ಹುಬ್ಬಳ್ಳಿ : ಪ್ರತಿಯೊಬ್ಬ ವ್ಯಕ್ತಿ ಸಮಾಜದಲ್ಲಿನ ದೀನ, ದಲಿತರು, ದುಃಖಿತರ ಸಮಸ್ಯೆಗಳಿಗೆ ಸ್ಪಂಧಿಸಬೇಕು. ಸೇವೆ ಆಂದೋಲನದ ರೂಪದಲ್ಲಿ ಆಗಬೇಕು ಎಂಬುದು ಸೇವಾ ಭಾರತಿ ಟ್ರಸ್ಟ್ನ ಅಪೇಕ್ಷೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖರಾದ ಮಂಗೇಶ ಭೇಂಡೆ ಹೇಳಿದರು.
ಸೇವಾ ಭಾರತಿ ಟ್ರಸ್ಟ್ನ ಆಶ್ರಯದಲ್ಲಿ ನಗರದಲ್ಲಿ ಬುಧವಾರ ಆಯೋಜಿಸಿದ್ದ ಸೇವಾಭಾರತಿಯ ರಜತ ಮಹೋತ್ಸವ ಸಮಾರೋಪ ‘ರಜತ ಸಂಭ್ರಮ’ ಕಾರ್ಯಕ್ರಮದಲ್ಲಿ ಅವರು ಮುಖ್ಯ ಭಾಷಣಕಾರರಾಗಿ ಮಾತನಾಡಿದರು.
ನಿರೋಗ, ಸಶಕ್ತ, ಸಂಘಟಿತ ಸಮಾಜದ ನಿರ್ಮಾಣ ಸಂಘದ ಉದ್ದೇಶ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರೇರಣೆಯಿಂದ ಸ್ಥಾಪಿತಗೊಂಡಿರುವ ಸೇವಾ ಭಾರತಿ, ಯಾವುದೇ ರೀತಿಯ ಫಲಾಪೇಕ್ಷೆ ಇಲ್ಲದೇ ಸೇವಾ ಕಾರ್ಯದಲ್ಲಿ ತೊಡಗಿಕೊಂಡಿದೆ. ಸೇವೆಗೆ ಸಂವೇದನೆ ಹಾಗೂ ಹೃದಯವಂತಿಕೆ ಬೇಕು ಎಂದರು.
ಒಂದು ಕಾಲದಲ್ಲಿ ಭಾರತ ವಿಶ್ವಗುರುವಾಗಿತ್ತು. ಆ ಕಾಲ ಮತ್ತೆ ಬರಬೇಕು. ಭಾರತ ಮತ್ತೆ ಜಗದ್ಗುರು ಆಗಬೇಕೆಂಬುದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಯತ್ನ. ಸಮಾಜದಲ್ಲಿನ ನ್ಯೂನ್ಯತೆ, ಲೋಪ ಮತ್ತು ಮೇಲು ಕೀಳೆಂಬ ಕೀಳರಿಮೆಯನ್ನು ನಿವಾರಿಸುವ ಮೂಲಕ ನಿರೋಗಿ ಹಾಗೂ ಸಶಕ್ತ ಸಮಾಜದ ನಿಮಾಣವೇ ಸಂಘದ ಮುಖ್ಯ ಉದ್ದೇಶ ಎಂದರು.
ಸಮಾಜದಲ್ಲಿನ ಕೆಲವರ ದಯನೀಯ ಸ್ಥಿತಿಯನ್ನು ದುರುಪಯೋಗಪಡಿಸಿಕೊಂಡ ಕೆಲ ಮಿಷನರಿಗಳು, ಸೇವೆಯ ಹೆಸರಿನಲ್ಲಿ ಅವರನ್ನು ಮತಾಂತರಗೊಳಿಸುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ಅತಿ ಕಡಿಮೆ ಅವಧಿಯಲ್ಲಿ ಸಮಾಜವನ್ನು ತಲುಪುವ ಕಾರ್ಯವನ್ನು ಸೇವಾ ಭಾರತಿ ಟ್ರಸ್ಟ್ ಮಾಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಮಾಜದ ಪ್ರತಿಯೊಬ್ಬರಿಗೂ ಸಮಾನ ಅವಕಾಶ ದೊರೆಯಬೇಕು ಎಂಬುದು ಸೇವಾ ಭಾರತಿಯ ಉದ್ದೇಶ. ಸೇವಾ ಭಾರತಿಯಡಿ ಕಾರ್ಯ ನಿರ್ವಹಿಸುತ್ತಿರುವ ಬಾಲಕಲ್ಯಾಣ ಕೇಂದ್ರದಲ್ಲಿ ಬೆಳೆದ ಹೆಣ್ಣು ಮಕ್ಕಳು ಇಂದು ಸಾವಿರಾರು ಮನೆಯ ದೀಪ ಬೆಳಗುತ್ತಿದ್ದಾರೆ. ಪತಿಯ ಮನೆಯಲ್ಲಿ ಸುಸಂಸ್ಕೃತ ಜೀವನ ನಡೆಸುವ ಮೂಲಕ ಇತರ ಮಕ್ಕಳಿಗೂ ಮಾದರಿಯಾಗಿದ್ದಾರೆ ಎಂದರು.
ಆಶೀರ್ವಚನ ನೀಡಿದ ಸಾನ್ನಿಧ್ಯ ವಹಿಸಿದ್ದ ಬೆಂಗಳೂರು ಶ್ರೀಬೇಲಿ ಮಠದ ಶ್ರೀ ಶಿವರುದ್ರ ಸ್ವಾಮೀಜಿ, ಸೇವೆ ನಿಸ್ವಾರ್ಥವಾಗಿರಬೇಕು ಎಂದು ಹೇಳಿದರು.
ಮುಂಬೈನ ರಾಷ್ಟ್ರೀಯ ಸೇವಾ ಭಾರತಿ ಅಧ್ಯಕ್ಷ ಸುನೀಲ ಸಪ್ರೆ ಮಾತನಾಡಿ, ಸ್ವದೇಶಿ ಆಧಾರದ ಮೇಲೆ ಸಮಾಜ ನಿರ್ಮಾಣ ಕಾರ್ಯ ನಡೆಯಬೇಕು ಎಂದು ತಿಳಿಸಿದರು.
ರಜತ ಮಹೋತ್ಸವ ಸಮಾರೋಪ ಸಮಿತಿ ಅಧ್ಯಕ್ಷ ಬಸವರಾಜ ದೇಶಮುಖ ಅಧ್ಯಕ್ಷತೆ ವಹಿಸಿದ್ದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರಾದ ಶ್ರೀಧರ ನಾಡಿಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ವಿದ್ಯಾವಿಕಾಸ ಪ್ರಕಲ್ಪದ ಕೈಪಿಡಿ ರಜತಪಥ ಕೃತಿ ಲೋಕಾರ್ಪಣೆಗೊಳಿಸಲಾಯಿತು.
ಇದಕ್ಕೂ ಮೊದಲು ಹಿಂದೂಸ್ತಾನಿ ಗಾಯಕ ಜಯತೀರ್ಥ ಮೇವುಂಡಿ ಅವರಿಂದ ಸಂಗೀತ ಕಾರ್ಯಕ್ರಮ ನೆರವೇರಿತು.
ರಜತ ಮಹೋತ್ಸವ ಸಮೀತಿಯ ಅಧ್ಯಕ್ಷ ಬಸವರಾಜ ದೇಶಮುಖ, ಮಜೇಥಿಯಾ ಫೌಡೇಷನ್ ಮುಖ್ಯಸ್ಥೆ ನಂದಿನಿ ಕಷ್ಯಪ್, ಎಚ್.ಡಿ.ಪಾಟೀಲ, ಡಾ. ರಘು ಅಕಮಂಚಿ, ಪೂರ್ಣಚಂದ್ರ ಘಂಟಸಾಲಾ, ಮಂಜುಮಾಥ ಮಕ್ಕಳಗೇರಿ, ಡಾ.ಎಂ.ನಾಗರಾಜ, ಕಮಲಾ ಜೋಶಿ, ಭಾರತಿ ನಂದಕುಮಾರ, ರಾಘವೇಂದ್ರ ಕಾಗವಾಡ, ಬಸವರಾಜ ಗಾಡಿ, ಗೋವಿಂದ ಜೋಶಿ, ಸು.ರಾಮಣ್ಣ, ಮೇಯರ್ ರಾಮಪ್ಪ ಬಡಿಗೇರ ಹಾಗೂ ಇತರರು ಉಪಸ್ಥಿತರಿದ್ದರು.