ಮೈಸೂರು: ಕುವೆಂಪು ಅವರ ಜೀವನವೇ ಒಂದು ಮಹಾನ್ ಸಂದೇಶವಾಗಿತ್ತು. ಅವರು ಜಾತೀಯತೆ, ಅರ್ಥಹೀನ ಆಚರಣೆ ವಿರೋಧಿಸುತ್ತಿದ್ದರು ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಕಲಾಮಂದಿರದಲ್ಲಿ ಆಯೋಜಿಸಿದ್ದ ವಿಶ್ವಮಾನವ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹುಟ್ಟುವ ಪ್ರತಿ ಮಗುವು ವಿಶ್ವಮಾನವನೇ. ನಂತರ ಆ ಮಗುವನ್ನು ಜಾತಿ, ಮತದ ಕಟ್ಟುಪಾಡುಗಳಿಂದ ಬಂಧಿಸಲಾಗುತ್ತದೆ. ಹೀಗೆ ಆಗಬಾರದು. ಯಾವುದೇ ವ್ಯಕ್ತಿ ಜಾತಿಯಿಂದ ಮುಖ್ಯವಾಗಬಾರದು. ನೈತಿಕ ವ್ಯಕ್ತಿತ್ವದಿಂದ ಮುಖ್ಯವಾಗಬೇಕು ಎಂಬ ಪರಿಕಲ್ಪನೆ ಕುವೆಂಪು ಅವರದಾಗಿತ್ತು. ಆದ್ದರಿಂದ ಅವರ ಜಾತ್ಯತೀತ ಮನೋಭಾವದಿಂದ ಮೂಡಿಬಂದ ಆಶಯವೇ ವಿಶ್ವಮಾನವ ಸಂದೇಶವಾಗಿದೆ.
ಬುದ್ಧ, ಬಸವರ ಹಾಗೆ ಸಮಾಜದಲ್ಲಿ ವ್ಯಕ್ತಿ ಸ್ವಾತಂತ್ರೃವಾಗಿ, ವೈಚಾರಿಕ ದೃಷ್ಟಿಕೋನವನ್ನು ಬೆಳೆಸಿಕೊಳ್ಳಬೇಕೆಂಬುದು ಕುವೆಂಪು ಅವರ ಆಶಯ. ಅದುವೇ ವಿಶ್ವ ಮಾನವ ಸಂದೇಶ ಎಂದು ತಿಳಿಸಿದರು.
ಕುವೆಂಪು ಅವರ ಕೃತಿಗಳು ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಗೆ ಸ್ಫೂರ್ತಿ, ಪ್ರಭಾವವನ್ನು ಬೀರುತ್ತಲೇ ಇರುತ್ತವೆ. ಸಾಮಾಜಿಕ ಸುಧಾರಣೆ, ಪ್ರಗತಿಯ ಕುರಿತು ಅವರ ಆಲೋಚನೆ ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡುತ್ತಿದೆ. ಅವರು ಮಂತ್ರ ಮಾಂಗಲ್ಯ ಎಂಬ ಸರಳ ವಿವಾಹ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕಿದೆ ಎಂದರು.
ಶಾಸಕ ಕೆ.ಹರೀಶ್‌ಗೌಡ ಮಾತನಾಡಿ, ನಾಡಿಗೆ ವಿಶ್ವಮಾನವ ಸಂದೇಶ ಸಾರಿದ ಕನ್ನಡ ಸಾಹಿತ್ಯದ ಮೇರು ಕವಿ ಕುವೆಂಪು. ಮನುಜಮತ, ವಿಶ್ವಪಥ, ಸರ್ವೋದಯ, ಸಮನ್ವಯ ಹಾಗೂ ಪೂರ್ಣದೃಷ್ಟಿ ಎಂಬ ಪಂಚಮಂತ್ರಗಳನ್ನು ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕಿದೆ ಎಂದು ಹೇಳಿದರು.
ಕನ್ನಡದ ಶ್ರೇಷ್ಠ ಕವಿ, ಕಾದಂಬರಿಕಾರ, ನಾಟಕಕಾರ, ವಿಮರ್ಶಕ ಮತ್ತು ಚಿಂತಕರಾಗಿ ಕನ್ನಡ ಸಾಹಿತ್ಯದ ಶ್ರೀಮಂತಿಕೆಯನ್ನು ಕುವೆಂಪು ಅವರು ಹೆಚ್ಚಿಸಿದ್ದಾರೆ. 20ನೇ ಶತಮಾನ ಕಂಡ ದೈತ್ಯ ಪ್ರತಿಭೆ, ರಸಋಷಿ, ಮೇರುಕವಿ ಕುವೆಂಪು ಅವರು ಸಾಹಿತ್ಯದ ಮೂಲಕ ಸದಾ ಜೀವಂತ ಎಂದು ಅಭಿಪ್ರಾಯಪಟ್ಟರು.
ಎಂಎಲ್‌ಸಿ ಸಿ.ಎನ್.ಮಂಜೇಗೌಡ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಯ ವ್ಯಕ್ತಿತ್ವ ನಿರ್ಮಾಣದಲ್ಲಿ ಕುವೆಂಪು ಅವರ ಬರಹಗಳು ಅತ್ಯಂತ ಪ್ರಭಾವ ಬೀರುತ್ತವೆ. ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಅವರನ್ನು ಕನ್ನಡ ನಾಡು ಚಿರಕಾಲ ಸ್ಮರಿಸುತ್ತದೆ ಎಂದರು.
ಮುಖ್ಯ ಭಾಷಣಕಾರ, ನಿವೃತ್ತ ಪ್ರಾಧ್ಯಾಪಕ ಡಾ.ಎಚ್.ಎಲ್ ಮಲ್ಲೇಶಗೌಡ ಮಾತನಾಡಿ, ಸಾಹಿತ್ಯದ ಎಲ್ಲ ಮಜಲುಗಳಲ್ಲಿ ಉತ್ತುಂಗದ ಶಿಖರವೇರಿದ ಕವಿ ಕುವೆಂಪು. ದ.ರಾ.ಬೇಂದ್ರೆ ಅವರು ಕುವೆಂಪು ಅವರನ್ನು ಯುಗದ ಕವಿ ಜಗದ ಕವಿ ಎಂದು ಹಾಡಿ ಹೊಗಳಿದ್ದಾರೆ. ಇಂದಿನ ಯುವ ಪೀಳಿಗೆಯಿಂದ ಕುವೆಂಪು ಅವರನ್ನು ಓದುವ ಕೆಲಸವಾಗಬೇಕು. ಕುವೆಂಪು ಅವರ ವಿಶ್ವಮಾನವ ಸಂದೇಶ ಸಾಕಾರಗೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.
ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ಅಪರ ಜಿಲ್ಲಾಧಿಕಾರಿ ಆರ್.ಲೋಕನಾಥ್, ಪಾಲಿಕೆ ಆಡಳಿತ ವಿಭಾಗದ ಉಪ ಆಯುಕ್ತ ಜಿ.ಎಸ್. ಸೋಮಶೇಖರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೈಸೂರು ವಿಭಾಗದ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ, ಸಹಾಯಕ ನಿರ್ದೇಶಕ ಡಾ.ಎಂ.ಡಿ. ಸುದರ್ಶನ್ ಇತರರು ಇದ್ದರು.