಿಭಟನೆಗೆ ಕೈಜೋಡಿಸದೆ ಅಖಂಡ ಮಾಗಡಿ ತಾಲೂಕನ್ನು ವಿಭಜಿಸಿದರೆ ತಾಲೂಕಿಗೆ ಮಾಡಿದ ಅವಮಾನ. ಈಗಾಗಲೇ ಸೋಲೂರು ವಿಷಯಕ್ಕೆ ಸಂಬಂಧಿಸಿದಂತೆ ಶಾಸಕರು ಯಾವುದೇ ಹೇಳಿಕೆ ನೀಡದಿರುವುದು ಅನುಮಾನ ಮೂಡಿಸಿದ್ದು, ಹೋಬಳಿ ಉಳಿಸಿಕೊಳ್ಳಲು ಸಾಧ್ಯವಾಗದಿದ್ದರೆ ಕೂಡಲೇ ಅವರ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದರು.
10 ಸಾವಿರ ಮಂದಿಯಿಂದ ಆಕ್ಷೇಪಣೆ: ಗುಡೇಮಾರನಹಳ್ಳಿ ಗ್ರಾಪಂ ಮಾಜಿ ಉಪಾಧ್ಯಕ್ಷ ಲಕ್ಷ್ಮೀನಾರಾಯಣ ಮೂರ್ತಿ ಮಾತನಾಡಿ, ಸೋಲೂರಿನಿಂದ ಮಾಗಡಿ, ರಾಮನಗರಕ್ಕೆ ಯಾವುದೇ ಬಸ್ ವ್ಯವಸೆಯಿಲ್ಲ. ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಸೋಲೂರು ಹಿಂದುಳಿದಿದೆ. ಮೂಲ ಸೌಕರ್ಯದಿಂದ ವಂಚಿತವಾಗಿದೆ ಎಂದು ಈ ಹಿಂದೆ ಜಿಲ್ಲಾಧಿಕಾರಿಗಳು ತಪ್ಪು ವರದಿ ನೀಡಿ ದಾರಿ ತಪ್ಪಿಸಿದ್ದಾರೆ. ಸೋಲೂರು ಆಡಳಿತಕ್ಕೆ ನೆಲಮಂಗಲ ಶಾಸಕರಿಗೆ ಮಾಗಡಿ ತಾಪಂ ಕಚೇರಿಯಲ್ಲಿ ಅವಕಾಶ ನೀಡಲಾಗಿದೆ. ಆದರೆ, ಈವರೆಗೂ ಕಚೇರಿಗೆ ಬರಲು ಅವರಿಂದ ಸಾಧ್ಯವಾಗಿಲ್ಲ. ಅವರ ರಾಜಕೀಯ ಹಿತಾಸಕ್ತಿಗಾಗಿ ಸೋಲೂರನ್ನು ನಮ್ಮಿಂದ ಕಿತ್ತುಕೊಳ್ಳುತ್ತಿದ್ದಾರೆ. ಸೋಲೂರು ನೆಲಮಂಗಲಕ್ಕೆ ಸೇರ್ಪಡೆ ಬೇಡ ಎಂದು ಈಗಾಗಲೇ 10 ಸಾವಿರಕ್ಕೂ ಹೆಚ್ಚಿನ ರೈತರು ಸಹಿ ಮಾಡಿ ಗ್ರಾಮವಾರು ಸರ್ಕಾರಕ್ಕೆ ಆಕ್ಷೇಪಣೆ ಸಲ್ಲಿಸಿದ್ದಾರೆ ಎಂದರು.