ಬಳ್ಳಾರಿ: ಹೆಣ್ಣು, ಗಂಡು ಎನ್ನುವ ಅಸಮಾನತೆ ಕೊನೆಯಾದಾಗ ಲೈಂಗಿಕ ಅಪರಾಧಗಳು ಕಡಿಮೆ ಆಗುತ್ತವೆ ಎಂದು ಹಂಪಿ ಕನ್ನಡ ವಿವಿ ನಿವೃತ್ತ ಕುಲಪತಿ ಪ್ರೊ.ಎ.ಮುರಿಗೆಪ್ಪ ಹೇಳಿದರು.
ಇದನ್ನೂ ಓದಿ:ಯುವಜನರ ಸಂಕಲ್ಪ ಸಮಾವೇಶ 19ರಂದು
ನಗರದ ಗಾಂಧಿ ಭವನದಲ್ಲಿ ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್‌ನಿಂದ ಬುಧವಾರ ಹಮ್ಮಿಕೊಂಡಿದ್ದ ಯುವಜನ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದರು. ಎಲ್ಲ ಸ್ಥಳಲ್ಲೂ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿವೆ. ಮಠ-ಮಾನ್ಯಗಳು, ಶಾಲಾ-ಕಾಲೇಜುಗಳು, ಕೆಲಸದ ಸ್ಥಳಗಳಲ್ಲಿ ಮಹಿಳೆಯರನ್ನು ಕೀಳಾಗಿ ನೋಡುವ ಸಂಸ್ಕೃತಿ ಸಮಾಜದಲ್ಲಿ ಬೆರೂರಿದೆ ಎಂದರು.
ಮಕ್ಕಳ ತಜ್ಞ ಡಾ.ಯೋಗಾನಂದ ರೆಡ್ಡಿ ಮಾತನಾಡಿ, ಅತ್ಯಾಚಾರ ಮತ್ತು ಕೊಲೆಗಳು ನಮ್ಮ ದೇಶದಲ್ಲಿ ಅಷ್ಟೇ ಅಲ್ಲ ವಿಶ್ವದಾದ್ಯಂತ ನಡೆಯುತ್ತಿದೆ. ಆದರೆ, ದುರಂತ ಎಂದರೆ ಅತ್ಯಾಚಾರ ಪ್ರಕರಣಗಳಲ್ಲಿ ಭಾರತವೇ ಮುಂದಿದೆ. ಪ್ರತಿ 20 ನಿಮಿಷಕ್ಕೆ ಒಂದು ಅತ್ಯಾಚಾರ ನಡೆಯುತ್ತಿದೆ. ಇವು ದಾಖಲಾದ ಪ್ರಕರಣಗಳು ಮಾತ್ರ. ಇನ್ನೂ ದಾಖಲಾಗದ ಹಲವು ಪ್ರಕರಣಗಳು ಬೆಳಕಿಗೆ ಬರುವುದಿಲ್ಲ. ಹಲವು ವರ್ಷಗಳ ಕಾಲ ಕೇಸ್ ಮುಂದೂಡಿಕೆಯಿಂದ ಸತ್ಯವನ್ನು ಸುಳ್ಳು ಮಾಡುವ ಪ್ರಕರಣಗಳು ನಡೆಯುತ್ತಿವೆ. ಹೀಗಾಗಿ ಅಪರಾಧಿಗಳಿಗೆ ಕಾನೂನಿನ ಭಯ ಇಲ್ಲದಂತಾಗಿ ಇಂಥ ಘಟನೆಗಳು ಮರುಕಳಿಸುತ್ತಿವೆ ಎಂದು ಹೇಳಿದರು.
ಎಐಡಿವೈಒ ಉಪಾಧ್ಯಕ್ಷ ಡಾ.ಜಿ.ಶಶಿಕುಮಾರ್ ಮಾತನಾಡಿ, ದೇಶದ ಬೆಳವಣಿಗೆಯಲ್ಲಿ ಮುಖ್ಯ ಪಾತ್ರ ನಿರ್ವಹಿಸಬೇಕಾದ ಯುವಕರನ್ನು ಸರ್ಕಾರ ಮಾದಕ ವಸ್ತುಗಳ ಚಟಗಳಿಗೆ, ಅಶ್ಲೀಲ ಸಿನೆಮಾ ಮತ್ತು ಕೋಮುವಾದಗಳಂಥ ಸಮಾಜಘಾತಕ ಕೆಲಸಗಳಲ್ಲಿ ತೊಡಗುವಂತೆ ಮಾಡಿ. ನಿರುದ್ಯೋಗ, ಬೆಲೆ ಏರಿಕೆ ಹಾಗೂ ಭ್ರಷ್ಟಾಚಾರದಂಥ ಸಮಸ್ಯೆಗಳ ವಿರುದ್ಧ ಧ್ವನಿ ಎತ್ತದಂತೆ ನೈತಿಕತೆ ಕಸಿದು ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿವೆ. ಹಾಗಾಗಿ ಯುವಕರು ಸಾಧಕರ ತತ್ವಾದರ್ಶಗಳನ್ನು ತಿಳಿದು ಅನ್ಯಾಯದ ವಿರುದ್ಧ ಧ್ವನಿ ಎತ್ತಲು ಮುಂದಾಗಬೇಕು ಎಂದರು.