ಚಿಕ್ಕಬಳ್ಳಾಪುರ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಪಿಎಂ ಅವಾಸ್ ಯೋಜನೆಯಡಿ ಬಡವರಿಗೆ ವಸತಿ ಸೌಲಭ್ಯ ಕಲ್ಪಿಸುವ ವಿಚಾರದಲ್ಲಿ ರಾಜ್ಯ ಸರ್ಕಾರ ಮಂದಗತಿಯಲ್ಲಿ ಸ್ಪಂದಿಸುತ್ತಿದ್ದು, ಕಳೆದ ಎರಡು ವರ್ಷದಲ್ಲಿ ರಾಜ್ಯ ಒಂದು ಮನೆಯನ್ನು ಮಂಜೂರು ಮಾಡಿಲ್ಲ ಎಂದು ಸಂಸದ ಡಾ.ಕೆ.ಸುಧಾಕರ್ ಆರೋಪಿಸಿದ್ದಾರೆ.
ಗೌರಿಬಿದನೂರು ತಾಲೂಕಿನ ವಿವಿಧೆಡೆ ಸಂಸದ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ ಕೈಗೊಂಡಿರುವ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು.
*ಕಾಂಗ್ರೆಸ್‌ನಿಂದ ನ್ಯಾಯ ದೊರೆಯುತ್ತಿಲ್ಲ*
ರಾಜ್ಯ ಕಾಂರ ಸರ್ಕಾರ ರಾಜಕಾರಣದ ಉದ್ದೇಶವಿಟ್ಟುಕೊಂಡು ಯೋಜಗಳನ್ನು ರೂಪಿಸುತ್ತಿದೆ. ಕಟ್ಟಕಡೆಯ ವ್ಯಕ್ತಿಗೆ ಯಾವುದೇ ರೀತಿಯಲ್ಲೂ ನ್ಯಾಯ ದೊರಕಿಸುತ್ತಿಲ್ಲ.
ಬಸ್ ಪ್ರಯಾಣ ದರ, ನೀರಿನ ದರ, ವಿದ್ಯುತ್ತು, ಹಾಲಿನ ದರ ಸೇರಿದಂತೆ ಎ ಯಿಂದ ಝಡ್ ವರೆಗೆ ಬೆಲೆ ಏರಿಕೆ ಮಾಡುತ್ತಿದೆ. ಜಮೀನು ನೋಂದಣಿ ದರವನ್ನೂ ಏರಿಕೆ ಮಾಡಲಾಗಿದೆ ಎಂದು ಆರೋಪಿಸಿದ ಸುಧಾಕರ್, ರಸಗೊಬ್ಬರದ ಬೆಲೆ ಜಾಸ್ತಿಯಾಗಿದೆ ಎಂದು ಕೇಂದ್ರದ ಮೇಲೆ ಆರೋಪಿಸಲಾಗುತ್ತಿದೆ. ಆದರೆ, ರಸಗೊಬ್ಬರಕ್ಕೆ ಸಬ್ಸಿಡಿ ಜತೆಗೆ ಬೆಳೆಗಳಿಗೆ ಬೆಂಬಲ ಬೆಲೆಯನ್ನು ನೀಡಲಾಗುತ್ತಿದೆ. ವಿವಿಧ ದೇಶದಲ್ಲಿ ಯುದ್ಧಗಳು ನಡೆಯುತ್ತಿದ್ದರೂ ದೇಶದಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ಸಮತೋಲನ ಕಾಪಾಡಿಕೊಂಡು ಹೋಗಲಾಗುತ್ತಿದೆ. ಪರಸ್ಪರ ಬೆಲೆಗಳನ್ನು ಹೋಲಿಕೆ ಮಾಡಿ ನೋಡಿಕೊಳ್ಳಲಿ, ಭಾರತ ದೇಶದಲ್ಲಿ ಪ್ರಧಾನ ಮಂತ್ರಿಗಳು ಯಾವ ರೀತಿಯ ನಾಯಕತ್ವ ನಿರ್ವಹಿಸುತ್ತಿದ್ದಾರೆ ಎಂಬುದರ ಅರಿವಾಗುತ್ತದೆ ಎಂದರು.