ಜಿಲ್ಲೆ

ಅಭಿವೃದ್ಧಿಯಲ್ಲಿ ಅಭಿರುಚಿ ಹೊಂದಲಿ ಜನ

ಹಳಿಯಾಳ: ಜನರು ಅಭಿವೃದ್ಧಿಯಲ್ಲಿ ಅಭಿರುಚಿ ಹೊಂದಬೇಕು ಮತ್ತು ಅಭಿವೃದ್ಧಿ ಪರ ಇರುವವರನ್ನು ಗುರುತಿಸಬೇಕು ಎಂದು ಶಾಸಕ ಆರ್.ವಿ. ದೇಶಪಾಂಡೆ ಹೇಳಿದರು.

ತಾಲೂಕಿನ ಮುಂಡಗೋಡ - ಅಣಶಿ ರಾಜ್ಯ ಹೆದ್ದಾರಿ 46ರ ಜನಗಾ ಗ್ರಾಮದ ಹತ್ತಿರ 2 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಸುಧಾರಣೆ ಕಾಮಗಾರಿಗೆ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು. ಜನರ ಯೋಚನೆಗಳಲ್ಲಿ ಬದಲಾವಣೆ ಆಗಬೇಕಿದೆ. ಚುನಾವಣೆ ಸಂದರ್ಭದಲ್ಲಿ ಈ ಭಾಗದಿಂದ ನಾಲ್ಕರಷ್ಟು ಮತ ತಮಗೆ ಬರುವುದಿಲ್ಲ. ಆದರೂ ಅಭಿವೃದ್ಧಿ ಕೆಲಸದಲ್ಲಿ ಯಾವತ್ತೂ ಪಕ್ಷಪಾತ ಮಾಡುವುದಿಲ್ಲ ಎಂದರು.

ಈ ಭಾಗದಲ್ಲಿಯೂ ಕೆಲ ನಿಷ್ಠಾವಂತ ಹಾಗೂ ಪ್ರಾಮಾಣಿಕ ಕಾರ್ಯಕರ್ತರು ಇರುವುದರಿಂದ ನಿರಂತರವಾಗಿ ಆಯ್ಕೆಯಾಗುತ್ತಿದ್ದೇನೆ. ಮುಂದಾದರೂ ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸಿ ಅಭಿವೃದ್ಧಿ ಕೈಗೊಳ್ಳುವವರಿಗೆ ಮತ ನೀಡಿ ಎಂದು ವಿನಂತಿಸಿದರು.

ಜನರಲ್ಲಿ ಅಂಧಶ್ರದ್ಧೆ ಇರಬಾರದು. ಜನರ ನೆರವಿಗೆ ಧಾವಿಸುವವರಿಗೆ ಬೆಂಬಲ ನೀಡಬೇಕು, ಅಭಿವೃದ್ಧಿ ಬಗ್ಗೆ ಚಿಂತನೆ ಹೊಂದಿರಬೇಕು, ಜನಪರ ಆಡಳಿತ ಹಾಗೂ ಅಭಿವೃದ್ಧಿ ಕೈಗೊಳ್ಳುವವರಿಗೆ ಬೆಂಬಲ ಸೂಚಿಸಬೇಕು ಎಂದರು.

ಕಾಮಗಾರಿ ಗುಣಮಟ್ಟದಿಂದ ಕೈಗೊಂಡು ನಿಗದಿತ ಸಮಯಕ್ಕೆ ಮುಕ್ತಾಯವಾಗುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಪಿಡಬ್ಲುೃಡಿ ಎಇಇ ಸುಧಾಕರ ಕಟ್ಟಿಮನಿ, ಇಂಜಿನಿಯರ್ ಸಂಜು ನಾಯಕ, ರವಿ ತೋರಣಗಟ್ಟಿ, ಸಂಜು ಮಿಶ್ಯಾಳಿ, ಬಾಬು ಮಿರಾಶಿ, ರಾಜು ಮೇತ್ರಿ, ಎನ್.ವಿ. ಗೌಡ ಇತರರು ಇದ್ದರು.