ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ದಿ ಸಾಗಾ ಆಫ್​ ಎ ಬ್ರೆವ್‌ಹಾರ್ಟ್’ ಸಾಕ್ಷ್ಯಚಿತ್ರ ಪ್ರದರ್ಶನ ಕಾರ್ಯಕ್ರಮದಲ್ಲಿ ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲಾ ಮಾತನಾಡಿದರು. ಲೆಫ್ಟ್ಟಿನೆಂಟ್ ಕರ್ನಲ್ ಅಜಿತ್ ಭಂಡಾರ್ಕರ್ ಅವರ ಪತ್ನಿ ವೀರನಾರಿ ಶಕುಂತಲಾ ಭಂಡಾರ್ಕರ್, ನಿರ್ದೇಶಕಿ ಮಾಯಾಚಂದ್ರ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಪ್ರೊ.ಓಂಕಾರ ಕಾಕಡೆ ಇದ್ದಾರೆ.  
ಜಿಲ್ಲೆ

ಪ್ರತಿಯೊಬ್ಬರಲ್ಲೂ ದೇಶಾಭಿಮಾನ ಬೆಳೆಯಲಿ : ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲಾ

ವಿಜಯಪುರ : ಲೆಫ್ಟಿನೆಂಟ್ ಕರ್ನಲ್ ಅಜಿತ್ ಭಂಡಾರ್ಕರ್ ಅವರ ಸಾಹಸಮಯ ಜೀವನದ ಕಥೆಯನ್ನು ಹೇಳುವ ‘ದಿ ಸಾಗಾ ಆಫ್ ಎ ಬ್ರೆವ್‌ಹಾರ್ಟ್’ ಸಾಕ್ಷ್ಯ ಚಿತ್ರ ಅತ್ಯಂತ ಪರಿಣಾಮಕಾರಿಯಾಗಿ ಮೂಡಿಬಂದಿದೆ ಎಂದು ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲಾ ಹೇಳಿದರು.

ಇಲ್ಲಿನ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ‘ದಿ ಸಾಗಾ ಆ್ ಎ ಬ್ರೆವ್‌ಹಾರ್ಟ್’ ಸಾಕ್ಷ್ಯ ಚಿತ್ರ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಈ ಒಂದು ಸಾಕ್ಷ್ಯ ಚಿತ್ರ ಕರ್ನಲ್ ಅಜಿತ್ ಅವರ ಸರಳ ಜೀವನವನ್ನು ತಿಳಿಸಿಕೊಡುವುದರ ಜೊತೆಗೆ, ಅವರು ಸೇವೆ ಸಲ್ಲಿಸುತ್ತಿರುವಾಗ ಎಲ್ಲರೊಂದಿಗೆಯೂ ಬೇರೆಯುವಂತಹ ಗುಣವನ್ನು ತಿಳಿಸಿಕೊಟ್ಟಿದೆ. ದೇಶಭಕ್ತಿಯ ಕುರಿತು ಅಭಿಮಾನ ಹುಟ್ಟಿಸುವಂತಹ ಚಿತ್ರವನ್ನು ವಿದ್ಯಾರ್ಥಿನಿಯರಿಗೆ ತೋರಿಸುತ್ತಿರುವುದು ಖುಷಿಯ ವಿಚಾರ. ಈ ರೀತಿಯ ಇನ್ನೂ ಹೆಚ್ಚಿನ ಚಿತ್ರಗಳನ್ನು ಮುಂಬರುವ ದಿನಗಳಲ್ಲಿ ವಿದ್ಯಾರ್ಥಿನಿಯರಿಗೆ ತೋರಿಸುವಂತಹ ಕೆಲಸಗಳನ್ನು ಮಾಡೋಣ ಎಂದು ಅವರು ಹೇಳಿದರು.

ಲೆಫ್ಟಿನೆಂಟ್ ಕರ್ನಲ್ ಅಜಿತ್ ಭಂಡಾರಕರ್ ಅವರ ಪತ್ನಿ ವೀರನಾರಿ ಶಕುಂತಲಾ ಭಂಡಾರ್ಕರ್ ಮಾತನಾಡಿ, ಈ ಸಾಕ್ಷ್ಯ ಚಿತ್ರದ ನಿರ್ಮಾಣಕ್ಕೆ ಮಾಯಾ ಫಿಲಂಸ್‌ನ ಸಂಸ್ಥಾಪಕ ನಿರ್ದೇಶಕಿ ಮಾಯಾ ಚಂದ್ರ ಅವರ ಕೊಡುಗೆ ಅಪಾರವಾದದು. ಅವರ ಪ್ರತಿಭೆ ಮತ್ತು ಶ್ರಮದಿಂದಲೇ ಇಂದು ಈ ಸಾಕ್ಷ್ಯ ಚಿತ್ರ ಇಲ್ಲಿ ಪ್ರದರ್ಶನವಾಗಲು ಸಾಧ್ಯವಾಗಿದೆ. ಇದರ ಶ್ರೇಯಸ್ಸು ಅವರಿಗೆ ಸಲ್ಲಬೇಕು. ನನ್ನ ಮಕ್ಕಳು ದೇಶದ ರಕ್ಷಣೆಯಲ್ಲಿ ತೊಡಗಿದ್ದು ನನಗೆ ಅತ್ಯಂತ ಹೆಮ್ಮೆಯ ವಿಷಯ ಎಂದರು.

‘ದಿ ಸಾಗಾ ಆಫ್ ಎ ಬ್ರೆವ್‌ಹಾರ್ಟ್ ಸಾಕ್ಷ್ಯ ಚಿತ್ರದ ನಿರ್ದೇಶಕಿ ಮಾಯಾ ಚಂದ್ರ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಸಾಕ್ಷ್ಯ ಚಿತ್ರ ನಿರ್ಮಾಣಕ್ಕೆ ಬೇಕಾದ ಕೌಶಲ ಹಾಗೂ ತಂತ್ರಗಾರಿಕೆಯ ಕುರಿತು ತಿಳಿಸಿದರು.

ಇದೇ ವೇಳೆ ಅಜಿತ್ ಭಂಡಾರ್ಕರ್ ಅವರ ಜೀವನಗಾಥೆಯನ್ನು ಹೇಳುವ ‘ದಿ ಸಾಗಾ ಆ್ ಎ ಬ್ರೆವ್‌ಹಾರ್ಟ್’ ಸಾಕ್ಷ್ಯ ಚಿತ್ರವನ್ನು ಪ್ರದರ್ಶಿಸಲಾಯಿತು.

ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಪ್ರೊ.ಓಂಕಾರ ಕಾಕಡೆ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು.