ಸಂಕೇಶ್ವರ: ಸರ್ಕಾರ ಖಾತಾ ರಹಿತರ ಗೃಹ ಆಸ್ತಿ ನೋಂದಣಿಗೆ ಉತ್ತಮ ಅವಕಾಶ ಒದಗಿಸಿಕೊಟ್ಟಿದೆ. ಅಗತ್ಯ ದಾಖಲೆ ಸಲ್ಲಿಸಿ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ನಿಖಿಲ್ ಕತ್ತಿ ಹೇಳಿದರು.
ಪಟ್ಟಣದ ಪುರಸಭೆ ಕಾರ್ಯಾಲಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಇ-ಖಾತಾ ಅಭಿಯಾನದಲ್ಲಿ ಮಾತನಾಡಿದ ಅವರು, ಖಾತಾ ನೋಂದಣಿ ಸಮಸ್ಯೆಯಿಂದ ಹಲವಾರು ಜನರು ಯೋಜನೆಯಿಂದ ವಂಚಿತರಾಗಿದ್ದಾರೆ. ಸರ್ಕಾರ ನೀಡಿರುವ ಕಾಲಮಿತಿಯೊಳಗೆ ಸಾರ್ವಜನಿಕರು ಆಸ್ತಿ ನೋಂದಣಿ ಮಾಡಿಕೊಳ್ಳಬೇಕು ಎಂದರು.
ಪುರಸಭೆ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳು ಜಂಟಿಯಾಗಿ ಸಾರ್ವಜನಿಕರಲ್ಲಿ ಈ ಯೋಜನೆ ಅರಿವು ಮೂಡಿಸಬೇಕು. ಅಗತ್ಯ ದಾಖಲೆ ಸಲ್ಲಿಸಿದವರಿಗೆ ವಿಳಂಬ ಮಾಡದೇ ಕಾಲಮಿತಿಯೊಳಗೆ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸುವ ಮೂಲಕ ಯೋಜನೆ ಯಶಸ್ಸಿಗೆ ಸಹಕರಿಸರಿಸಬೇಕು. ಯೋಜನೆಯನ್ನು ಪಕ್ಷಾತೀತವಾಗಿ ಜನರ ಮನೆಬಾಗಿಲಿಗೆ ತಲುಪಿಸುವ ಮೂಲಕ ಜನಸ್ನೇಹಿ ಆಡಳಿತ ನೀಡಬೇಕು ಎಂದು ಸೂಚಿಸಿದರು.
ಯೋಜನೆ ಬಗೆಗೆ ಅಧಿಕಾರಿಗಳು ಪೂರ್ಣ ಮಾಹಿತಿ ನೀಡಿಲ್ಲ ಎಂದು ಪುರಸಭೆ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ, ಪುರಸಭೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಹಲವರಿಗೆ ಸ್ಥಳದಲ್ಲಿಯೇ ಬಿ.ಖಾತಾ ವಿತರಿಸಲಾಯಿತು. ಫುರಸಭೆ ಅಧ್ಯಕ್ಷೆ ಸೀಮಾ ಹತನೂರೆ, ಉಪಾಧ್ಯಕ್ಷ ವಿವೇಕ ಕ್ವಳ್ಳಿ, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಮೋದ ಹೊಸಮನಿ, ಪುರಸಭೆ ಸದಸ್ಯ ಗಂಗಾರಾಮ ಭೂಸಗೋಳ, ಪುರಸಭೆ ಮಾಜಿ ಅಧ್ಯಕ್ಷ ಸಂಜಯ ಶಿರಕೋಳಿ, ಶಿವಾನಂದ ಮುಡಸಿ, ದಿಲೀಪ ಹೊಸಮನಿ, ಪಿಂಟು ಪರೀಟ, ದೀಪಕ ಭಿಸೆ, ಅವಿನಾಶ ನಲವಡೆ, ಪ್ರವೀಣ ನೇಸರಿ, ಪುರಸಭೆ ಮುಖ್ಯಾಧಿಕಾರಿ ಪ್ರಕಾಶ ಮಠದ, ಅಭಿಯಂತ ಆರ್.ಬಿ.ಗಡಾದ ಇತರರು ಇದ್ದರು.