ಧಾರವಾಡ: ಕೇಂದ್ರ ಹಾಗೂ ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರಗಳ ಯೋಜನೆ, ಸಾಧನೆಗಳನ್ನು ಜನರಿಗೆ ತಿಳಿಸಬೇಕು ಎಂದು ಶಾಸಕ ಹಾಗೂ ಮಹಾನಗರ ಬಿಜೆಪಿ ಜಿಲ್ಲಾಧ್ಯಕ್ಷ ಅರವಿಂದ ಬೆಲ್ಲದ ಹೇಳಿದರು.
ನಗರದ ದೈವಜ್ಞ ಕಲ್ಯಾಣ ಮಂಟಪದಲ್ಲಿ ಸೋಮವಾರ ಆಯೋಜಿಸಿದ್ದ ಹು-ಧಾ 74ರ ಮಂಡಳದ ಕಾರ್ಯಕಾರಿ ಸಭೆಯಲ್ಲಿ ಅವರು ಮಾತನಾಡಿದರು.
ಪಕ್ಷದ ಸಂಘಟನೆಯಲ್ಲಿ ಕಾರ್ಯಕರ್ತರ ಪಾತ್ರ ಪ್ರಮುಖವಾದುದು. ಯುವ ಮೋರ್ಚಾ ಹಾಗೂ ವಿವಿಧ ಪ್ರಕೋಷ್ಠಗಳ ಸದಸ್ಯರು ಪಕ್ಷದ ಬೆನ್ನೆಲುಬು ಇದ್ದಂತೆ. ಕಾರ್ಯಕರ್ತರ ಪಾಲ್ಗೊಳ್ಳುವಿಕೆಯಿಂದ ಜಿಲ್ಲೆಯಲ್ಲಿ ಪಕ್ಷ ಉತ್ತಮವಾಗಿ ಸಂಘಟನೆಯಾಗುತ್ತಿದೆ. ಮೋರ್ಚಾಗಳ ಸದಸ್ಯರು ಜನರ ಮತ್ತು ಜನಪ್ರತಿನಿಧಿಗಳ ನಡುವಿನ ಕೊಂಡಿಯಾಗಿ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದರು.
ಮುಂದಿನ ದಿನಗಳಲ್ಲಿ ಪಾಲಿಕೆ ಚುನಾವಣೆ ಬರಲಿದೆ. ಕಾರ್ಯಕರ್ತರು ಈಗಿನಿಂದಲೇ ಪಕ್ಷ ಸಂಘಟನೆಗೆ ಶ್ರಮಿಸಬೇಕು. ಸರ್ಕಾರದ ಯೋಜನೆ, ಸೌಲಭ್ಯಗಳು ಅರ್ಹರಿಗೆ ದೊರೆಯುವಂತೆ ಕಾರ್ಯನಿರ್ವಹಿಸಬೇಕು ಎಂದರು.
ಮಹಾನಗರದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯಾನಂದ ಶೆಟ್ಟಿ, ಮುಖಂಡರಾದ ಬಸವರಾಜ ಗರಗ, ಯಲ್ಲಪ್ಪ ಅರವಾಳದ, ಪ್ರಕಾಶ ಗೋಡಬೊಲೆ, ಸಂಜಯ ಕಪಟಕರ, ರಾಜೇಶ್ವರಿ ಸಾಲಗಟ್ಟಿ, ವಿಜಯ ಸಾಬಳೆ, ಇತರರಿದ್ದರು.