ತೇರದಾಳ: ಮಕ್ಕಳಿಗೆ ಉತ್ತಮ ಸಂಸ್ಕಾರ, ಶಿಕ್ಷಣ ಕೊಡುವುದು ಪ್ರತಿ ಪಾಲಕರ ಜವಾಬ್ದಾರಿಯಾಗಿದ್ದು, ಅದನ್ನು ಸರಿಯಾಗಿ ಪಾಲಿಸುವವರು ಮಾತ್ರ ನಿಜವಾದ ಪಾಲಕರು ಎಂದು ಶೇಗುಣಸಿಯ ಹಣಮಂತಪ್ಪ ಮಹಾರಾಜರು ಹೇಳಿದರು.
ಪಟ್ಟಣದ ಕಲ್ಮೇಶ್ವರ ವಿದ್ಯಾವರ್ಧಕ ಸಂಘದ ವಿನಾಯಕ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ತೇರದಾಳ ಪಶ್ಚಿಮ ವಲಯದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಮಕ್ಕಳ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಶಿಕ್ಷಣ ಸಂಯೋಜಕ ಎಸ್.ಬಿ. ಬುರ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಪ್ರತಿ ಮಗುವಿನಲ್ಲೂ ಅಗಾಧವಾದ ಪ್ರತಿಭೆ ಇರುತ್ತದೆ. ಅದನ್ನು ಹೊರಗೆಳೆಯುವುದೇ ನಿಜವಾದ ಶಿಕ್ಷಕರ ಕೆಲಸವಾಗಿದೆ. ಹೀಗಾಗಿ ಪ್ರತಿಭಾ ಕಾರಂಜಿಗಳ ಮೂಲಕ ಅಪಾರವಾದ ಪ್ರತಿಭೆಗಳು ಪ್ರಾಥಮಿಕ ಹಾಗೂ ಪ್ರೌಢ ಹಂತದ ಶಿಕ್ಷಣದಲ್ಲಿ ರೂಪುಗೊಳ್ಳುತ್ತಲಿವೆ. ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವಗಳು ಮಕ್ಕಳ ಪ್ರತಿಭೆಗೆ ಬೆಳಕು ಚೆಲ್ಲುವಂತಿರಬೇಕು ಎಂದರು.
ತೇರದಾಳ ಪೊಲೀಸ್ ಠಾಣಾಧಿಕಾರಿ ಅಪ್ಪು ಐಗಳಿ ಮಾತನಾಡಿದರು. ಸಂಸ್ಥೆ ಅಧ್ಯಕ್ಷ ಎಂ.ಎಸ್. ಗೌಡಪ್ಪನವರ ಅಧ್ಯಕ್ಷತೆ ವಹಿಸಿದ್ದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಸಮನ್ವಯಾಧಿಕಾರಿ ಹಾಗೂ ಪ್ರತಿಭಾ ಕಾರಂಜಿ ನೋಡಲ್ ಅಧಿಕಾರಿ ಡಬ್ಲುೃ. ವೈ. ಭಜಂತ್ರಿ, ಬಿ.ಎಂ. ಹಳೇಮನಿ, ಎ.ಆರ್. ಮುಧೋಳ, ಮಹೇಶ ಸೋರಗಾಂವಿ, ಭರತೇಶ ಯಲ್ಲಟ್ಟಿ, ನಿಂಗಪ್ಪ ಮಾಲಗಾಂವಿ, ರಾಮಣ್ಣ ಹಿಡಕಲ್, ಪ್ರಭಾಕರ ಬಾಗಿ, ನರಸಪ್ಪ ಅಥಣಿ, ಸುರೇಶ ರೇಣಕೆ, ಬಾಳು ದೇಶಪಾಂಡೆ, ಮಹಾವೀರ ಕೊಕಟನೂರ, ನಿಂಗಪ್ಪ ಮಲಾಬದಿ, ಅಶೋಕ ಗೌಡಪ್ಪನವರ ಇತರರಿದ್ದರು.