ಮಡಿಕೇರಿ:
ಪತ್ರಿಕಾ ವಿತರಕರ ಕ್ಷೇಮಾನಿಧಿಗೆ ಈ ಹಿಂದಿನ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಹಣ ಮೀಸಲಿಟ್ಟಿದ್ದರು. ನಂತರ ಸರ್ಕಾರ ಬದಲಾದ ವೇಳೆಯಲ್ಲಿ ಈ ಯೋಜನೆ ರದ್ದುಗೊಳಿಸಲಾಯಿತು. ಇದೀಗ ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿರುವ ಹಿನ್ನೆಲೆ ಪತ್ರಕರ್ತರು ಜನಪ್ರತಿನಿಧಿಗಳು ಹಾಗೂ ಸರ್ಕಾರದ ಗಮನ ಸೆಳೆದು ಯೋಜನೆಯ ಮರು ಅನುಷ್ಠಾನಕ್ಕೆ ಪ್ರಯತ್ನ ಮಾಡುವಂತೆ ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ ಸಲಹೆ ನೀಡಿದರು. ಕೊಡಗು ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಶನಿವಾರ ಮಾತನಾಡಿದರು.
ಪ್ರಬಲವಾದ ಪ್ರಜಾಪ್ರಭುತ್ವವನ್ನು ಭಾರತ ಹೊಂದಿದೆ. ಡಾ. ಬಿ.ಆರ್. ಅಂಬೇಡ್ಕರ್ ಸುಂದರ ಪರಿಕಲ್ಪನೆಯ ಗೌರವಾನ್ವಿತ, ಶ್ರೇಷ್ಠ ಸಂವಿಧಾನವನ್ನು ನಮಗೆ ನೀಡಿದ್ದು, ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಹಾದಿ ತಪ್ಪಿದರೆ ಅದನ್ನು ಮರಳಿ ಸರಿದಾರಿಗೆ ಕೊಂಡೊಯ್ಯುವ ಮಹತ್ತರ ಜವಾಬ್ದಾರಿ ಪತ್ರಿಕಾರಂಗದ ಹೆಗಲ ಮೇಲಿದೆ. ಈ ವ್ಯವಸ್ಥೆಯಿಂದ ಪ್ರಜಾಪ್ರಭುತ್ವ ಗಟ್ಟಿಯಾಗಿ ಬೇರೂರಿದೆ ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ಮಂಡೇಪಂಡ ಸುನಿಲ್ ಸುಬ್ರಹ್ಮಣಿ ಮಾತನಾಡಿ, ವೃತ್ತಿ ಬದುಕಿನ ಒತ್ತಡದಿಂದ ಸದಾ ಜಂಜಾಟದಲ್ಲಿರುವ ಪತ್ರಕರ್ತರು ಈ ರೀತಿಯ ಕಾರ್ಯಕ್ರಮದಿಂದ ಮನೋಲ್ಲಾಸ ಪಡೆಯಬಹುದು. ಪ್ರಾಕೃತಿಕ ವಿಕೋಪ, ಕೋವಿಡ್ ಪರಿಸ್ಥಿತಿಯ ನಡುವೆ ಪತ್ರಕರ್ತರು ಮಾಡಿದ ಕೆಲಸ ಗಮನಾರ್ಹ. ಪತ್ರಕರ್ತರು ಸಂಕಷ್ಟದಲ್ಲಿ ಜೀವನ ನಡೆಸುತ್ತಿದ್ದಾರೆ. ಈ ನಡುವೆಯೂ ಸಮಾಜದ ಪರ ಚಿಂತನೆ ಹೊಂದಿರುವುದು ಮೆಚ್ಚುಗೆಯ ವಿಷಯ ಎಂದು ಹೇಳಿದರು.
ನಗರಸಭಾ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ ಮಾತನಾಡಿ, ಬದಲಾದ ಕಾಲಘಟ್ಟ ಡಿಜಿಟಲ್ ಕ್ರಾಂತಿಯಿಂದ ಪತ್ರಿಕೆ ಓದುಗರ ಸಂಖ್ಯೆ ಕ್ಷೀಣಿಸುತ್ತಿದೆ. ಆದರೂ ಪತ್ರಕರ್ತರು ಎದೆಗುಂದದೆ ಮುನ್ನಡೆಯುತ್ತಿರುವುದು ಕಾರ್ಯಕ್ಷಮತೆಗೆ ಸಾಕ್ಷಿ ಎಂದು ಹೇಳಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಚಿನ್ನಸ್ವಾಮಿ ಮಾತನಾಡಿ, ಪತ್ರಿಕೆ, ದೃಶ್ಯಮಾಧ್ಯಮಗಳು ಸುದ್ದಿ ನೀಡುವುದರ ಹಿಂದೆ ಅನೇಕರ ಶ್ರಮವಿರುತ್ತದೆ. ಪ್ರತಿಯೊಬ್ಬರೂ ಪತ್ರಿಕೆ ಓದುವುದನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ಕೊಡಗು ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವ ಆಚರಣಾ ಸಮಿತಿ ಮಹಾಪೋಷಕ ಜಿ. ರಾಜೇಂದ್ರ ಅಧ್ಯಕ್ಷತೆ ವಹಿಸಿದ್ದರು. ಬೆಳ್ಳಿಮಹೋತ್ಸವ ಆಚರಣಾ ಸಮಿತಿ ಪ್ರಧಾನ ಕಾರ್ಯದರ್ಶಿ ರೆಜಿತ್ ಕುಮಾರ್ ಗುಹ್ಯ, ಕಾರ್ಯದರ್ಶಿ ಬಾಚರಣಿಯಂಡ ಅನು ಕಾರ್ಯಪ್ಪ, ನಂಜುಂಡಸ್ವಾಮಿ, ಚನ್ನನಾಯಕ, ಗೋಪಾಲ್ ಸೋಮಯ್ಯ, ವನಿತಾ ಚಂದ್ರಮೋಹನ್ ಇದ್ದರು.