ಸಾಗರದಲ್ಲಿ ಆಯೋಜಿಸಿದ್ದ ಇಂಧನ ದಕ್ಷತೆ ಮತ್ತು ಇಂಧನ ಉಳಿತಾಯ ಕುರಿತ ಕಾರ್ಯಾಗಾರದಲ್ಲಿ ಕಾಗೋಡು ತಿಮ್ಮಪ ಮಾತನಾಡಿದರು. ಡಾ. ರಾಜನಂದಿನಿ ಕಾಗೋಡು, ಎಚ್.ಪ್ರಕಾಶ್, ಎಚ್.ಎಸ್.ಮೋಹನ್, ದಯಾನಂದ್ ಸಾಗರ್ ಇತರರಿದ್ದರು. 
ಜಿಲ್ಲೆ

ಸೌರಶಕ್ತಿ ಸದ್ಬಳಕೆ ಮತ್ತಷ್ಟು ಹೆಚ್ಚಾಗಲಿ; ಹೊಸ ಆವಿಷ್ಕಾರಗಳತ್ತ ಯುವಜನತೆ ತೋರಲಿ ಆಸಕ್ತಿ: ಕಾಗೋಡು ತಿಮ್ಮಪ್ಪ

ಸಾಗರ: ಸೋಲಾರ್ ಮೂಲಕ ಪರ್ಯಾಯ ಇಂಧನವನ್ನು ಬಳಸುವ ಆಲೋಚನಾ ಕ್ರಮ ಹೆಚ್ಚಾಗಬೇಕು. ಈ ಬಗ್ಗೆ ಸಂಶೋಧನೆ ಮತ್ತು ಆವಿಷ್ಕಾರಗಳು ನಿರಂತರವಾಗಿ ನಡೆಯಬೇಕು ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅಭಿಪ್ರಾಯಪಟ್ಟರು.

ನಗರದ ಸಂಜಯ ವಿದ್ಯಾಕೇಂದ್ರದಲ್ಲಿ ಮಂಗಳವಾರ ಭಾರತ ಸರ್ಕಾರದ ಇಂಧನ ಮಂತ್ರಾಲಯ ಮತ್ತು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ ಹಮ್ಮಿಕೊಂಡಿದ್ದ ಇಂಧನ ದಕ್ಷತೆ ಮತ್ತು ಉಳಿತಾಯ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಇಂಧನಕ್ಕೆ ಪ್ರಸ್ತುತ ಹೆಚ್ಚಿನ ಹಣ ವ್ಯಯಿಸಲಾಗುತ್ತಿದೆ. ಸದಾ ಸಿಗುವ ಸೋಲಾರ್ ಬಳಕೆ ಬಗ್ಗೆ ಹೆಚ್ಚಿನ ಚರ್ಚೆ ನಡೆಯುತ್ತಿದೆ. ವಿದ್ಯಾರ್ಥಿ, ಯುವಜನರು ಸೌರಶಕ್ತಿ ಮೂಲಕ ಪರ್ಯಾಯ ಇಂಧನ ಉತ್ಪಾದಿಸುವ ನಿಟ್ಟಿನಲ್ಲಿ ಹೊಸ ಹೊಸ ಆವಿಷ್ಕಾರಕ್ಕೆ ಮುಂದಾಗಬೇಕು. ಕೇಂದ್ರ ಸರ್ಕಾರದ ಇಂಧನ ಮಂತ್ರಾಲಯ ಮತ್ತು ಕೆಆರ್‌ಇಡಿಎಲ್ ಇಂತಹ ಪ್ರಯೋಗಕ್ಕೆ ವಿದ್ಯಾರ್ಥಿಗಳನ್ನು ಉತ್ತೇಜಿಸುತ್ತಿರುವುದು ಆಶಾದಾಯಕ ಬೆಳವಣಿಗೆ. ಸೌರಶಕ್ತಿಯನ್ನು ಬಹುಮುಖಿಯಾಗಿ ಉಪಯೋಗಿಸುವ ಪ್ರಯತ್ನ ಈಗಾಗಲೇ ಹಲವು ದೇಶಗಳಲ್ಲಿ ನಡೆದಿದ್ದು, ಯಶಸ್ವಿಯಾಗಿದೆ. ಭಾರತದಲ್ಲಿ ಈ ದಿಸೆಯಲ್ಲಿ ಹೆಚ್ಚು ಪ್ರಯತ್ನಗಳು ಆಗಬೇಕು ಎಂದರು.
ರೋಟರಿ ಅಧ್ಯಕ್ಷೆ ಡಾ. ರಾಜನಂದಿನಿ ಕಾಗೋಡು ಮಾತನಾಡಿ, ತಾಂತ್ರಿಕ ಶಿಕ್ಷಣ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಹೊಸ ವಿಷಯಗಳನ್ನು ತಿಳಿದುಕೊಳ್ಳುವತ್ತ ಆಸಕ್ತಿ ಬೆಳೆಸಿಕೊಳ್ಳಬೇಕು. ಪರ್ಯಾಯ ಇಂಧನ ಶಕ್ತಿಯನ್ನು ಸದ್ಬಳಕೆ ಮಾಡಿಕೊಳ್ಳುವ ವಿಷಯಗಳತ್ತ ದೇಶ ಹೆಚ್ಚಿನ ಗಮನ ಹರಿಸಿದೆ. ಪ್ರಮುಖವಾಗಿ ಸೌರಶಕ್ತಿ ಕಡೆಗೆ ಹೆಚ್ಚಿನ ಗಮನ ಹರಿಸಲಾಗಿದೆ. ಸೌರಶಕ್ತಿಯನ್ನು ಮನೆಯಲ್ಲಿ ಉತ್ಪಾದಿಸಿ ಮನೆ ಬಳಕೆ ಜತೆಗೆ ಅದನ್ನು ಸರ್ಕಾರಕ್ಕೆ ಮಾರಾಟ ಮಾಡಲು ಸಹ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಪ್ರಾಚಾರ್ಯ ಎಚ್.ಪ್ರಕಾಶ್, ಎಚ್.ಎಸ್.ಮೋಹನ್, ಸೋಲಾರ್ ತಂತ್ರಜ್ಞ ದಯಾನಂದ್ ಸಾಗರ್, ಮಾಹಿತಿ ಮತ್ತು ತಂತ್ರಜ್ಞಾನ ವಿಭಾಗದ ರಾಜೀವ್ ಪಿ. ನಾಡಿಗ್, ಪ್ರತಾಪ್‌ಸಿಂಗ್, ಮಹಾಬಲೇಶ್ವರ, ಮಂಜುನಾಥ್ ಇದ್ದರು.