ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರು ನಗರವನ್ನು ಯೋಗ ಹಬ್ ಆಗಿ ರೂಪಿಸಬೇಕಾಗಿದೆ. ಈ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯಬೇಕಿದೆ.
ಜೂ.21ರಂದು ವಿಶ್ವ ಯೋಗ ದಿನವನ್ನು ಭಾರತ ಸೇರಿದಂತೆ ವಿದೇಶದಲ್ಲೂ ಆಚರಣೆ ಮಾಡಲಾಗುತ್ತಿದೆ. ಯೋಗದ ಕುರಿತು ಜಾಗತಿಕವಾಗಿ ಕಣ್ತೆರೆದಿದೆ. ಆದರೆ ಸ್ಥಳೀಯವಾಗಿ ಇನ್ನೂ ಕಣ್ತೆರೆದಿಲ್ಲ. ಇದನ್ನು ಬಳಸಿಕೊಂಡು ಯೋಗ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ಪ್ರಯತ್ನಗಳು ನಡೆದಿಲ್ಲ.
ಯೋಗಾಸಕ್ತಿರಿಗೆ ಸಾಂಸ್ಕೃತಿಕ ನಗರಿ ನೆಚ್ಚಿನ ತಾಣ. ಬಿ.ಕೆ.ಎಸ್.ಅಯ್ಯಂಗಾರ್, ಪಟ್ಟಾಭಿ ಜೋಯಿಸ್ ಅವರಂತಹ ಪ್ರಸಿದ್ಧ ಯೋಗಗುರುಗಳನ್ನು ದೇಶಕ್ಕೆ ಕೊಟ್ಟಿರುವ ಯೋಗದ ತವರೂರು ಇದು. ಇಲ್ಲಿ ಯೋಗ ಕಲಿಯಲು ವಿವಿಧ ದೇಶಗಳಿಂದ ಜನರು ಬರುತ್ತಾರೆ. ಆದರೆ ಯೋಗ ಕಲೆಯನ್ನು ಮೈಸೂರಿನ ಸಂಸ್ಕೃತಿಯ ಭಾಗವಾಗಿ, ಅದನ್ನು ನಗರದ ಹೆಗ್ಗುರುತಾಗಿ ಬೆಳೆಸಲಾಗಿಲ್ಲ.
ಈ ಕಲೆಯನ್ನು ಪೋಷಿಸಿ, ಅಭಿವೃದ್ಧಿಪಡಿಸುವ ಕೆಲಸವಾಗಿಲ್ಲ. ಈ ಸಂಬಂಧ ರಾಜ್ಯ ಸರ್ಕಾರದಿಂದ ಪ್ರತ್ಯೇಕ ಸಂಸ್ಥೆಯನ್ನು ಅಸ್ತಿತ್ವಕ್ಕೆ ತಂದಿಲ್ಲ. ಹೀಗಾಗಿ, ಯೋಗದ ಕುರಿತು ನಿರ್ವಹಣಾ ವ್ಯವಸ್ಥೆ, ಮೇಲ್ವಿಚಾರಣೆ ಇಲ್ಲ. ಮೇಲಾಗಿ ತವರೂರಿನಲ್ಲೇ ಯೋಗ ಕಲೆ ಸೊರಗುತ್ತಿದ್ದು, ಅದಕ್ಕೆ ಮರುಚೈತನ್ಯ ನೀಡಬೇಕಿದೆ. ಯೋಗವನ್ನು ಬಳಸಿಕೊಂಡು ಮೈಸೂರು ನಗರ ಸಹ ಜಾಗತಿಕವಾಗಿ ಬೆಳೆಯಬೇಕಾಗಿದೆ. ಈ ನಿಟ್ಟಿನಲ್ಲಿ ವಿವಿಧ ಉಪಕ್ರಮಗಳನ್ನು ಸರ್ಕಾರ, ಜಿಲ್ಲಾಡಳಿತ ಕೈಗೊಳ್ಳಬೇಕಿದೆ. ಈ ವಿಷಯವಾಗಿ ಸಾರ್ವಜನಿಕರಿಂದ ಸಂಗ್ರಹಿಸಿರುವ ಜನಾಭಿಪ್ರಾಯ ಇಲ್ಲಿದೆ.
ನಮ್ಮ ಸಂಸ್ಥೆಯಿಂದ ಎಲ್ಲ ವರ್ಗದವರಿಗೂ ಉಚಿತ ಯೋಗ ಕಲಿಸಲಾಗುತ್ತಿದೆ. ಶೈಕ್ಷಣಿಕ ಕೋರ್ಸ್ ಆಗಿ 4 ವರ್ಷ ಡಿಪ್ಲೊಮಾ ಕೋರ್ಸ್ ನಡೆಸಲಾಗುತ್ತಿದೆ. ಇದು ಯೋಗ ಉದ್ಯೋಗಾವಕಾಶಕ್ಕೆ ಮತ್ತು ವಿದೇಶದಲ್ಲಿ ಯೋಗ ತರಬೇತಿ ಶಿಕ್ಷಕರಾಗಿ ಕಾರ್ಯನಿರ್ವಹಿಸಲು ಅನುಕೂಲವಾಗಿದೆ. ಅಂತೆಯೇ, ಒತ್ತಡ ಕಡಿಮೆ ಮಾಡಲು ಪ್ರೌಢಶಾಲಾ ಹಂತದಲ್ಲಿ ಯೋಗವನ್ನು ಒಂದು ವಿಷಯವಾಗಿ ಕಲಿಸಬೇಕು. ಅದಕ್ಕಾಗಿ ಪ್ರತ್ಯೇಕ ಯೋಗ ಶಿಕ್ಷಕರನ್ನು ನೇಮಕ ಮಾಡಬೇಕು. ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ವಹಿಸಬೇಕು.
ಎನ್.ಎಸ್.ಸತ್ಯನಾರಾಯಣ, ಗೌರವ ಪ್ರಾಂಶುಪಾಲ, ಶ್ರೀ ಪತಂಜಲಿ ಯೋಗ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ
ಆಯುಷ್ ಇಲಾಖೆಯಿಂದ ಎಲ್ಲ ವರ್ಗದ ಜನರಿಗೆ ಯೋಗ ತಲುಪಿಸುವ ಕೆಲಸ ನಡೆದಿದೆ. ಶಾಲೆ, ಹಾಸ್ಟೆಲ್, ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಸೇರಿದಂತೆ ವಿದ್ಯಾರ್ಥಿಗಳಿಗೆ ಬುನಾದಿ ಯೋಗ ತರಬೇತಿ ನೀಡಿ ಅರಿವು ಮೂಡಿಸಲಾಗುತ್ತಿದೆ. ಯೋಗ ಉತ್ಸವ, ಯೋಗ ದಿನ ಆಚರಿಸಲಾಗುತ್ತಿದೆ. ಯೋಗ ಚಟುವಟಿಕೆಗಳಿಗೂ ಉತ್ತೇಜನ ನೀಡಲಾಗುತ್ತಿದೆ.
ಡಾ.ಪುಷ್ಪಾ, ಉಪನಿರ್ದೇಶಕಿ, ಆಯುಷ್ ಇಲಾಖೆ
ಯೋಗ ಶಿಕ್ಷಕರ ಕೊರತೆ ಇದೆ. ಇದನ್ನು ನೀಗಿಸಲು ಸರ್ಕಾರದ ವತಿಯಿಂದಲೇ ಯೋಗ ತರಬೇತಿ ಶಾಲೆಯನ್ನು ಮೈಸೂರಿನಲ್ಲಿ ತೆರೆಯಬೇಕು. ಖಾಲಿ ಬಿದ್ದಿರುವ ಸರ್ಕಾರಿ ಕಟ್ಟಡ, ಭವನಗಳನ್ನು ಯೋಗ ಕಲಿಕೆಗೆ ಸದ್ಬಳಕೆ ಮಾಡಿಕೊಳ್ಳಬೇಕು. ಇದರಿಂದ ದುಬಾರಿ ಶುಲ್ಕ ಪಾವತಿ ಮಾಡಿ ಯೋಗ ಕಲಿಯುವುದು ತಪ್ಪಲಿದೆ. ಆರ್ಥಿಕ ಹೊರೆ ಕಡಿಮೆಯಾಗಿ ಸಾರ್ವಜನಿಕರು ಸಹ ಯೋಗದತ್ತ ಮುಖ ಮಾಡಲಿದ್ದಾರೆ. 3 ತಿಂಗಳಿಗೊಮ್ಮೆ ಜಾಹೀರಾತು ನೀಡಿ ಯೋಗದಿಂದ ಆಗುವ ಆರೋಗ್ಯದ ಲಾಭಗಳ ಕುರಿತು ಅರಿವು ಮೂಡಿಸಬೇಕು. ಇದರಿಂದ ಯೋಗ ಬೆಳೆಯುತ್ತದೆ. ಜನರು ಸಹ ಇದನ್ನು ನಿತ್ಯ ಅಭ್ಯಾಸ ಮಾಡಲು ಮುಂದಾಗುತ್ತಾರೆ.
ಎಚ್.ಹರೀಶ್, ಯೋಗ ಶಿಕ್ಷಕ
ಯೋಗ ವಿಷಯವಾಗಿ ಮೈಸೂರು ನಗರವನ್ನು ಕೇಂದ್ರೀಕರಿಸಿ ರಾಷ್ಟ್ರಮಟ್ಟದಲ್ಲಿ ಗುರುತಿಸುವಂತಹ ಕೆಲಸವಾಗಬೇಕು. ಅದಕ್ಕಾಗಿ ರಾಜ್ಯ ಸರ್ಕಾರ ವತಿಯಿಂದ ವಿಶೇಷ ಕಾರ್ಯಕ್ರಮ ಕೈಗೊಳ್ಳಬೇಕು. ಅದಕ್ಕಾಗಿ ಅನುದಾನ, ಮೂಲಸೌಕರ್ಯ ಒದಗಿಸಬೇಕು. ಕಾಲೇಜು, ವಿಶ್ವವಿದ್ಯಾಲಯ ಹಂತದಲ್ಲಿ ಯೋಗ ಅಧ್ಯಯನ ಕೋರ್ಸ್ ಕಲಿಕೆಗೆ ಅವಕಾಶ ಕಲ್ಪಿಸಿಕೊಡಬೇಕು. ಇದರಿಂದ ಮೈಸೂರು ಯೋಗ ಹಬ್ ಆಗಿ ರೂಪಗೊಳ್ಳಲು ನೆರವಾಗಲಿದೆ
ಬಿ.ಎಲ್.ಮನೋಜ್‌ಕುಮಾರ್, ಯೋಗಪಟು
ಯೋಗ ಹೆಸರಿನಲ್ಲಿ ಹಣ ಸುಲಿಗೆ ಮಾಡಲಾಗುತ್ತಿದೆ. ಸ್ಥಳೀಯರೊಂದಿಗೆ ವಿದೇಶಿಯರಿಂದ ಹೆಚ್ಚಿನ ಹಣ ವಸೂಲಿ ಮಾಡಲಾಗುತ್ತಿದೆ. ತರಬೇತಿಗೆ ತಕ್ಕಂತೆ ನಿರ್ದಿಷ್ಟ ಪ್ರಮಾಣದಲ್ಲಿ ಶುಲ್ಕ ನಿಗದಿಪಡಿಸಬೇಕು. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಕ್ರಮ ತೆಗೆದುಕೊಂಡು ಏಕರೂಪದ ಶುಲ್ಕ ನಿಗದಿ ಮಾಡಿದರೆ ಬಹಳಷ್ಟು ಅನುಕೂಲವಾಗುತ್ತದೆ. ಕೆಲವು ಸಂಘಟನೆಗಳು ಉಚಿತವಾಗಿ ಯೋಗವನ್ನು ಹೇಳಿಕೊಡುತ್ತಿವೆ. ಇದರಿಂದ ಬಹಳಷ್ಟು ಜನರು ಯೋಗದತ್ತ ಆಕರ್ಷಿತರಾಗುತ್ತಿದ್ದಾರೆ. ಇಂತಹ ಪ್ರಯತ್ನಗಳು ಹೆಚ್ಚು ನಡೆಯಲಿ.
ಗಿರೀಶ್, ಸಾರ್ವಜನಿಕರು
ಖಾಸಗಿ ಶಾಲೆಗಳಲ್ಲಿ ಯೋಗ ಕುರಿತು ತಿಳವಳಿಕೆ ನೀಡಲಾಗುತ್ತದೆ. ಆದರೆ ಸಾರ್ವಜನಿಕರಿಗೆ ಸೂಕ್ತ ಮಾಹಿತಿ ಸಿಗುತ್ತಿಲ್ಲ. ಸಮುದಾಯ ಭವನ, ದೇವಸ್ಥಾನ ಇನ್ನಿತರ ಕಡೆ ಉಚಿತವಾಗಿ ತರಬೇತಿ ನೀಡಿ ಯೋಗದ ಕಡೆಗೆ ಜನರನ್ನು ಆಕರ್ಷಿಸಬೇಕು. ಜತೆಗೆ, ತಿಂಗಳಿಗೆ, ವಾರಕ್ಕೊಮ್ಮೆ ಯೋಗ ಪ್ರದರ್ಶನವನ್ನು ಆಯೋಜಿಸಬೇಕು.
ಎಂ.ಅನಿಲ್‌ಕುಮಾರ್, ಯೋಗಾಸಕ್ತರು
ದೇಶ-ವಿದೇಶಿಯರನ್ನು ಸೆಳೆಯಲು ಯೋಗದ ಸ್ಮಾರಕವನ್ನು ಮೈಸೂರಿನಲ್ಲಿ ನಿರ್ಮಿಸಬೇಕು. ಇದು ಯೋಗದ ರಾಯಭಾರಿಯಾಗಿ ಕೆಲಸ ಮಾಡಬೇಕು. ಅದು ಯೋಗದ ಕುರಿತು ಅರಿವು, ಪರಿಚಯವನ್ನೂ ಮಾಡಿಕೊಡುವಂತಿರಬೇಕು. ಜತೆಗೆ, ಸಮುದಾಯ ಭವನ ನಿರ್ಮಿಸಿ, ಅಲ್ಲಿಯ ನಿರಂತರವಾಗಿ ಯೋಗದ ಕುರಿತು ವಿಚಾರ ಮಂಥನಕ್ಕೆ ವ್ಯವಸ್ಥೆ ಮಾಡಬೇಕು.
ಆರ್.ಜೆ.ಲಿಖಿತ್ ರಾಮ್, ಮೈವಿವಿ ಇಂಜಿನಿಯರ್ ಕಾಲೇಜಿನ ವಿದ್ಯಾರ್ಥಿ.
ಸರ್ಕಾರದ ವತಿಯಿಂದ ಯೋಗ ಶಾಲೆಯನ್ನು ಪ್ರಾರಂಭಿಸಬೇಕು. ಅಲ್ಲಿ ಕಲಿಕೆ, ತರಬೇತಿಗೆ ಅವಕಾಶ ಕಲ್ಪಿಸಿಕೊಡಬೇಕು. ಯೋಗ ಅಭ್ಯಾಸದಿಂದ ಆರೋಗ್ಯದಲ್ಲಿ ಉಂಟಾದ ಸಕರಾತ್ಮಕ ಬೆಳವಣಿಗೆ, ಅನುಕೂಲಕತೆ ಕುರಿತು ಸಂಶೋಧನೆ ನಡೆಸಿ ಜನರಿಗೆ ತಿಳಿಸುವ ಕೆಲಸ ಮಾಡಿಕೊಡಬೇಕು. ಈ ರೀತಿ ವೈಜ್ಞಾನಿಕ ತಳಹದಿಯನ್ನು ಹಾಕಿಕೊಡುವ ಮೂಲಕ ಯೋಗದ ಕುರಿತು ಸಾರ್ವಜನಿಕ ವಲಯದಲ್ಲಿ ಇನ್ನಷ್ಟು ವಿಶ್ವಾಸ ಮೂಡಿಸಬೇಕು.
ಎಸ್.ಜೆ.ರಂಜಿತ್, ಯೋಗಪಟು