ಕುಳಗೇರಿ ಕ್ರಾಸ್: ರೈತ ಅದ್ಭುತ ವ್ಯಕ್ತಿ. ತನ್ನ ಮೈ ಮಣ್ಣು ಮಾಡಿಕೊಂಡು ಹಗಲಿರುಳು ದುಡಿದು ಜಗತ್ತನ್ನೇ ಸಾಕಿ ಸಲುಹುತ್ತಾನೆ ಎಂದು ಗವಿಮಠದ ಬಸವಲಿಂಗ ಸ್ವಾಮೀಜಿ ಹೇಳಿದರು.
ಗೋವನಕೊಪ್ಪ ಗ್ರಾಮದ ಬ್ರಹ್ಮಾನಂದ ಪರಮಹಂಸರ 87ನೇ ಜಾತ್ರಾ ಮಹೋತ್ಸವದಂಗವಾಗಿ ನಡೆದ ಜೀವನ ದರ್ಶನ ಪ್ರವಚನದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಮನೆ ಚಿಕ್ಕದಿದ್ದರೂ ಪರವಾಗಿಲ್ಲ, ಮನುಷ್ಯನ ಮನಸ್ಸು ದೊಡ್ಡದಾಗಿರಬೇಕು. ಬದುಕಲು ಅನ್ನ ಬೇಕೆ ಪರಂತು ಐಶ್ವರ್ಯ ಅಲ್ಲ. ಅನ್ನದ ಬೆಲೆ ಅರಿತವನೇ ಶ್ರೀಮಂತ. ಅನ್ನದಾನದ ಮಹತ್ವ ಹಾಗೂ ಉಪಯೋಗ ಅರಿತುಕೊಳ್ಳಬೇಕು. ಭಕ್ತರಿಗೆ ನಿತ್ಯ ಅಧ್ಯಾತ್ಮದ ಜತೆಗೆ ಅನ್ನದಾಸೋಹ ಮಾಡುವ ಗೋವನಕೊಪ್ಪ ಗ್ರಾಮದ ಭಕ್ತರ ಕಾರ್ಯ ಶ್ಲಾಘನೀಯ ಎಂದರು.
ಭೈರನಹಟ್ಟಿ ಶಾಂತಲಿಂಗ ಸ್ವಾಮೀಜಿ, ಪ್ರವಚನಕಾರ ಎಸ್. ಉಮಾಪತಿ ಶಾಸೀ, ಎಸ್. ಅಕ್ಕಮಹಾದೇವಿ, ತಬಲಾ ಚತುರ ಬಿ. ಚಂದ್ರು, ಕಮಿಟಿ ಅಧ್ಯಕ್ಷ ಕಿಷ್ಟಣ್ಣ ಬಿಜಾಪೂರ, ನಿಂಗನಗೌಡ ಪಾಟೀಲ, ಆರ್.ಎಚ್. ಯಾವಗಲ್, ಮರಳೀಧರ ಯಡನ್ನವರ, ದಾವಲಸಾಬ ಹೊಸಮನಿ, ಮುದಕಣ್ಣ ಹೆರಕಲ್, ಪ್ರವೀಣ ಮೇಟಿ, ಹನುಮಂತಪ್ಪ ದಳಪತಿ ಇತರರಿದ್ದರು.
ಶಿಕ್ಷಕ ಶರಣು ಕರಕಿಕಟ್ಟಿ ಸ್ವಾಗತಿಸಿದರು. ಶಿಕ್ಷಕ ರಾಘವೇಂದ್ರ ಕಂದಗಲ್ ನಿರೂಪಿಸಿದರು. ಶಿಕ್ಷಕ ಮಂಜು ದ್ಯಾವನ್ನವರ ವಂದಿಸಿದರು.