ಜಿಲ್ಲೆ

ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡಲಿ: ವಿಧಾನಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಆಗ್ರಹ

ಮೈಸೂರು: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡಬೇಕಿದೆ ಎಂದು ವಿಧಾನಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಸರ್ಕಾರವನ್ನು ಒತ್ತಾಯಿಸಿದರು.
ಮೈಸೂರು ತಾಲೂಕು ಲಲಿತಾದ್ರಿಪುರದಲ್ಲಿ ಸರ್ಕಾರಿ ಪ್ರೌಢ ಶಾಲೆ ಕಟ್ಟಡದ ಉದ್ಘಾಟನೆ ಹಾಗೂ 9ನೇ ತರಗತಿ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಲಲಿತಾದ್ರಿಪುರದಲ್ಲಿ ಸುಮಾರು 4 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ಇಲ್ಲಿನ ಮಕ್ಕಳು ಪ್ರೌಢಶಾಲೆಗೆ ಬೇರೆ ಕಡೆಗೆ ಹೋಗಬೇಕಾಗಿತ್ತು. ನಾನು ಶಾಸಕನಾಗಿದ್ದಾಗ ಬಿಜೆಪಿ ಸರ್ಕಾರಕ್ಕೆ ಪ್ರೌಢಶಾಲೆ ಮಂಜೂರು ಮಾಡಬೇಕೆಂದು ಮನವಿಮಾಡಿದ್ದರೂ ಆಗಲಿಲ್ಲ. ಈಗ ನಮ್ಮದೇ ಸರ್ಕಾರವಿದ್ದು ಸಿದ್ದರಾಮಯ್ಯ ಪ್ರೌಢಶಾಲೆ ಮಂಜೂರು ಮಾಡಿದ್ದಾರೆ ಎಂದರು.
9ನೇ ತರಗತಿಗೆ 27 ಮಕ್ಕಳು ದಾಖಲಾಗಿದ್ದಾರೆ 14 ಲಕ್ಷ ರೂ. ವೆಚ್ಚಮಾಡಿ ಈ ಕಟ್ಟಡವನ್ನು ನಿರ್ಮಿಸಲಾಗಿದೆ. ವರುಣಾ ಕ್ಷೇತ್ರದ ಶಾಲೆಗಳ ಅಭಿವೃದ್ಧಿಗೆ 30 ಕೋಟಿ ರೂ. ನೀಡಿದ್ದರು. ಅದನ್ನೆಲ್ಲಾ ಶಾಲೆಗಳ ರಿಪೇರಿ, ಹೊಸಕಟ್ಟಡ ನಿರ್ಮಾಣಕ್ಕೆ ಖರ್ಚು ಮಾಡಲಾಗಿದೆ. ಯಾವುದೇ ದೇಶ ಅಭಿವೃದ್ಧಿ ಹೊಂದಬೇಕಾದರೆ ಶಿಕ್ಷಣದಿಂದ ಮಾತ್ರ ಸಾಧ್ಯವಾಗಿದ್ದು, ಇಂದು ಭಾರತದಲ್ಲಿ ಶಿಕ್ಷಣ ಪಡೆದ ಮಕ್ಕಳು ಪ್ರಪಂಚದದ್ಯಾಂತ ಕೆಲಸ ಮಾಡುತ್ತಿದಾರೆ. ಆದ್ದರಿಂದ ಯಾವುದೇ ಮಗು ಶಿಕ್ಷಣದಿಂದ ವಂಚಿತರಾಗದಂತೆ ಶಿಕ್ಷಕರು ಗ್ರಾಮಸ್ಥರು ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಡಿಡಿಪಿಐ. ಜವರೇಗೌಡ, ಬಿಇಒ ವಿವೇಕಾಂದ, ಎಸ್‌ಡಿಎಂಸಿ ಅಧ್ಯಕ್ಷ ನಾಗೇಂದ್ರ, ಮುಖ್ಯ ಶಿಕ್ಷಕಿ ಕಮಲಾಕ್ಷಿ, ಶಿಕ್ಷಕಿ ಪವಿತ್ರ, ಮುಖ್ಯಮಂತ್ರಿಗಳ ವಿಶೇಷ ಅಧಿಕಾರಿ ಕೆ.ಎನ್. ವಿಜಯ್, ಎಪಿಎಂಸಿ ಮಾಜಿ ಅಧ್ಯಕ್ಷ ಬಂಡಿಪಾಳ್ಯ ಬಸವರಾಜು, ತಾ,ಪಂ. ಮಾಜಿ ಸದಸ್ಯರಾದ ಮಂಜುಳಾ ಮಂಜುನಾಥ್, ಎಂ.ಟಿ ರವಿಕುಮಾರ್, ಮುಖಂಡರಾದ ಸಕಳ್ಳಿ ಬಸವರಾಜು, ರಮೇಶ್ ಮುದ್ದೇಗೌಡ, ಜಿ.ಕೆ. ಬಸವಣ್ಣ, ಸಿದ್ದಯ್ಯ, ಶಾಂತಮ್ಮ, ದಕ್ಷಿಣಾಮೂರ್ತಿ ಇತರರು ಇದ್ದರು.