ಯಳಂದೂರು: ಸಮಾಜದಲ್ಲಿ ಬೇರೆಯವರಿಗೆ ತೊಂದರೆ ಕೊಡದೆ ಬದುಕುವುದನ್ನು ಕಲಿತರೆ ಅದೇ ನಾವು ಸಮಾಜಕ್ಕೆ ಕೊಡುವ ದೊಡ್ಡ ಸೇವೆಯಾಗಿದೆ ಎಂದು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.
ಪಟ್ಟಣದ ಎಸ್‌ಡಿವಿಎಸ್ ವಿದ್ಯಾಸಂಸ್ಥೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ದುಗ್ಗಹಟ್ಟಿ ಪಿ.ವೀರಭದ್ರಪ್ಪ ಅವರ ಕುರಿತು ರಚನೆಯಾಗಿರುವ ದುಗ್ಗಹಟ್ಟಿ ಧೀಮಂತ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.
ಜೀವನ ಪವಿತ್ರವಾಗಿದೆ. ಇಲ್ಲಿ ಇರುವಷ್ಟು ದಿನ ಉತ್ತಮ ಕೆಲಸಗಳನ್ನು ಮಾಡಬೇಕು. ಸಮಾಜಕ್ಕೆ ಸೇವೆ ಮಾಡುವುದು ಜೀವನದ ಮುಖ್ಯ ಧ್ಯೇಯವಾಗಬೇಕು. ಈ ನಿಟ್ಟಿನಲ್ಲಿ ದುಗಹಟ್ಟಿ ಪಿ. ವೀರಭದ್ರಪ್ಪ ರಾಜಕೀಯಕ್ಕೆ ಧುಮುಕಿ ತಾಲೂಕು ಬೋರ್ಡ್ ಅಧ್ಯಕ್ಷರಾಗಿ ಬೆಟ್ಟದ ರಸ್ತೆ ಮಾಡಿ ಉಳಿಕೆ ಹಣವನ್ನು ಸರ್ಕಾರಕ್ಕೆ 1961 ರಲ್ಲೇ ವಾಪಸ್ ನೀಡಿದ್ದರು. ನಂತರ ರಾಜಕೀಯ ಬಿಟ್ಟು ಬಂದು ಅನೇಕ ಸಮಾಜಪರ ಕೆಲಸಗಳು, ದೇಗುಲಗಳು, ಗದ್ದುಗೆಗಳ ಜೀರ್ಣೋದ್ಧಾರ, ಗ್ರಂಥಾಲಯ ಸ್ಥಾಪನೆ, ಗ್ರಾಮೀಣ ಭಾಗದಲ್ಲಿ ಉತ್ತಮ ಶಿಕ್ಷಣ ನೀಡುವ ಶಿಕ್ಷಣ ಸಂಸ್ಥೆ ಸೇರಿದಂತೆ ಅನೇಕ ಕೆಲಸಗಳನ್ನು ಮಾಡಿ ಜನಮನ್ನಣೆ ಗಳಿಸಿದ್ದಾರೆ. ಇವರ ಸೇವೆಯ ಕುರಿತು ಬೆಳಕು ಚೆಲ್ಲುವ, ಇದರೊಂದಿಗೆ ತಾಲೂಕಿನ ಇತಿಹಾಸವನ್ನು ತಿಳಿಸುವ ದುಗ್ಗಹಟ್ಟಿ ಧೀಮಂತ ಎಂಬ ಕೃತಿ ಸಂಗ್ರಹಯೋಗ್ಯವಾಗಿದೆ ಎಂದರು.
ಸಿದ್ಧಗಂಗಾ ಮಠದ ಕಿರಿಯ ಶ್ರೀಗಳಾದ ಶಿವಸಿದ್ದೇಶ್ವರ ಸ್ವಾಮಿಜಿ ಮಾತನಾಡಿ, ಶಿವಶರಣರ ಕಾಯಕ ತತ್ವವನ್ನು ಮೈಗೂಡಿಸಿಕೊಂಡ ಕೆಲವರಲ್ಲಿ ವೀರಭದ್ರಪ್ಪರವರೂ ಒಬ್ಬರಾಗಿದ್ದಾರೆ. ಹುಟ್ಟಿದ ಜಾತಿಗಿಂತ ಕಟ್ಟುವ ಗುಣವೇ ಮುಖ್ಯ, ಗಳಿಸಿದ ಸಂಪತ್ತಿಗಿಂತ ಬಳಸುವ ಶಿಸ್ತು ಮುಖ್ಯ ಎಂಬ ತತ್ವವನ್ನು ಅಳವಡಿಸಿಕೊಂಡ ಇವರ ಜೀವನ ಸಾರ್ಥಕವಾಗಿದೆ. ಇದು ಅಭಿನಂದನಾ ಸಮಾರಂಭಕ್ಕಿಂತ ಹೆಚ್ಚಾಗಿ ಒಂದು ಸಾಮಾಜಿಕ ಸೇವೆ, ತ್ಯಾಗ ಮಾಡಿದ ವ್ಯಕ್ತಿಗೆ ಗೌರವ ಸಲ್ಲಿಸುವ ಕಾರ್ಯಕ್ರಮವಾಗಿದೆ ಎಂದರು.
ಶಾಸಕ ಎ.ಆರ್. ಕೃಷ್ಣಮೂರ್ತಿ ಮಾತನಾಡಿ, ಯಳಂದೂರು ತಾಲೂಕು ಚಿಕ್ಕ ತಾಲೂಕಾದರೂ ಇಲ್ಲಿ ಅನೇಕ ಮಹಾನ್ ವ್ಯಕ್ತಿಗಳು, ಕವಿಗಳು, ಸಮಾಜ ಸುಧಾರಕರು ಆಗಿ ಹೋಗಿದ್ದಾರೆ. ಇದರಲ್ಲಿ ದುಗ್ಗಹಟ್ಟಿ ಪಿ.ವೀರಭದ್ರಪ್ಪರವರೂ ಒಬ್ಬರಾಗಿದ್ದಾರೆ. ಇವರ ಮನಸ್ಸು ಸದಾ ಜನಪರ ಕಾಳಜಿ ಹಾಗೂ ತಾಲೂಕಿನ ಅಭಿವೃದ್ಧಿಗೆ ತುಡಿಯುತ್ತಿರುತ್ತದೆ. 90 ವಸಂತ ಕಂಡಿರುವ ಇವರು ಈಗಲೂ ಲವಲವಿಕೆಯಿಂದ ತಾಲೂಕಿನ ಅಭಿವೃದ್ಧಿಗೆ ಮಾರ್ಗದರ್ಶನ ನೀಡುವ ಮನೋಭಾವನೆ ಹೊಂದಿರುವುದು ಇವರ ಪ್ರಾಮಾಣಿಕ ಸೇವೆಗೆ ಹಿಡಿದ ಕನ್ನಡಿಯಾಗಿದೆ ಎಂದರು.
ಮಾಜಿ ಗೃಹ ಸಚಿವ ಸ್ಕೌಟ್ ಆ್ಯಂಡ್ ಗೈಡ್ಸ್‌ನ ಮುಖ್ಯ ಆಯುಕ್ತ ಪಿ.ಜಿ.ಆರ್. ಸಿಂಧ್ಯಾ ಮಾತನಾಡಿ, ಜನರೇ ಆಸ್ತಿ ಎಂಬ ವ್ಯಕ್ತಿತ್ವ ವೀರಭದ್ರಪ್ಪರವರದಾಗಿದೆ. ಇವರೊಬ್ಬ ಆದರ್ಶ ವ್ಯಕ್ತಿಯಾಗಿದ್ದಾರೆ. ಸೇವೆಯೇ ನಂಬಿ ಬದುಕುವ ವಿರಳರಲ್ಲಿ ಇವರೂ ಒಬ್ಬರಾಗಿದ್ದಾರೆ. ಸೇವೆಯೇ ಇವರ ನೈತಿಕ ಶಕ್ತಿಯ ಸಂಕೇತವಾಗಿದೆ ಎಂದು ಬಣ್ಣಿಸಿದರು.
ಅಭಿನಂದನೆ ಸ್ವೀಕರಿಸಿದ ದುಗ್ಗಹಟ್ಟಿ ಪಿ.ವೀರಭದ್ರಪ್ಪ ಮಾತನಾಡಿ, ನಾನು ಮಾಡಿರುವ ಕೆಲಸಗಳಿಗೆ ಸುತ್ತೂರು ಮಠದ ರಾಜೇಂದ್ರ ಶ್ರೀಗಳು ಹಾಲಿ ಇರುವ ಶ್ರೀಗಳ ನೈತಿಕ ಶಕ್ತಿಯೇ ಕಾರಣವಾಗಿದೆ. ಇವರ ಪ್ರೇರಣೆಯಿಂದಲೇ ನಾನು ಅಳಿಲು ಸೇವೆಯನ್ನು ಸಲ್ಲಿಸಲು ಸಾಧ್ಯವಾಯಿತು ಎಂದರು.
ಕುಂದೂರು ಮಠದ ಡಾ.ಶರತ್ ಚಂದ್ರ ಸ್ವಾಮಿಜಿ ಕೃತಿ ಪರಿಚಯವನ್ನು ಮಾಡಿಕೊಟ್ಟರು. ಚಾಮರಾಜನಗರ ಶಾಸಕ ಸಿ. ಪುಟ್ಟರಂಗಶೆಟ್ಟಿ, ಗುಂಡ್ಲುಪೇಟೆ ಶಾಸಕ ಎಚ್.ಎಂ.ಗಣೇಶ್‌ಪ್ರಸಾದ್, ಮಾಜಿ ಶಾಸಕ ಎಸ್.ಬಾಲರಾಜು, ಜಿ.ಎನ್.ನಂಜುಂಡಸ್ವಾಮಿ, ಪರಿಮಳಾ ನಾಗಪ್ಪ, ಚಾಮುಲ್ ಅಧ್ಯಕ್ಷ ವೈ.ಸಿ. ನಾಗೇಂದ್ರ, ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ಮಾತನಾಡಿದರು. ಪ.ಪಂ. ಅಧ್ಯಕ್ಷೆ ಲಕ್ಷ್ಮೀಮಲ್ಲು, ವಿ.ಮಲ್ಲಿಕಾರ್ಜುನಸ್ವಾಮಿ, ವಿ.ಗಂಗಾಧರಸ್ವಾಮಿ, ದುಗ್ಗಹಟ್ಟಿ ರಾಜೇಶ್, ವಿಖ್ಯಾತ್, ವೀರಭದ್ರಸ್ವಾಮಿ ಇತರರು ಇದ್ದರು.