ಜಿಲ್ಲೆ

ಶೌರ್ಯ ರಥಯಾತ್ರೆ ಸಮಾನತೆ ಸೃಷ್ಟಿಸಲಿ

Davangere - Desk - Mahesh Babu E

ಚಿತ್ರದುರ್ಗ: ದೇಶದ ಪ್ರತಿಯೊಬ್ಬರೂ ಒಂದಾಗಬೇಕು. ಸಾಮರಸ್ಯದಿಂದ ಬದುಕುವ, ಸಾಮಾಜಿಕ ಸಮಾನತೆ ಸೃಷ್ಟಿಸುವ ವಾತಾವರಣ ಶೌರ್ಯ ಜಾಗರಣ ರಥಯಾತ್ರೆಯಿಂದ ಆಗಬೇಕು ಎಂದು ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಆಶಯ ವ್ಯಕ್ತಪಡಿಸಿದರು.

ವಿಶ್ವ ಹಿಂದು ಪರಿಷದ್, ಬಜರಂಗದಳದಿಂದ ಸೋಮವಾರ ಹಮ್ಮಿಕೊಂಡಿದ್ದ ರಥಯಾತ್ರೆ ಉದ್ಘಾಟನಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ದೇಶಾದ್ಯಂತ ರಥಯಾತ್ರೆ ಹೊರಟಿದ್ದು, ಬೇಧ-ಭಾವ ಮರೆತು ಎಲ್ಲರನ್ನೂ ಒಗ್ಗೂಡಿಸುವ ಕಾರ್ಯವಾಗಬೇಕು. ಜಾಗೃತಿ ಮೂಡಿಸುವಲ್ಲಿ ಮಾದರಿಯಾಗಬೇಕು ಎಂದರು.

ಮತಾಂತರ ದಲಿತರಿಗೆ ಸೀಮಿತವಾಗಿಲ್ಲ. ಲಿಂಗಾಯತರು ಆಗುತ್ತಿರುವ ಆತಂಕ ಸ್ವಾಮೀಜಿಯೊಬ್ಬರು ವ್ಯಕ್ತಪಡಿಸಿದ್ದು, ಮರಳಿ ಕರೆತರುವ ಪ್ರಯತ್ನ ಆಗಬೇಕೆಂದು ಈಚೆಗೆ ಹೇಳಿದ್ದಾರೆ. ಇದಕ್ಕೆ ಜಾತಿ ತಾರತಮ್ಯ, ಆರ್ಥಿಕ ಅಸಮಾನತೆ, ದೇಗುಲ ಪ್ರವೇಶ ನಿಷೇಧ ಪ್ರಮುಖ ಕಾರಣ ಎಂಬ ಮಾತು ಕೇಳಿಬರುತ್ತಿದೆ. ಆದರೆ, ಹಿಂದಿಗಿಂತಲೂ ಕಡಿಮೆಯಾಗಿದ್ದು, ಇನ್ನಷ್ಟು ಪರಿಣಾಮಕಾರಿಯಾಗಿ ಆಗಬೇಕಿದೆ ಎಂದು ಸಲಹೆ ನೀಡಿದರು.

ವಿಎಚ್‌ಪಿ ಕೇಂದ್ರೀಯ ಜಂಟಿ ಪ್ರಧಾನ ಕಾರ್ಯದರ್ಶಿ ಸ್ಥಾಣುಮಾಲಯನ್ ಮಾತನಾಡಿ, ಪಶ್ಚಿಮದಿಂದ ಪೂರ್ವ, ದಕ್ಷಿಣದಿಂದ ಉತ್ತರದವರೆಗೂ ವಿಎಚ್‌ಪಿ ಹಬ್ಬಿದ್ದು, ಹಿಂದು ಧರ್ಮದ ಉಳಿವಿಗಾಗಿ ಧರ್ಮೀಯರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ ಎಂದರು.

ವಸುದೈವ ಕುಟುಂಬಕಂ, ಲೋಕ ಕಲ್ಯಾಣಾರ್ಥ ಋಷಿ ಪರಂಪರೆಯಿಂದ ಆರಂಭವಾದ ಹಿಂದು ಧರ್ಮಕ್ಕೆ ಇತಿಹಾಸವಿದೆ. ಆದರಿಂದು ಹಲವು ಸಮಸ್ಯೆ ಎದುರಾಗಿದೆ. ನಾಶಪಡಿಸುವ, ಅವಹೇಳನಕಾರಿ ಹೇಳಿಕೆ ನೀಡಲು ಮುಂದಾಗುವವರಿಗೆ ತಕ್ಕಪಾಠ ಕಲಿಸಲು ಸಮಸ್ತ ಹಿಂದುಗಳು ಒಗ್ಗೂಡಬೇಕು. ಅದಕ್ಕಾಗಿ ಮಲಗಿರುವ ನಮ್ಮವರನ್ನು ಬಡಿದ್ದೆಬ್ಬಿಸಲು ರಥಯಾತ್ರೆ ಹೊರಟಿದ್ದು, ಇದು ಅತ್ಯಂತ ಅವಶ್ಯಕವಾಗಿದೆ ಎಂದು ತಿಳಿಸಿದರು.

ಇದು ಅಮೃತ ಕಾಲವಾಗಿದ್ದು, ಅದರ ಜತೆಯಲ್ಲಿ ಒಂದಿಷ್ಟು ಸಮುದ್ರ ಮಂಥನದಂತೆ ವಿಷವೂ ಹೊರಬರಲಿದೆ. ಧರ್ಮದ ಉಳಿವಿಗಾಗಿ ಪಣ ತೊಡಬೇಕು ಎಂದು ಕಿವಿಮಾತು ಹೇಳಿದರು.

ಬಜರಂಗದಳ ರಾಷ್ಟ್ರೀಯ ಸಹ ಸಂಯೋಜಕ ಸೂರ್ಯನಾರಾಯಣ ಮಾತನಾಡಿ, ವಿಎಚ್‌ಪಿ ಇತಿಹಾಸದಲ್ಲಿ ಇದೊಂದು ಅವಿಸ್ಮರಣೀಯ ಕಾರ್ಯಕ್ರಮ. ಶಾಂತಿ-ಅಹಿಂಸೆಯಿಂದ ಮಾತ್ರವಲ್ಲ, ಭಾರತದ ಭವ್ಯ ಇತಿಹಾಸ ಪರಾಕ್ರಮಿಗಳಿಂದಲೂ ಉಳಿದುಕೊಂಡಿದೆ. ಹೀಗಾಗಿ ಶೌರ್ಯಕ್ಕೂ ಹೆಸರುವಾಸಿ. ಯುವಶಕ್ತಿ ದೇಶದ ಶಕ್ತಿಯಾಗಿದ್ದು, ರಾಷ್ಟ್ರ ಭಕ್ತಿ, ಧರ್ಮ ಪ್ರೀತಿ ಕುರಿತು ಜಾಗೃತಿ ಮೂಡಿಸಲಾಗುವುದು ಎಂದರು.

ಪಕ್ಷ ವೈಯಕ್ತಿಕ. ಆದರೆ, ಹಿಂದು ಧರ್ಮದ ಪ್ರಶ್ನೆ ಎದುರಾದಾಗ ಹಿಂದುಗಳೆಲ್ಲ ಒಗ್ಗೂಡಬೇಕು. ಮಠ-ಮಂದಿರ, ಶಾಲಾ-ಕಾಲೇಜುಗಳಲ್ಲಿ ಅರಿವು ಮೂಡಿಸುವ ಕೆಲಸ ಆಗುತ್ತಿಲ್ಲ. 2 ಸಾವಿರ ವರ್ಷಗಳ ಹಿಂದೆ ಜನಿಸಿದ ಮತ, ಧರ್ಮವೊಂದು ಹಿಂದು ಧರ್ಮೀಯರನ್ನು ಮತಾಂತರ ಮಾಡುತ್ತಿದೆ. ಆದ್ದರಿಂದ ಭಾರತವನ್ನು ಜಗಜ್ಜನನಿ ಮಾಡುವ ನಿಟ್ಟಿನಲ್ಲಿ ಶ್ರಮಿಸೋಣ ಎಂದು ಸಲಹೆ ನೀಡಿದರು.

ಗುಜರಾತಿನ ಶ್ರೀ ರಾಜನಾಥ್ ನಾಗ್ ಸ್ವಾಮೀಜಿ, ಆರ್‌ಎಸ್‌ಎಸ್ ದಕ್ಷಿಣ ಪ್ರಾಂತ ಸಹ ಕಾರ್ಯವಾಹರು ಪಟ್ಟಾಭಿರಾಮ, ವಿಎಚ್‌ಪಿ ದಕ್ಷಿಣ ಪ್ರಾಂತ ಕಾರ್ಯದರ್ಶಿ ಜಗನ್ನಾಥ ಶಾಸ್ತ್ರಿ, ರಥಯಾತ್ರೆಯ ಜಿಲ್ಲಾ ಸಮಿತಿ ಅಧ್ಯಕ್ಷ ಜಿ.ಎಂ.ಸುರೇಶ್, ಎಂಎಲ್ಸಿ ಕೆ.ಎಸ್.ನವೀನ್, ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ, ಮುಖಂಡರಾದ ಜಿ.ಎಸ್.ಅನಿಲ್‌ಕುಮಾರ್, ಬದರಿನಾಥ್, ಕೆ.ಆರ್.ಸುನಿಲ್, ಎಸ್.ಆರ್.ಪ್ರಭಂಜನ್, ಮಹಾಬಲೇಶ್ವರ ಹೆಗಡೆ ಇತರರಿದ್ದರು.