ವಿಜಯಪುರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ನಡೆದ ಸಂಸ್ಕೃತೋತ್ಸವವನ್ನು ಪೇಜಾವರದ ವಿಶ್ವ ಪ್ರಸನ್ನತೀರ್ಥ ಶ್ರೀಪಾದಂಗಳು ಉದ್ಘಾಟಿಸಿದರು. ಜ್ಞಾನ ಯೋಗಾಶ್ರಮದ ಬಸವಲಿಂಗ ಸ್ವಾಮೀಜಿ, ಪಂ. ಮಧ್ವಾಚಾರ್ಯ ಮೊಕಾಶಿ, ಸಿ.ಕೆ. ಹೊಸಮನಿ ಮತ್ತಿತರರಿದ್ದಾರೆ. 
ಜಿಲ್ಲೆ

ಸಂಸ್ಕೃತ ಸಾರ್ವತ್ರಿಕರಣವಾಗಲಿ

Vijayapura - Desk - Parashuram Keri

ವಿಜಯಪುರ: ಸಂಸ್ಕೃತ ಅತ್ಯಂತ ಪ್ರಾಚೀನ ಭಾಷೆ. ಅದು ಕೇವಲ ಕೆಲವೇ ಜನ ಬಳಕೆ ಮಾಡುವಂಥ ಭಾಷೆಯಾಗಿ ಉಳಿದಿದೆ. ಆ ಭಾಷೆ ಸಾರ್ವತ್ರಿಕರಣಗೊಳ್ಳಬೇಕೆಂದು ಪೇಜಾವರದ ವಿಶ್ವ ಪ್ರಸನ್ನತೀರ್ಥ ಶ್ರೀಪಾದಂಗಳು ಹೇಳಿದರು.

ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಗುರುವಾರ ನಡೆದ ಸಂಸ್ಕೃತೋತ್ಸವದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ದೇಶದ ಪ್ರತಿ ಭಾಷೆಯಲ್ಲೂ ಶೇ. 60 ರಷ್ಟು ಸಂಸ್ಕೃತ ಪದ ಬಳಕೆ ಕಾಣುತ್ತೇವೆ. ನಿಸರ್ಗದ ಪ್ರಾಣಿ ಪಕ್ಷಿಗಳ ಕೂಗುವಿಕೆಯಲ್ಲಿಯೂ ನಾವು ಸಂಸ್ಕೃತ ಕಾಣಬಹುದು. ಎಲ್ಲ ಜನಾಂಗದವರು ಸಂಸ್ಕೃತ ಕಲಿತರೆ ಸರಳವಾಗಿ ವ್ಯವಹರಿಸಬಹುದು ಎಂದರು.

ಜ್ಞಾನ ಯೋಗಾಶ್ರಮದ ಬಸವಲಿಂಗ ಸ್ವಾಮೀಜಿ ಮಾತನಾಡಿ, ಮಕ್ಕಳು ಯಾವತ್ತೂ ದೇಶದ ಆಸ್ತಿ. ಅವರು ಸಂಸ್ಕೃತ ಭಾಷೆಯನ್ನು ಬೆಳೆಸಿ ದೇಶದ ಸಂಸ್ಕೃತಿಯನ್ನು ಎತ್ತಿ ಹಿಡಿಯಬೇಕು ಎಂದು ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಮಹದೇವ ಮುರಗಿ ಮಾತನಾಡಿ, ಎಲ್ಲ ಭಾಷೆಗಳಿಗೆ ಅದರದ್ದೇ ಆದ ಮಹತ್ವವಿದೆ. ಆದರೆ ಸಂಸ್ಕೃತ ದೇವಭಾಷೆ ಎಂದು ಅನೇಕರು ಅದನ್ನು ದೂರವಿಡುವ ಪ್ರಸಂಗ ಈಗ ಕಂಡುಬರುತ್ತದೆ ಮತ್ತು ಅತ್ಯಂತ ಕಡಿಮೆ ಜನ ಸಂಸ್ಕೃತ ವಿಷಯವನ್ನು ತಮ್ಮ ಪಠ್ಯಕ್ರಮವಾಗಿ ಅಧ್ಯಯನ ಮಾಡುತ್ತಿದ್ದಾರೆ ಎಂದು ತಿಳಿಸಿ, ವಿದ್ಯಾರ್ಥಿಗಳು ತಮ್ಮ ಇತರ ಭಾಷೆಯ ಅಧ್ಯಯನದೊಂದಿಗೆ ಸಂಸ್ಕೃತ ಭಾಷೆಯನ್ನು ಕೂಡ ಅಭ್ಯಸಿಸಬೇಕು ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಪಂ. ಮಧ್ವಾಚಾರ್ಯ ಮೊಕಾಶಿ ಮಾತನಾಡಿ, ಸಂಸ್ಕ್ಕೃತ ಭಾಷೆಯನ್ನು ಅತ್ಯಂತ ಮೃದು ಹಾಗೂ ಸರಳ ಭಾಷೆ. ಶಿಕ್ಷಕರು ಹಾಗೂ ಪಾಲಕರು ಹೆಚ್ಚಿನ ಕಾಳಜಿವಹಿಸಿ ಮಕ್ಕಳಲ್ಲಿ ಸಂಸ್ಕೃತದ ಕಲಿಕೆಯ ಅಭಿರುಚಿಯನ್ನು ಮೂಡಿಸಲು ಇಂಥ ಕಾರ್ಯಕ್ರಮಗಳು ಮೇಲಿಂದ ಮೇಲೆ ಆಗಬೇಕೆಂದು ಹೇಳಿದರು.

ಪದವಿ ಪೂರ್ವ ಶಿಕ್ಷಣಾಧಿಕಾರಿ ಸಿ.ಕೆ. ಹೊಸಮನಿ, ಸಿಕ್ಯಾಬ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಎ.ಎಸ್. ಪಾಟೀಲ ಮಾತನಾಡಿದರು.
ಎನ್.ಎಚ್. ನಾಗೂರ, ಬಿ.ಟಿ. ಗೋಂಗಡಿ, ಆನಂದ ಜೋಶಿ, ರಾಮಸಿಂಗ ರಜಪೂತ, ಎಂ.ಆರ್. ಜೋಶಿ, ಆರ್.ಬಿ. ಕೊಟ್ನಾಳ, ರಾಜೇಶ ದರಬಾರ, ಡಾ.ಡಿ.ಆರ್. ನಿಡೋಣಿ, ಆನಂದ ಬಿರಾದಾರ, ಜಯತೀರ್ಥ ಕುಲಕರ್ಣಿ, ಡಾ. ವಿ.ಬಿ. ಗ್ರಾಮಪುರೋಹಿತ ಮತ್ತಿತರರಿದ್ದರು. ಡಾ. ಗಿರೀಶ ಅಕಮಂಚಿ ಸ್ವಾಗತಿಸಿದರು. ಪಂ. ವೇದನಿಧಿ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಂ. ಪ್ರದ್ಯುಮ್ನಾಚಾರ ಪೂಜಾರ ನಿರ್ವಹಿಸಿದರು.