ಮೈಸೂರು: ಸಾಹಿತ್ಯ ನೊಂದವರನ್ನು ಸಂತೈಸುವ ಔಷಧದಂತೆ ಕೆಲಸ ಮಾಡಬೇಕು ಎಂದು ಸಾಹಿತಿ ಡಾ.ಕೆ.ಷರೀಫಾ ಹೇಳಿದರು.
ಸ್ವಜನ್ಯ ಕಲಾ ವೇದಿಕೆ ವತಿಯಿಂದ ಬೋಗಾದಿಯ ಧ್ವನ್ಯಾಲೋಕದಲ್ಲಿ ಆಯೋಜಿಸಿದ್ದ ಗಿರಿಜಾಶಾಸ್ತ್ರಿ ಅವರ ‘ಸಿದ್ಧಮಾದರಿಗಳಾಚೆಗೆ’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಾಹಿತ್ಯ ಇದೀಗ ಮನರಂಜನಾ ವಸ್ತುವಾಗುವ ಅಪಾಯಕ್ಕೆ ಸಿಲುಕಿಕೊಂಡಿದೆ. ಇಂತಹ ಸಂದಿಗ್ಧದಲ್ಲಿ ಸತ್ಯ ಹೇಳುವ ಧೈರ್ಯ ಪ್ರವೃತ್ತಿ ಕಡಿಮೆಯಾಗಿದೆ. ಕೋಮುವಾದ, ಮೂಲಭೂತವಾದ ವಿಜೃಂಭಿಸುತ್ತಿವೆ. ಇಂತಹ ಸಂದರ್ಭದಲ್ಲಿ ನೊಂದವರನ್ನು ಸಂತೈಸುವ, ಸಾಮಾಜಿಕ ಆರೋಗ್ಯ ಕಾಯ್ದುಕೊಳ್ಳುವ ಕೆಲಸವನ್ನು ಸಾಹಿತ್ಯ ಮಾಡಬೇಕಿದೆ ಎಂದರು.
ಬಂಡಾಯ ಸಾಹಿತ್ಯ ಕಾಲಘಟ್ಟದಲ್ಲಿ ಶತ್ರು ಎದುರಿಗೆ ಕಾಣುತ್ತಿದ್ದರು. ನೇರವಾಗಿ ಆತನೊಂದಿಗೆ ಸೆಣಸಾಟ ಮಾಡುತ್ತಿದ್ದೆವು. ಆದರೀಗ ಜಾಗತೀಕರಣದಲ್ಲಿ ಶತ್ರು ಕಾಣುತ್ತಿಲ್ಲ. ರಾಜಕೀಯ ಆಟದ ಮಧ್ಯೆ ಅಡಗಿ ಕುಳಿತುಕೊಂಡಿದ್ದಾನೆ. ಈ ಅಗೋಚರ ಶತ್ರುಗಳೆಲ್ಲ ಒಂದಾಗಿದ್ದಾರೆ. ಯಾರೊಂದಿಗೆ ಹೋರಾಟ ಮಾಡಬೇಕೆಂಬುದೇ ಗೊತ್ತಾಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಸಾಹಿತ್ಯ ಚರಿತ್ರೆಯಲ್ಲಿ ಲೇಖಕಿಯರು ನಿರ್ಲಕ್ಷೃಕ್ಕೆ ಒಳಪಟ್ಟಿದ್ದಾರೆ. ಕವಯಿತ್ರಿ ವಿಜಯದಬ್ಬೆ ಮಹಿಳಾ ಸಾಹಿತ್ಯ ಚರಿತ್ರೆ ರಚಿಸುವ ಪ್ರಯತ್ನ ಮಾಡಿದ್ದರು. ಇವರ ದಾರಿಯಲ್ಲೇ ಲೇಖಕಿ ಗಿರಿಜಾಶಾಸ್ತ್ರಿ ಸಾಗುತ್ತಿದ್ದಾರೆ. ಮುಂಬೈನಲ್ಲಿದ್ದು ಕನ್ನಡದ ನಂಟು ಬೆಸೆದ ಗಿರಿಜಾಶಾಸ್ತ್ರಿ ಪಾರಂಪರಿಕ ದಾರಿ ಬಿಟ್ಟು ತಮ್ಮದೇ ಹೊಸ ದಾರಿಯಲ್ಲಿ ನಡೆಯುವ ಧೈರ್ಯ ಪ್ರದರ್ಶಿಸಿದ್ದಾರೆ. ಇದು ಈಗಿನ ಸಾಹಿತ್ಯಕ್ಕೆ ಹೊಸ ತಿರುವು ನೀಡಬಹುದು. ವೈಚಾರಿಕ ಸ್ಪಷ್ಟತೆ, ಮೊನಚು, ಆರ್ದ್ರವಾದ ಹೃದಯ ಶ್ರೀಮಂತಿಕೆ ಇವರ ಬರಹದಲ್ಲಿ ಎದ್ದುಕಾಣುತ್ತದೆ ಎಂದರು.
ಗಿರಿಜಾಶಾಸ್ತ್ರಿ ಅವರ ಬರಹಗಳು ಪಾರಂಪರಿಕವಾಗಿ ರೂಪುಗೊಂಡ ಸ್ಥಾಪಿತ ಮೌಲ್ಯ ಧಿಕ್ಕರಿಸುತ್ತವೆ. ಇವರ ಬರಹಗಳು ಯುವಜನರಿಗೆ ಅಗತ್ಯವಾಗಿವೆ. ಆದ್ದರಿಂದ ಯುವ ಮನಸ್ಸಗಳು ಇವರ ಕೃತಿಗಳನ್ನು ಓದಬೇಕು ಎಂದರು.
ನಿವೃತ್ತ ಕನ್ನಡ ಪ್ರಾಧ್ಯಾಪಕ ಎ.ವಿ.ನಾರಾಯಣಸ್ವಾಮಿ ಮಾತನಾಡಿ, ಜನರು ಜಾತಿ, ಧರ್ಮ, ಕುಲ-ಗೋತ್ರವನ್ನು ಬದಿಗಿಟ್ಟು ಪರಸ್ಪರ ಪ್ರೀತಿ, ವಿಶ್ವಾಸ ಮತ್ತು ಸೌಹಾರ್ದತೆಯಿಂದ ಬಾಳಬೇಕಿದೆ. ಇದುವೇ ಮನುಷ್ಯ ಗುಣ ಎಂದರು.
ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಆನಂದಪುರದಲ್ಲಿ ಮೊಹರಂ ಹಬ್ಬವನ್ನು ಹಿಂದುಗಳು ಆಚರಿಸುತ್ತಾರೆ. ಉತ್ತರ ಭಾರತದ ಹಳ್ಳಿಯೊಂದರ ಮಸೀದಿಯಲ್ಲಿ ನಮಾಜ್ ಮಾಡುವ ಸಂದರ್ಭದಲ್ಲಿ ಹಿಂದುಗಳು ಆಝಾನ್ ಕೂಗುತ್ತಾರೆ. ಹಿಂದುಗಳು ಸಾಮೂಹಿಕ ಪ್ರಾರ್ಥನೆಯನ್ನೂ ಮಾಡುತ್ತಾರೆ. ಕರೊನಾ ಕಾಲದಲ್ಲಿ ಮುಸ್ಲಿಂ ಯುವಕರು ಹಿಂದು ವ್ಯಕ್ತಿಯ ಉತ್ತರಕ್ರಿಯಾದಿ ನಡೆಸಿದರು. ಇದು ಸೌಹಾರ್ದತೆ ಪ್ರತೀಕ. ಇದನ್ನು ನೋಡಿ ಕಲಿಯುವುದು ಬಹಳಷ್ಟು ಇದೆ ಎಂದರು.
ಸಾಹಿತಿ ಡಾ.ಕಾಳೇಗೌಡ ನಾಗವಾರ, ಲೇಖಕಿ ಗಿರಿಜಾಶಾಸ್ತ್ರಿ, ಪ್ರಕಾಶಕ ಯು.ಎಸ್.ಮಹೇಶ್, ವೇದಿಕೆಯ ಅಧ್ಯಕ್ಷ ಎಸ್.ಶಿಶಿರಂಜನ್ ಇದ್ದರು.