ವಿರಾಜಪೇಟೆ : ವಿದ್ಯಾರ್ಥಿಗಳು ಇತ್ತೀಚೆಗೆ ಮದ್ಯಪಾನ ಮತ್ತು ಮಾದಕ ವಸ್ತುಗಳಿಗೆ ಮೊರೆ ಹೋಗುತ್ತಿದ್ದು, ಪಾಲಕರು ಗಮನ ಹರಿಸಬೇಕಾಗಿದೆ ಎಂದು ಬೆಂಗಳೂರಿನ ರಕ್ಷ ಫೌಂಡೇಷನ್ ವ್ಯಸನ ಮುಕ್ತ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಪದವೀಧರ ಭೀಮೇಶ್ ಗೌಡ ಹೇಳಿದರು.
ರೋಟರಿ ಸಂಸ್ಥೆ ವಿರಾಜಪೇಟೆ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜು ವಿರಾಜಪೇಟೆ ಇವರ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಮಾದಕ ವಸ್ತು ವಿರೋಧಿ ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ಗಾಂಜಾ ಹಾಗೂ ಮದ್ಯಪಾನದಿಂದ ದೂರ ಇದ್ದು ಭವಿಷ್ಯದ ಕಡೆಗೆ ಗಮನಹರಿಸಬೇಕು. ಮದ್ಯಪಾನ ಮನುಷ್ಯನ ಬುದ್ಧಿಶಕ್ತಿಯನ್ನು ಕಡಿಮೆ ಮಾಡುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ದುಶ್ಚಟಗಳನ್ನು ದೂರಮಾಡಿ ಪಾಠದ ಕಡೆಗೆ ಗಮನಹರಿಸುವ ಮೂಲಕ ದೇಶದ ಉತ್ತಮ ಪ್ರಜೆಗಳಾಗಬೇಕು ಎಂದರು.
ವಿರಾಜಪೇಟೆ ರೋಟರಿ ಸಂಸ್ಥೆಯ ಅಧ್ಯಕ್ಷ ಪ್ರಣವ್ ಚಿತ್ರಭಾನು ಮಾತನಾಡಿ, ವಿದ್ಯಾಥಿಗಳ ಜೀವನ ಮಹತ್ವವಾದದ್ದು. ಯಾವುದೇ ಕಾರಣಕ್ಕೂ ಮಾದಕ ವಸ್ತುಗಳನ್ನು ಸೇವಿಸಬೇಡಿ. ಮಕ್ಕಳು ವಿದ್ಯೆ ಕಲಿತು ಉನ್ನತ ಹುದ್ದೆಗಳಿಗೆ ಹೋಗುವಂತೆ ಪಾಲಕರು ಅನೇಕ ಆಸೆ ಇಟ್ಟುಕೊಂಡಿರುತ್ತಾರೆ. ಅದನ್ನು ಈಡೇರಿಸುವುದು ಮಕ್ಕಳ ಕರ್ತವ್ಯ ಆಗಿದೆ. ಛಲದಿಂದ ಕಲಿತು ತಮ್ಮ ಗುರಿ ಮುಟ್ಟುವಂತಾಗಬೇಕು ಎಂದರು.
ಮೈಸೂರಿನ ಸೆರೆನಿಟಿ ಹಾಗೂ ಮ್ಯಾನೇಜಿಂಗ್ ಟ್ರಸ್ಟ್ ವಕೀಲ ಬಿ.ಎಂ.ಶಶಿಕಿರಣ್ ಮಾತನಾಡಿ, ಜೀವನದಲ್ಲಿ ಸಾಧನೆ ಮುಖ್ಯ, ಪಾಲಕರು, ಗುರು-ಹಿರಿಯರಿಗೆ ವಿದ್ಯಾರ್ಥಿಗಳು ಗೌರವ ನೀಡುವಂತಾಗಬೇಕು. ವ್ಯಸನಮುಕ್ತರಾಗಿ ಜವಾಬ್ದಾರಿಯುತ ಜೀವನ ನಡೆಸಲು ಹೆಚ್ಚಿನ ಶಿಕ್ಷಣ ಪಡೆಯುವಂತಾಗಬೇಕು. ಆಗಮಾತ್ರ ಉತ್ತಮ ಜೀವನ ನಡೆಸಲು ಸಾಧ್ಯ ಎಂದು ಹೇಳಿದರು.
ವಿರಾಜಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಎನ್.ಕೆ.ಜ್ಯೋತಿ ಅಧ್ಯಕ್ಷತೆ ವಹಿಸಿ ಮಾತನಾಡಿ ಪಾಲಕರ ಬಗ್ಗೆ ವಿದ್ಯಾರ್ಥಿಗಳು ನಂಬಿಕೆ ಇಟ್ಟುಕೊಳ್ಳಬೇಕು. ದುಷ್ಚಟಗಳನ್ನು ಬದಿಗೊತ್ತಿ ಉತ್ತಮ ನಡತೆ ಮತ್ತು ಗುಣವನ್ನು ಬೆಳೆಸಿಕೊಳ್ಳುವಂತೆ ಹೇಳಿದರು.
ರೋಟರಿ ಸಂಸ್ಥೆಯ ಕಾರ್ಯದರ್ಶಿ ಬಿ.ಬಿ.ಮಾದಪ್ಪ ಹಾಗೂ ಬೆಂಗಳೂರಿನ ವಿನಯ್ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.