ಶಿಕಾರಿಪುರ: ಕನ್ನಡ ಭಾಷೆಯೇ ಅದ್ಭುತ. ಅದು ಹಾಲು ಜೇನಿನ ಮಿಶ್ರಣದಂತೆ ಅತಿ ಮಧುರ. ಅದು ಸುಮಧುರ ಮತ್ತು ಸುಲಲಿತ ಸುಂದರವಾದ ಭಾಷೆ. ನಾವು ಕನ್ನಡಿಗರು ಎನ್ನುವುದೇ ನಮಗೆ ಹೆಮ್ಮೆಯ ಸಂಗತಿ ಎಂದು ಸಮ್ಮೇಳನದ ಸರ್ವಾಧ್ಯಕ್ಷೆ ಹೇಮಾ ಬಣಕಾರ್ ಹೇಳಿದರು.
ಪಟ್ಟಣದ ಅಕ್ಷರ ವಸತಿ ಶಾಲೆಯಲ್ಲಿ ಜಾನಪದ ಪರಿಷತ್, ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ತಾಲೂಕು ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಆಯೋಜಿಸಿದ್ದ 9ನೇ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ದೈನಂದಿನ ಕಾರ್ಯಗಳಲ್ಲಿ ಕನ್ನಡ ಭಾಷೆ ಅಭಿವೃದ್ಧಿಗೆ ಶ್ರಮಿಸಬೇಕು. ಎರಡು ಸಾವಿರ ವರ್ಷಗಳಷ್ಟು ಹಳೆಯದಾದ ಕನ್ನಡ ಸರ್ವರೂ ಪ್ರೀತಿಸುವ, ಆರಾಧಿಸುವ ಅತ್ಯಂತ ಶ್ರೇಷ್ಠ ಭಾಷೆ ಎಂದರು.
ಈ ಭಾಷೆಯ ಖದರು ಎಷ್ಟಿದೆಯೆಂದರೆ ಎಂಟು ಜ್ಞಾನಪೀಠ ಪ್ರಶಸ್ತಿಗಳನ್ನು ಕನ್ನಡ ತನ್ನ ಮುಡಿಗೇರಿಸಿಕೊಂಡಿದೆ. ಮನೆ ಮನೆಗಳಲ್ಲಿ ಕನ್ನಡ ಸಾಹಿತ್ಯದ ಪುಸ್ತಕಗಳಿರಬೇಕು. ಮನ ಮನಗಳಲ್ಲಿ ಕನ್ನಡ ರಾರಾಜಿಸುತ್ತಿರಬೇಕು. ಕನ್ನಡದ ಮಣ್ಣೆಂದರೆ ಪುಣ್ಯದ ಮಣ್ಣು, ಸ್ವಾಭಿಮಾನ, ಶೌರ್ಯ ಸಾಹಸಗಳ ಮತ್ತು ಅಧ್ಯಾತ್ಮ ದ ಗಂಗೆ ಹರಿದಾಡಿದ ಮಣ್ಣು ಎಂದು ಹೇಳಿದರು.
ಶಿಕ್ಷಣದಲ್ಲಿ ಇಂಗ್ಲಿಷ್ ಮಾಧ್ಯಮವಾಗಿ ಜನರನ್ನು ಆಕರ್ಷಿಸಿದೆ. ಅದರಂತೆಯೇ ನಮ್ಮ ಜೀವನಕ್ಕೆ ಕನ್ನಡದೊಂದಿಗೆ ಇಂಗ್ಲಿಷ್, ಹಿಂದಿ ಮತ್ತಿತರ ಭಾಷೆಗಳು ಮುಖ್ಯ. ಇದು ಕನ್ನಡಕ್ಕೆ ಮೆಟ್ಟಿಲಾಗಬೇಕೇ ಹೊರತು ಕನ್ನಡಕ್ಕೆ ಯಾವ ಕಾರಣಕ್ಕೂ ಹಿನ್ನಡೆ ಆಗಬಾರದು. ಇಂಗ್ಲಿಷ್ ಭಾಷೆ ಜಗತ್ತಿನ ಸಂವಹನ ಭಾಷೆಯಾಗಿದ್ದು, ಕನ್ನಡಕ್ಕೆ ಧಕ್ಕೆಯಾಗದಂತೆ ಬಳಸಬೇಕು ಎಂದು ಹೇಳಿದರು.
ಕನ್ನಡ ಸಾಹಿತ್ಯವನ್ನು ಹೆಚ್ಚಾಗಿ ಓದಬೇಕು, ಕನ್ನಡದ ಹಿರಿಯ ಕವಿಗಳ ಬದುಕು ಬರಹ ನಮಗೆ ಸದಾ ಮಾದರಿಯಾಗಬೇಕು. ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ, ಕನ್ನಡ ಸಾಹಿತ್ಯ ಪರಿಷತ್ತುಗಳು ಮತ್ತು ಕನ್ನಡ ಪರ ಸಂಘಟನೆಗಳು ಕನ್ನಡವನ್ನು ಉಳಿಸಿ ಬೆಳೆಸುವ ಕೆಲಸ ಮಾಡುತ್ತಿವೆ. ಕನ್ನಡ ಪರಿಸರವನ್ನು ನಿರ್ಮಿಸುತ್ತಿದ್ದು, ಕನ್ನಡಿಗರಲ್ಲಿ ಜಾಗೃತಿ ಮೂಡಿಸುತ್ತಿವೆ. ನಿರಂತರವಾಗಿ ನಡೆಯುತ್ತಿರುವ ಕನ್ನಡ ಚಳುವಳಿಗಳ ಪರಿಣಾಮವಾಗಿ ಇಂದು ಕನ್ನಡ ಭಾಷೆ ಉಳಿದಿದೆ ಎಂದು ಹೇಳಿದರು.
ಇಂದು ನಮ್ಮ ಕಣ್ಮುಂದೆ ಇರುವ ಮಕ್ಕಳು ನಾಳಿನ ಭವಿಷ್ಯದ ನಿರ್ಮಾತೃಗಳು. ಅವರಿಗೆ ಬಾಲ್ಯದಿಂದಲೂ ಕನ್ನಡದ ಅರಿವು ಮೂಡಿಸಬೇಕು. ಪರಭಾಷೆಯ ಬಗ್ಗೆ ಗೌರವವಿರಲಿ. ಆದರೆ ಕನ್ನಡಿಗರಾದ ನಮಗೆ ಕನ್ನಡವೇ ಶ್ರೇಷ್ಠ. ರಾಷ್ಟ್ರಕವಿ ಕುವೆಂಪು ಅವರ ಆಶಯದಂತೆ ನಾವು ಕನ್ನಡಕ್ಕಾಗಿ ಕೈ ಎತ್ತಬೇಕು. ಕನ್ನಡವನ್ನು ಉಳಿಸಿ ಬೆಳೆಸುವ ಹೊಣೆ ನಮ್ಮದಾಗಿದೆ ಎಂದು ಹೇಳಿದರು.
ಇಂಗ್ಲಿಷ್ ಭಾಷೆ ಕನ್ನಡದ ಮೇಲಷ್ಟೇ ಅಲ್ಲ, ನಮ್ಮ ನಡೆ ನುಡಿ, ಆಚಾರ ವಿಚಾರ ಮತ್ತು ಜೀವನಶೈಲಿಯ ಮೇಲೂ ಗಾಢವಾದ ಪ್ರಭಾವ ಬೀರುತ್ತಿದೆ. ಕನ್ನಡದ ಭಾವ ಬೆಸೆಯುವ ಕಾರ್ಯ ಹೆಚ್ಚಾಗಬೇಕು. ಕನ್ನಡದ ಜೀವ ನಮ್ಮದಾಗಬೇಕು. ಇಂತಹ ಸಮ್ಮೇಳನಗಳು ನಮಗೆ ನೀಡುವ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡು ಬೆಳೆಯಬೇಕು. ಅವಕಾಶ ವಂಚಿತ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಇದೊಂದು ಸೂಕ್ತ ವೇದಿಕೆಯಾಗಿದೆ. ನಡೆ ಕನ್ನಡ, ನುಡಿ ಕನ್ನಡ, ತನು ಕನ್ನಡ, ಮನ ಕನ್ನಡವಾಗಬೇಕು ಎಂದರು.
ಶಿಕಾರಿಪುರ ಕನ್ನಡಿಗರಾದ ನಾವು ಸದಾ ಸ್ಮರಿಸಬೇಕಾದ ತಾಲೂಕು. ಹಲವು ಪ್ರಥಮಗಳನ್ನು ತನ್ನೊಡಲಲ್ಲಿ ತುಂಬಿಕೊಂಡ ಶರಣರ ನಾಡು. ಒಂದರ್ಥದಲ್ಲಿ ಶಿಕಾರಿಪುರ ತಾಲೂಕು ಶಾಸನಗಳ ಕಣಜ. ಇಲ್ಲಿನ ಸಂಸ್ಕೃತಿ, ಶಿಕ್ಷಣ, ಕಲೆ, ಸಾಹಿತ್ಯ, ಧಾರ್ಮಿಕ ಪರಂಪರೆಗಳು ಸಾಮಾಜಿಕ ಕಳಕಳಿ ಅನಂತ ಎಂದರು.
ಸಮ್ಮೇಳನದ ಮಾಜಿ ಅಧ್ಯಕ್ಷೆ ಎಚ್.ಎಲ್.ಖುಷಿ ಉದ್ಘಾಟಿಸಿದರು. ತಾಲೂಕು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಕೆ.ಎಸ್.ಹುಚ್ರಾಯಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ತಹಸೀಲ್ದಾರ್ ಮಲ್ಲೇಶ್ ಬಿ.ಪೂಜಾರ್, ಜಿಲ್ಲಾ ಕಸಾಪ ಅಧ್ಯಕ್ಷ ಡಿ.ಮಂಜುನಾಥ್, ಕೇಂದ್ರ ಮಕ್ಕಳ ಸಾಹಿತ್ಯ ಅಕಾಡೆಮಿ ಪುರಸ್ಕೃತ ಡಾ.ಹಾಫೀಜ್ ಕರ್ನಾಟಕಿ, ತಹಸೀಲ್ದಾರ್ ಮಲ್ಲೇಶ್ ಬಿ.ಪೂಜಾರ್, ಜಾನಪದ ಪರಿಷತ್ ತಾಲೂಕು ಅಧ್ಯಕ್ಷ ಬಿ.ಪಾಪಯ್ಯ, ತಾಲೂಕು ಕಸಾಪ ಅಧ್ಯಕ್ಷ ಎಚ್.ಎಸ್.ರಘು, ಅಕ್ಷರ ಸಂಸ್ಥೆ ಸಂಸ್ಥಾಪಕ ರವಿಕುಮಾರ್, ಕಾರ್ಯದರ್ಶಿ ಮಮತಾ, ದೈಹಿಕ ಶಿಕ್ಷಣಾಧಿಕಾರಿ ಶಿವಮೂರ್ತಿ, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಎಲ್.ರಾಜು ಇತರರಿದ್ದರು.