ವಿಜಯಪುರ: ಕಾವ್ಯ ಜನರಿಗೆ ಸಂದೇಶ ಕೊಡುವಂತಿರಬೇಕು. ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವಂತಿರಬೇಕೆಂದು ಹಿರಿಯ ಸಾಹಿತಿ ದೊಡ್ಡಣ್ಣ ಭಜಂತ್ರಿ ಹೇಳಿದರು.
ನಗರದ ಕರ್ನಾಟಕ ಲೇಖಕಿಯರ ಸಂಘ, ವನಿತಾ ಉತ್ಕರ್ಷ ಮಂಡಳಿ ವತಿಯಿಂದ ಮಹಿಳಾ ದಿನಾಚರಣೆ ನಿಮಿತ್ತ ಭಾನುವಾರ ಹಮ್ಮಿಕೊಂಡಿದ್ದ ಕವಿಗೋಷ್ಠಿ, ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಎಲ್ಲ ಪ್ರಕಾರಗಳಿಗಿಂತ ಕಾವ್ಯ ಪ್ರಕಾರವು ಶೀಘ್ರ ಜನಮನಕ್ಕೆ ತಲುಪುತ್ತದೆ. ಇದಕ್ಕೆ ದಕಲಿತ ಬಂಡಾಯ ಸಾಹಿತ್ಯವೇ ಸಾಕ್ಷಿ ಎಂದರು.
ಸಂಘದ ಕಾರ್ಯದರ್ಶಿ ಡಾ.ಸುಜಾತಾ ಚಲವಾದಿ ಮಾತನಾಡಿ, ನಿತ್ಯ ಮಹಿಳೆ ಮೇಲೆ ಮಾನಸಿಕ ಹಾಗೂ ದೈಹಿಕ ದೌರ್ಜನ್ಯಗಳು ನಿರಂತರ ನಡೆಯುತ್ತಲೇ ಇವೆ. ಲೈಂಗಿಕ ಅತ್ಯಾಚಾರಗಳು ದಿನೇ ದಿನೆ ಹೆಚ್ಚುತ್ತಲಿದೆ. ಅದಕ್ಕಾಗಿ ಇಂದಿನ ಮಹಿಳೆ ಜಾಗೃತಳಾಗಬೇಕಲ್ಲದೆ, ಸಂಘಟಕಳಾದಾಗ ಮಾತ್ರ ಇಂಥ ಮಹಿಳಾ ದಿನಾಚರಣೆ ಕಾರ್ಯಕ್ರಮಗಳು ಯಶಸ್ವಿಯಾಗಲು ಸಾಧ್ಯ ಎಂದರು.
ಬಾದಾಮಿಯ ಹಿರಿಯ ಲೇಖಕಿ ಜಯಶ್ರೀ ಭಂಡಾರಿ ಮಾತನಾಡಿ, ಸುನಿತಾ ವಿಲಿಯಮ್ಸ್, ಇಂದಿರಾಗಾಂಧಿ, ಅಕ್ಷರದವ್ವ ಸಾವಿತ್ರಿಬಾಯಿ ಫುಲೆ, ಜೀಜಾಮಾತೆ, ಸ್ವಾತಂತ್ರ್ಯದ ಕಿಡಿ ಹಚ್ಚಿದ ಕಿತ್ತೂರುರಾಣಿ ಚನ್ನಮ್ಮ ಆದಿಯಾಗಿ ಮಹಿಳೆಯರು ಎಲ್ಲ ರಂಗದಲ್ಲೂ ಮುಂದಿದ್ದಾರೆ, ಮಾದರಿಯಾಗಿದ್ದಾರೆ. ಕಾಲ ಕಾಲಕ್ಕೆ ನಡೆಯುವ ಆಪತ್ತುಗಳನ್ನು ಎದುರಿಸಲು ಇಂಥ ಮಹಿಳೆಯರೇ ಸ್ಫೂರ್ತಿಯಾಗಿದ್ದಾರೆ. ಜಾನಪದವು ಎಲ್ಲ ಸಾಹಿತ್ಯದ ತಾಯಿಬೇರಾಗಿದ್ದು, ಇದು ಅನಕ್ಷರ ಮಹಿಳೆಯರಿಂದ ರಚಿಸಲ್ಪಟ್ಟಿದೆ. ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿದಿರುವವರು ಹೆಣ್ಣು ಮಕ್ಕಳೇ ಎಂದರು.
ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷ ಹೇಮಲತಾ ವಸ್ತ್ರದ ಮಾತನಾಡಿ, ಕಾಲದ ಕುಲುಮೆಯಲ್ಲಿ ಬೆಂದು ಉಳಿದದ್ದು ಮಾತ್ರ ಗಟ್ಟಿ ಕಾವ್ಯ. ಕವಿಗೆ ಅಧ್ಯಯನಶೀಲತೆ ಅಗತ್ಯ ಎಂದು ತಿಳಿಸಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯೆ ದಾಕ್ಷಾಯಿಣಿ ಹುಡೇದ, ಹಲಸಂಗಿ ಗೆಳೆಯರ ಟ್ರಸ್ಟ್ ಸದಸ್ಯೆ ದಾಕ್ಷಾಯಿಣಿ ಬಿರಾದಾರ ಅವರನ್ನು ಸನ್ಮಾನಿಸಲಾಯಿತು.
ಮೀನಾಕ್ಷಿ ಪಾಟೀಲ, ಸಿದ್ಧಾರೂಢ ಕಟ್ಟಿಮನಿ, ಗೀತಾ ಕುದುರಕರ್, ಲಕ್ಷ್ಮಿ ತೊರವಿ, ಭಾಗ್ಯಶ್ರೀ ಸಕನಾದಗಿ, ರುಕ್ಮಿಣಿ ಅಗಸರ, ಶಾನುಬಿ ಮುಜಾವರ್, ದಿವ್ಯಪಾರ್ವತಿ ಹಸ್ಮಕಲ್, ರುದ್ರಮ್ಮ ಗಿಡ್ಡಪ್ಪಗೋಳ, ಸದ್ದಾಂ ಮುಜಾವರ್, ಪ್ರಿಯಾ ಹರಿದಾಸ, ಶೋಭಾ ಕಬಾಡೆ, ವಿಶಾಲಾಕ್ಷಿ ಪಾಟೀಲ, ಸುನಂದಾ ಕೋರಿ, ಶಶಿಕಲಾ ಬುಯ್ಯರ, ದೀಪಾ ಗೊಣಸಗಿ, ಧನಲಕ್ಷ್ಮೀ ದೊಡ್ಡಮನಿ, ವಿಜಯಲಕ್ಷ್ಮೀ ದಿವಾನಜಿ ಕವಿತೆ ವಾಚಿಸಿದರು.
ಹಿರಿಯ ಸಾಹಿತಿ ಇಂದುಮತಿ ಲಮಾಣಿ ಸ್ವಾಗತಿಸಿದರು. ಲೇಖಕಿ ದಾಕ್ಷಾಯಿಣಿ ಬಿರಾದಾರ ನಿರೂಪಿಸಿದರು. ಹಿರಿಯ ಸಾಹಿತಿ, ಖ್ಯಾತ ಗಜಲ್ಕಾರ್ತಿ ಪ್ರಭಾವತಿ ದೇಸಾಯಿ ವಂದಿಸಿದರು.
ಅನುರಾಧಾ ಅಡುರಾಜೂರ, ನಿವೃತ್ತ ಡೈಟ್ ಉಪನ್ಯಾಸಕ ಆರ್. ವೈ. ಕೊಣ್ಣೂರ, ರವಿ ಗೋಲಾ, ಎಸ್. ಎಸ್. ಬಬಲೇಶ್ವರ, ಚನ್ನಪ್ಪ ಹಂಚಿನಾಳ, ಮಿನಾಜಬೇಗಂ ಸುಂಬಡ ಇತರರಿದ್ದರು.