ಜಿಲ್ಲೆ

ಪಪಂ ಸದಸ್ಯರು ಧರಣಿಗೆ ಕೈ ಜೋಡಿಸಲಿ

 17 ದಿನ ಪೂರೈಸಿದ ರೈತರ ಅಹೋರಾತ್ರಿ ಧರಣಿ

ಹುಳಿಯಾರು : ಪಟ್ಟಣ ಪಂಚಾಯಿತಿ ಸದಸ್ಯರು ತಮ್ಮ ಹೊಣೆಗಾರಿಗೆ ಅರಿತು ರೈತರ ಧರಣಿಗೆ ಕೈ ಜೋಡಿಸಬೇಕು ಎಂದು ಎದ್ದೇಳು ಕರ್ನಾಟಕ ಸಂಘಟನೆಯ ತುಮಕೂರು ಜಿಲ್ಲಾ ಸಂಯೋಜಕಿ ಎನ್​.ಇಂದಿರಮ್ಮ ತಿಳಿಸಿದರು.

ಹುಳಿಯಾರು ಪಟ್ಟಣ ಪಂಚಾಯಿತಿ ಕಚೇರಿ ಎದುರು ನಡೆಯುತ್ತಿರುವ ಅಹೋರಾತ್ರಿ ಧರಣಿಯಲ್ಲಿ ಮಾತನಾಡಿ, ಶಾಸಕರು, ಅಧಿಕಾರಿಗಳು ಬಂದರೂ ಇಲ್ಲಿಯವರೆವಿಗೆ ಸಂತೆ ಮತ್ತು ಕಸಕ್ಕೆ ಜಾಗ ಗುರುತಿಸಿಲ್ಲ. ಜನರ ಸಮಸ್ಯೆಯನ್ನು ಅವರಿನ್ನೂ ಗಂಭೀರವಾಗಿ ಪರಿಗಣಿಸಿಲ್ಲ. ಹುಳಿಯಾರು ಪಟ್ಟಣ ಕಸದ ತಿಪ್ಪೆಯಾಗಿ ಮಾರ್ಪಾಡಾಗಿದೆ. ರಸ್ತೆಯಲ್ಲಿ ಇನ್ನೂ ಸಂತೆ ನಡೆಸುತ್ತಿದ್ದಾರೆ. ಈ ಎರಡೂ ಬೇಡಿಕೆಗಳು ನ್ಯಾಯಯುತವಾದ ಬೇಡಿಕೆಗಳಾಗಿವೆ. ಜನಪ್ರತಿನಿಧಿಗಳಿಗೆ ಈ ಬೇಡಿಕೆಗಳು ಕ್ಷಣಾರ್ಧದಲ್ಲಿ ಈಡೇರಿಸಬಹುದಾದ ಬೇಡಿಕೆಗಳಾಗಿವೆ. ಆದರೆ ಇನ್ನೂ ಇಡೇರಿಸಿಲ್ಲದಿರುವುದು ಬೇಸರದ ಸಂಗತಿ ಎಂದರು.

ಕರ್ನಾಟಕ ಜನಶಕ್ತಿ ಕಾರ್ಯಕರ್ತ ರಾಮಕೃಷ್ಣಪ್ಪ ಮಾತನಾಡಿ, ರೈತರ ಧರಣಿ ಸಮುದಾಯದ ಒಳಿತಿಗಾಗಿ ಮುಂದಿನ ಪೀಳಿಗೆ ನೆಮ್ಮದಿಯ ಜೀವನ ನಡೆಸುವ ಸಲುವಾಗಿ ಶಾಶ್ವತ ಸಂತೆ ಮೈದಾನ ಹಾಗೂ ಕಸ ವಿಲೇವಾರಿ ಘಟಕದ ನಿಮಾರ್ಣದ ಹೋರಾಟ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಪರಿಹಾರ ಕಂಡುಕೊಳ್ಳಲು ಇನ್ನೂ ತೆವಳುತ್ತ ಕೆಲಸ ಮಾಡುತ್ತಿದ್ದಾರೆ. ಇವರ ಕೆಲಸಕ್ಕೆ ಜಿಂಕೆ ವೇಗ ಕೊಟ್ಟು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಬೇಕಿದ್ದರೆ ಮನೆಮನೆಯಿಂದ ಧರಣಿಗೆ ಧುಮುಕುವ ಅಗತ್ಯವಿದೆ ಎಂದು ತಿಳಿಸಿದರು.

ರೈತ ಸಂಘದ ರಾಜ್ಯಾಧ್ಯಕ್ಷ ಹೊಸಹಳ್ಳಿ ಚಂದ್ರಣ್ಣ, ರೈತ ಸಂಘದ ತಾಲೂಕು ಕಾರ್ಯಾಧ್ಯಕ್ಷ ಕರಿಯಪ್ಪ, ನಿರಾಶ್ರೀತರ ಮಹಿಳಾ ಸಂಘಟನೆಯ ಅಧ್ಯಕ್ಷೆ ಜಯಲಕ್ಷಿ$್ಮ, ಚಂದ್ರಕಲಾ, ಸರಸ್ವತಿ, ಶಿವಶಂಕರಿ ಸಂಘದ ಶಹತಾಜ್​, ರತ್ನಮ್ಮ, ದೇವರಾಜಮ್ಮ, ರೈತ ಸಂಘದ ಟಿ.ಎಸ್​.ಪ್ರಶಾಂತ್​, ಮಲ್ಲೇಶಣ್ಣ, ನೀರಾ ಈರಣ್ಣ, ಓಂಕಾರಮ್ಮ, ಟಿ.ಎನ್​.ಶಿವಣ್ಣ, ಎನ್​.ಜಿ.ರೇವಣ್ಣ, ಎಂ.ಶ್ರೀನಿವಾಸ್​ ಮತ್ತಿತರರು ಇದ್ದರು.

ಎಪಿಎಂಸಿಯಲ್ಲಿ ಸಂತೆ ಮಾಡಬಹುದೆಂದು ವರದಿ ನೀಡಿದ್ದೇನೆ : ಧರಣಿ ನಿರತ ರೈತರ ಬೇಡಿಕೆಯಂತೆ ವಾರದ ಸಂತೆಯನ್ನು ಎಪಿಎಂಸಿಗೆ ಬದಲಾಯಿಸಬಹುದೆಂದು ಎಪಿಎಂಸಿ ಡಿಡಿಗೆ ವರದಿ ಕೊಟ್ಟಿದ್ದೇನೆ. ಶಾಸಕರೂ ಸಹ ಡಿಡಿ ಅವರಿಗೆ ಫೇವರ್​ ವರದಿ ಕೊಡಲು ದೂರವಾಣಿ ಮೂಲಕ ತಿಳಿಸಿದ್ದಾರೆ. ಡಿಡಿ ಸಹ ಸರ್ಕಾರಕ್ಕೆ ಫೇವರ್​ ವರದಿ ಕೊಟ್ಟರೆ ಸಂತೆ ಶಿಫ್ಟ್​ ಮಾಡಲು ಇದ್ದ ಅಡೆತಡೆಗಳು ನಿವಾರಣೆಯಾಗಿ ಶೀಘ್ರದಲ್ಲಿ ರೈತರ ಮೊದಲ ಬೇಡಿಕೆ ಈಡೇರುತ್ತದೆ ಎಂದು ತಹಸೀಲ್ದಾರ್​ ಕೆ.ಪುರಂದರ ಅವರು ತಿಳಿಸಿದರು.