ಕೊಂಡ್ಲಹಳ್ಳಿ: ಜೀವನ ಶೈಲಿ ಸುಧಾರಿಸಿಕೊಳ್ಳುವುದರ ಮೂಲಕ ಹೃದಯ ಸಂಬಂಧ ಸೇರಿ ವಿವಿಧ ರೋಗಗಳಿಂದ ದೂರ ಇರಬಹುದು ಎಂದು ಹೃದಯ ತಜ್ಞ ಡಾ.ಸಿ.ಎನ್.ಮಂಜುನಾಥ್ ಹೇಳಿದರು
ಗ್ರಾಮದ ಎಂಆರ್‌ಟಿ ಕಣ್ಣಿನ ಆಸ್ಪತ್ರೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಹೃದಯ ಉಚಿತ ತಪಾಸಣೆ ಮತ್ತು ರಕ್ತದಾನ ಶಿಬಿರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ವಾಕಿಂಗ್, ಒತ್ತಡ ಮುಕ್ತ ಜೀವನ, ಗುಣಮಟ್ಟದ ಆಹಾರ ಹಾಗೂ ದ್ವೇಷ ರಹಿತ ಗುಣ ಬೆಳೆಸಿಕೊಂಡರೆ ಆರೋಗ್ಯವಾಗಿ ಇರಬಹುದು ಎಂದರು.
ರೋಗಗಳು ಬಂದ ಬಳಿಕ ಚಿಕಿತ್ಸೆ ಪಡೆದುಕೊಳ್ಳುವುದಕ್ಕಿಂತ ಕಾಯಿಲೆಗಳು ನಮ್ಮ ಬಳಿ ಸುಳಿಯದಂತೆ ಜೀವನ ಶೈಲಿ ರೂಢಿಸಿಕೊಳ್ಳಬೇಕು. ವೈಯಕ್ತಿಕ ಜತೆಗೆ ಸುತ್ತಮುತ್ತಲಿನ ಪ್ರದೇಶದಲ್ಲಿನ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಹೇಳಿದರು.
ಊಟದಲ್ಲಿ ಗುಣಮಟ್ಟದ ಆಹಾರ ಇರುವಂತೆ ಗಮನಹರಿಸಬೇಕು. ದುಶ್ಚಟಗಳಿಂದ ದೂರ ಇರಬೇಕು. ರೋಗದ ಲಕ್ಷಣಗಳು ಕಂಡ ತಕ್ಷಣ ವೈದ್ಯರ ಬಳಿ ತೆರಳಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದರು.
ಎಂಆರ್‌ಟಿ ಕಣ್ಣಾಸ್ಪತ್ರೆಯ ಕಾರ್ಯದರ್ಶಿ ಟಿ.ರೇವಣ್ಣ ಮಾತನಾಡಿ, ದೇವರಿಗೆ ಸಮನಾದ ಸ್ಥಾನ ಪಡೆದಿರುವ ವೈದ್ಯರು, ವೃತ್ತಿಯಲ್ಲಿ ಬದ್ಧತೆ, ಪ್ರಾಮಾಣಿಕತೆ ಪ್ರದರ್ಶಿಸಿದರೆ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುತ್ತಾರೆ ಎಂದು ಹೇಳಿದರು.
ಡಾ.ಬಿ.ಶಿವಕುಮಾರ್, ನಿವೃತ್ತ ಶಿಕ್ಷಕ ಎಂ.ಟಿ.ಶರಣಪ್ಪ ಮಾತನಾಡಿದರು. ನೇತ್ರ ತಜ್ಞ ಡಾ.ಎನ್.ವಿಜಯ್ ಅಧ್ಯಕ್ಷತೆ ವಹಿಸಿದ್ದರು. ಡಾ.ಎಂ.ಮಲ್ಲಿಕಾರ್ಜುನ್, ಡಾ.ಮಂಜುನಾಥ್, ಡಾ.ಹರ್ಷ, ಡಾ.ಬಿ.ಶಿವಕುಮಾರ್, ಡಾ.ಗೀತಾ, ಪಟ್ಟಸಾಲೆ ಸಮಾಜದ ಗೌರವಾಧ್ಯಕ್ಷ ಡಿ.ಷಡಕ್ಷರಪ್ಪ, ಬೀರಲಿಂಗೇಶ್ವರ ವಿದ್ಯಾಸಂಸ್ಥೆಯ ಬಿ.ಎಸ್.ಬಸವರಾಜಪ್ಪ, ಉದ್ಯಮಿ ಕೆ.ಆರ್.ಗೋವಿಂದರೆಡ್ಡಿ, ರಾಜ್ಯ ಸಹಕಾರ ಮಹಾಮಂಡಲದ ನಿರ್ದೇಶಕ ಆರ್.ರಾಮರೆಡ್ಡಿ, ಗ್ರಾಪಂ ಸದಸ್ಯರಾದ ಬಿ.ಟಿ.ಹನುಮರೆಡ್ಡಿ, ವಿ.ಪಾಲಾಕ್ಷ, ಎಸ್.ಕೆ.ಗುರುಲಿಂಗಪ್ಪ ಜಿ.ವಿ.ವೀರಭದ್ರಪ್ಪ, ಕೆ.ಶಾಂತವೀರಣ್ಣ, ಎ.ಟಿ.ತಿಪ್ಪೇಸ್ವಾಮಿ ಇತರರಿದ್ದರು.
ಖ್ಯಾತ ನೇತ್ರ ತಜ್ಞ ಡಾ.ಕೆ.ನಾಗರಾಜ್ ಸ್ಮರಣಾರ್ಥ ಎಂಆರ್‌ಟಿ ಗ್ರಾಮಾಂತರ ಕಣ್ಣಿ ಆಸ್ಪತ್ರೆ, ಇಂಡಿಯಾನಾ ಎಸ್‌ಜೆಎಂ ಹಾರ್ಟ್ ಸೆಂಟರ್, ಬಸವೇಶ್ವರ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ವಾಸವಿ ಡಯಾಗ್ನೋಸ್ಟಿಕ್ ಲ್ಯಾಬೋರೇಟರಿ ಚಿತ್ರದುರ್ಗ, ಮಂಗಳೂರಿನ ಇಂಡಿಯಾನಾ ಆಸ್ಪತ್ರೆ ಆಶ್ರಯದಲ್ಲಿ ಶಿಬಿರ ಆಯೋಜಿಸಲಾಗಿತ್ತು.