ಪುತ್ತೂರು ಗ್ರಾಮಾಂತರ: ಆಚರಣೆಗಳು ಒಂದು ಜಾತಿಗೆ ಮಾತ್ರ ಸೀಮಿತವಾಗಬಾರದು. ಇಂದಿನ ದಿನಗಳಲ್ಲಿ ಆಟಿದ ಕೂಟ, ಕೆಸರುಡೊಂಜಿ ದಿನ ಮೊದಲಾದ ಕಾರ್ಯಕ್ರಮಗಳನ್ನು ತಮ್ಮ ಜಾತಿಯವರಿಗೆ ಮಾತ್ರ ಸೀಮಿತವಾಗಿ ಆಚರಣೆ ಮಾಡುತ್ತಿರುವುದು ಸರಿಯಲ್ಲ. ಪ್ರತಿಯೊಬ್ಬರು ಒಗ್ಗಟ್ಟಾಗಿ ಆಚರಣೆಗಳನ್ನು ಮಾಡಿದಾಗ ಅದಕ್ಕೊಂದು ಅರ್ಥ ಬರುತ್ತದೆ ಎಂದು ಉಪನ್ಯಾಸಕ, ದೈವನರ್ತಕ ಡಾ.ರವೀಶ್ ಪಡುಮಲೆ ಅಭಿಪ್ರಾಯಪಟ್ಟರು.
ಕೆದಂಬಾಡಿ ಗ್ರಾಮದ ತ್ಯಾಗರಾಜನಗರ ಹಿಂದು ಜಾಗರಣಾ ವೇದಿಕೆ 22ನೇ ವಾರ್ಷಿಕ ಸಮಾರಂಭದ ಪ್ರಯುಕ್ತ ಸೋಮವಾರ ಸಂಜೆ ತ್ಯಾಗರಾಜನಗರದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು. ಹಿಂದು ಎನ್ನುವುದು ಜಾತಿಯಲ್ಲಿ ವಿಲೀನವಾಗಬಾರದು.ನಾವೆಲ್ಲರೂ ಹಿಂದು ಎನ್ನುವ ಭಾವನೆ ನಮ್ಮಲ್ಲಿ ಬರಬೇಕು ಎಂದರು.
ಕಬಡ್ಡಿ ಕ್ರೀಡೆಯಲ್ಲಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿರುವ ದೀಪಾ ತ್ಯಾಗರಾಜನಗರ, ಪತ್ರಿಕೋದ್ಯಮದಲ್ಲಿ ರ್ಯಾಂಕ್ ಪಡೆದ ದಿವ್ಯಾ ವಿ.ರೈ., ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ಸುಷ್ಮಾ ಕೆ.ಕೊಂಬರಡ್ಕ, ಶಿಶಿಕ್ ಬಾರಿಕೆ ಅವರನ್ನು ಜಾಗರಣಾ ವೇದಿಕೆ ವತಿಯಿಂದ ಸನ್ಮಾನಿಸಲಾಯಿತು.
ವಾರ್ಷಿಕ ಸಮಾರಂಭದ ಪ್ರಯುಕ್ತ ಅರಿಯಡ್ಕ, ಕೆದಂಬಾಡಿ ಗ್ರಾಮದ ವಿದ್ಯಾರ್ಥಿಗಳಿಗೆ, ಗ್ರಾಮಸ್ಥರಿಗೆ ಹಮ್ಮಿಕೊಳ್ಳಲಾದ ವಿವಿಧ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಅನ್ನದಾನ ಸೇವಾರ್ಥಿ ಅಜಿತ್ ರೈ ದೇರ್ಲ, ಹಿಂದು ಜಾಗರಣಾ ವೇದಿಕೆ ಸಂಯೋಜಕ ಭವಿತ್ ಪಯಂದೂರು, ಹಿಂದು ಜಾಗರಣಾ ವೇದಿಕೆ ಸಹ ಸಂಯೋಜಕ ಲೋಕೇಶ್ ಸ್ವಾಮಿನಗರ, ಆನಂದ ಸ್ವಾಮಿನಗರ, ಕೇಶವ ಸ್ವಾಮಿನಗರ ಮತ್ತಿತರರು ಉಪಸ್ಥಿತರಿದ್ದರು.
ಹರೀಶ್ ಸ್ವಾಮಿನಗರ ಪ್ರಾರ್ಥಿಸಿದರು. ದಿವ್ಯಾ ರೈ ಸ್ವಾಗತಿಸಿದರು. ಅಶೋಕ್ ತ್ಯಾಗರಾಜನಗರ ವಂದಿಸಿದರು. ಸೌಮ್ಯ ವಿನಯಕುಮಾರ್, ದಿವ್ಯಾ ರೈ ನಿರೂಪಿಸಿದರು.