ಜಿಲ್ಲೆ

ಯುಪಿಎಸ್ಸಿ ರೀತಿ ಕೆಪಿಎಸ್ಸಿ ನಡೆಯಲಿ

ತುಮಕೂರು ಡೆಸ್ಕ್

ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷ ಮುರಳೀಧರ ಹಾಲಪ್ಪ ಅಭಿಪ್ರಾಯ | ಆತ್ಮವಿಶ್ವಾಸ್​ ಕಾರ್ಯಕ್ರಮ

ವಿಜಯವಾಣಿ ಸುದ್ದಿಜಾಲ ತುಮಕೂರು
ಕರ್ನಾಟಕ ಲೋಕಸೇವಾ ಆಯೋಗ ಮತ್ತು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಗೊಂದಲಗಳಿಂದ ಇತ್ತೀಚೆಗೆ ನಡೆದ ಕೆಪಿಎಸ್​ಸಿ ಪರೀಕ್ಷೆಯಲ್ಲಿ ಆಗಿರುವ ಎಡವಟ್ಟು ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಯುವಜನರ ಆತ್ಮಸ್ಥೈರ್ಯ ಕುಸಿಯುವಂತೆ ಮಾಡಿದೆ ಎಂದು ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷ ಮುರಳೀಧರ ಹಾಲಪ್ಪ ಅಭಿಪ್ರಾಯಪಟ್ಟರು. ನಗರದ ಕೇಂದ್ರ ಗ್ರಂಥಾಲಯ ಸಭಾಂಗಣದಲ್ಲಿ ತುಮಕೂರು ವಿವಿ ಸಹಯೋಗದಲ್ಲಿ ಹಾಲಪ್ಪ ಪ್ರತಿಷ್ಠಾನ ಹಮ್ಮಿಕೊಂಡಿದ್ದ ಆತ್ಮವಿಶ್ವಾಸ್​ ಕಾರ್ಯಕ್ರಮದಲ್ಲಿ ಮಾತನಾಡಿ, ಪರೀಕ್ಷಾರ್ಥಿಗಳಲ್ಲಿ ಆತ್ಮಸ್ಥೆ$ರ್ಯ ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದರು.


ಯುಪಿಎಸ್ಸಿ ಪರೀಕ್ಷೆಯ ರೀತಿಯೇ ಕೆಪಿಎಸ್ಸಿ ಪರೀಕ್ಷೆಯೂ ನಡೆಯಬೇಕು. ಇದುವರೆಗೂ ವೇಳಾಪಟ್ಟಿ ಪ್ರಕಟಣೆ, ಪರೀಕ್ಷೆಗಳನ್ನು ನಡೆಸುವ ರೀತಿ ಸೇರಿದಂತೆ ಎಲ್ಲ ರೀತಿಯಲ್ಲಿಯೂ ಅನೇಕ ಬದಲಾವಣೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳುವ ಆಕಾಂಕ್ಷಿಗಳು ಬಯಸಿದ್ದಾರೆ ಎಂದರು. ಕೇಂದ್ರ ಸರ್ಕಾರ ನಡೆಸುವ ರೈಲ್ವೆ, ಐಪಿಪಿಎಸ್​, ಎಸ್​ಎಸ್​ಸಿ, ನ್ಯಾಷನಲ್​ ಡಿಫೇನ್ಸ್​ ಅಕಾಡೆಮಿ ಪರೀಕ್ಷೆಗಳಲ್ಲಿ ದಕ್ಷಿಣ ಭಾರತದ ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ಬರೆಯಲು ಅವಕಾಶವಿಲ್ಲದ ಕಾರಣ, ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ. ಕೇಂದ್ರ ಸರ್ಕಾರದ ಪರೀಕ್ಷೆಗಳಲ್ಲಿಯೂ ಮಾತೃಭಾಷೆಯಲ್ಲಿ ಪ್ರಶ್ನೆ ಪತ್ರಿಕೆ ಮತ್ತು ಉತ್ತರ ಬರೆಯಲು ಅವಕಾಶ ಸಿಗಬೇಕು ಎಂಬುದು ಬಹುತೇಕ ಅಭ್ಯರ್ಥಿಗಳ ಬಯಕೆಯಾಗಿದೆ ಎಂದರು.

ತುಮಕೂರು ಜಿಲ್ಲೆಯಿಂದ ಯುಪಿಎಸ್ಸಿಯ ಪ್ರಥಮ ಹಂತದ ಪರೀಕ್ಷೆ ಪಾಸು ಮಾಡಿ, ಮುಖ್ಯ ಪರೀಕ್ಷೆಗೆ ತಯಾರಿ ನಡೆಸುವ ಅಭ್ಯರ್ಥಿಗಳಿಗೆ ತುಮಕೂರು ಜಿಲ್ಲೆಯ ಸಮಾನ ಮನಸ್ಕ ಗೆಳೆಯರು ಸೇರಿ ದೆಹಲಿಯ ಐಎಎಸ್​ ತರಬೇತಿ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು, ಜಿಲ್ಲೆಯ 12 ಜನ ಅಭ್ಯರ್ಥಿಗಳಿಗೆ ಊಟ ತಿಂಡಿಯ ಜತೆಗೆ, ಉಳಿದುಕೊಳ್ಳಲು ಅವಕಾಶ ಕಲ್ಪಿಸಲಾಗುತ್ತದೆ ಎಂದರು. ನವೋದಯ ಐಎಎಸ್​ ಅಕಾಡೆಮಿಯ ಗೌರವಾಧ್ಯಕ್ಷ ನಾಗರಾಜರಾವ್​ ಮಾತನಾಡಿ, ಕಳೆದ ಮೂವತ್ತು ವರ್ಷಗಳಿಗೆ ಹೋಲಿಸಿದರೆ ಐಎಎಸ್​, ಕೆಎಎಸ್​ ಪರೀಕ್ಷೆಗಳಿಗೆ ಇತ್ತೀಚಿನ ದಿನಗಳಲ್ಲಿ ಪೈಪೋಟಿ ಹೆಚ್ಚಿದೆ. ಇಂಜಿನಿಯರಿಂಗ್​, ಮೆಡಿಕಲ್​, ಐಐಟಿ ಕಲಿತವರು ಸಹ ಸಿವಿಲ್​ ಸರ್ವಿಸ್​ ಏಕ್ಸಾಂ ತೆಗೆದುಕೊಳ್ಳುತ್ತಿರುವ ಕಾರಣ, ಕಲೆ, ಸಾಹಿತ್ಯ, ವಿಜ್ಞಾನ ಓದಿದ ಮಕ್ಕಳು ಹೆಚ್ಚು ಸ್ಪರ್ಧೆಯನ್ನು ಎದುರಿಸಬೇಕಾಗಿದೆ ಎಂದರು.


ವೇದಿಕೆಯಲ್ಲಿ ಕೃಷ್ಣ ಎಜುಕೇಷನ್​ ಟ್ರಸ್ಟ್​ ಅಧ್ಯೆ ಮರಿಚನ್ನಮ್ಮ, ಕಾಂಗ್ರೆಸ್​ ಮುಖಂಡ ರೇವಣ್ಣಸಿದ್ದಯ್ಯ, ಪ್ರಗತಿಪರ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎಂ.ವಿ.ಬಸವರಾಜು, ಗ್ರಾಹಕರ ವೇದಿಕೆಯ ಟಿ.ಎಸ್​.ನಿರಂಜನ್​, ದೀಪ್ತಿ ರಾಜೇಶ್​, ಸಿದ್ಧಗಂಗಾ ಐಎಎಸ್​ ಅಕಾಡೆಮಿ, ತ್ರಿವೇಣಿ ಪೃಥ್ವಿ ಐಎಎಸ್​ ಅಕಾಡೆಮಿ, ವಿಭೂಷಣ್​, ಬಿ.ಬೈಹರ್ಟ್​ ಕ್ಲಾಸಸ್​ ಮತ್ತಿತರರು ಇದ್ದರು.

ಲೋಕಜ್ಞಾನ ಇರಲಿ
ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹೆಚ್ಚು ಪರಿಶ್ರಮದ ಜತೆಗೆ ಸ್ವಲ್ಪ ಲೋಕಜ್ಞಾನ ಬಳಕೆ ಮಾಡಿದರೂ ಪರೀಕ್ಷೆಯಲ್ಲಿ ಯಶಸ್ಸು ಗಳಿಸಬಹುದು. ವಿಭಿನ್ನ ಆಲೋಚನೆ, ದೇಶದ ಆಗು, ಹೋಗುಗಳ ಬಗ್ಗೆ ಅರಿವು ಇದ್ದರೆ ಯುಪಿಎಸ್ಸಿ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬಹುದು. ಕೀಳಿರಿಮೆ ಬಿಟ್ಟು ಮುನ್ನುಗ್ಗುವ ಅಭ್ಯಾಸ ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಸ್ಕಡರ್ನಾ ಲೀಡರ್​ ಭಾಸ್ಕರ್​ ಮಾತನಾಡಿ, ಡಿಫೆನ್ಸ್​ ಅಂದರೆ ಯುದ್ಧಭೂಮಿ ಎಂದು ತಪ್ಪು ತಿಳಿಯಬಾರದು. ಎಸ್​.ಎಸ್​.ಸಿ ಪರೀಕ್ಷೆಗಳಿಂದ ರಕ್ಷಣಾ ಇಲಾಖೆಗೆ ಸಂಬಂಧಿಸಿದ ಹಲವು ಅಧಿಕಾರಿ ಹುದ್ದೆಗಳನ್ನು ಪಡೆಯಬಹುದು. ಈ ನಿಟ್ಟಿನಲ್ಲಿ ಯುವಜನರು ಗಮನಹರಿಸಬೇಕು ಎಂದರು.